ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ - ಭಾಗ 35. ಅಧ್ಯಾಯ 12 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಬಂದಿರುವುದು ತನ್ನ ಬಾಸ್ ನಿಖಿಲ್ ಎಂದು ತಿಳಿದಾಗ ಎದ್ದು ನಿಲ್ಲುವ ಪ್ರಯತ್ನ ಮಾಡಿದಳಾದರೂ ಆತ ಕುಳಿತುಕೊಳ್ಳುವಂತೆ ಸೂಚಿಸಿದ. ಅಶುತೋಶ್ ನಿಖಿಲ್ನಿಗೆ ಕುಳಿತುಕೊಳ್ಳಲು ಪಕ್ಕದಲ್ಲಿದ್ದ ಚೇರನ್ನು ಸರಿಸಿದ.ನಿಖಿಲ್ ಅದನ್ನು ಯಥಾಸ್ಥಾನಕ್ಕೆ ತಳ್ಳಿ ನಿಂತೇ ಇದ್ದ. ಯಾವತ್ತೂ ಇನ್ನೊಬ್ಬರ ಕ್ಯಾಬಿನ್ಗೆ ಹೋದವನಲ್ಲ. ಅಂತಹ ಅಗತ್ಯವಿದ್ದರೆ ಸಂಬಂಧಪಟ್ಟವರನ್ನು ಕರೆಸುತ್ತಿದ್ದ. ಅಶುತೋಶ್ ಆತನತ್ತ ನೋಡಿದ. ಆತನ ದೃಷ್ಟಿ ಮನಸ್ವಿತಾಳ ಕಡೆಗಿತ್ತು. ಅವಳಾದರೂ ತಲೆ ತಗ್ಗಿಸಿದಂತೆ ಕುಳಿತಿದ್ದಳು. ಅಶುತೋಶ್ಗೆ ಆಶ್ಚರ್ಯವಾಯಿತು. ಈಗಷ್ಟೇ ತನ್ನ ಜೊತೆಗೆ ಮಾತಿನ ಚಕಮಕಿ ನಡೆಸಿದ ಹುಡುಗಿ ಇವಳೇನಾ? ಅನಿಸಿತು. ಅದರಲ್ಲಿಯೇ ಅವಳು ತನ್ನ ಬಾಸ್ಗೆ ಕೊಡುವ ಮರ್ಯಾದೆಯನ್ನು ಲೆಕ್ಕ ಹಾಕಿಕೊಂಡು ತುಟಿಯಂಚಿನಲ್ಲಿಯೇ ನಕ್ಕ. ಮನಸ್ವಿತಾ ತಟ್ಟನೆ ತಲೆ ಎತ್ತಿದಳು. ಅವನ ನಗುವಿನ ಅರ್ಥ ತಿಳಿಯಲಿಲ್ಲ.

ಅಶುತೋಶ್, ನಿಖಿಲ್, ನಿನ್ನ ಸಿಬಂದಿಗಳೆಲ್ಲಾ ಶಿಸ್ತಿನ ಸಿಪಾಯಿಗಳು. ಮಾತು ಕಡಿಮೆಯಂತೀನಿ ಸುಮ್ಮನೆ ಅವಳನ್ನು ಕೆಣಕುವಂತೆ ಹೇಳದಿದ್ದರೂ ಅನಗತ್ಯ ತನ್ನನ್ನು ಮಾತಿಗೆ ಎಳೆಯಲು ಆತ ಪೀಠಿಕೆ ಹಾಕುತ್ತಿದ್ದಾನೆ ಅನಿಸಿತು. ಅವಳು ನೇರವಾಗಿ ನಿಖಿಲ್ನನ್ನು ನೋಡಿದಳು.
ಹಾಗೇನಿಲ್ಲ, ಹಾಗಿರುತ್ತಿದ್ದರೆ ನಿಖಿಲ್ ಎಂಟರ್ಪ್ರೈಸೆಸ್ ಈ ಹೊತ್ತಿಗೆ ಇಷ್ಟು ಎತ್ತರಕ್ಕೆ ಎರ್ತಾ ಇರ್ಲಿಲ್ಲ. ಅನಗತ್ಯ ಯಾರೂ ಮಾತಾಡೋದಿಲ್ಲ ನಿಖಿಲ್ ಅವಳನ್ನು ಹೊಗಳಿದಂತೆ ನುಡಿದಾಗ ಮನಸ್ವಿತಾಳಿಗೆ ಹೆಮ್ಮೆಯೆನಿಸಿತು.

ಗೌರವದಿಂದಲೇ ಆತನೆಡೆಗೆ ನೋಡಿದಳು. ನಿಖಿಲ್ಗೆ ಆ ನೋಟದಲ್ಲಿರುವ ಭಾವನೆಗಳೂ ಒಂದೇ ಆಗಿ ಕಂಡರೂ ಅವನ ಮನದಲ್ಲಿರುವ ಪ್ರೀತಿಯ ರಾಗಕ್ಕೆ ಶೃತಿ ಸೇರಿದಂತಾಯಿತು.ಎಸ್, ಯು ಆರ್ ಕರೆಕ್ಟ್. ನಿನ್ನ ವ್ಯವಹಾರದ ಮುನ್ನಡೆಯಲ್ಲಿ ಶೃಂಗ ಬಿಂಧುಗಳು ಶಿಸ್ತನ್ನು ಕಾಪಾಡ್ತಾ ಇರೋದು ನಿನಗೊಂದು ಹೆಗ್ಗಳಿಕೆ ಅಶುತೋಶ್ ಎದ್ದು ನಿಂತ. ಅವನ ಮಾತಿನ ಎಳೆಯಲ್ಲಿ ಸಣ್ಣದೊಂದು ನೋವಿನ ತರಂಗವಿದ್ದುದು ತಿಳಿಯಿತು. ಮನಸ್ವಿತಾ ತಾನೂ ಎದ್ದು ನಿಂತಳು. ಏನೊ ಸಾಂತ್ವನದ ಮಾತುಗಳನ್ನು ಹೇಳಬೇಕೆನ್ನುವ ತುಡಿತವಿದ್ದರೂ ನಿಖಿಲ್ನ ಎದುರಿಗೆ ಬೇಡವೆನಿಸಿತು. ಉದ್ವೇಗವನ್ನು ತಡೆದುಕೊಂಡು ಹಾಗೇ ನಿಂತಳು.

ಯಸ್, ಮನಸ್ವಿತಾ ಮತ್ತೊಮ್ಮೆ ಎಂದಾದರೂ ಭೇಟಿಯಾಗೋಣ ಬಾಗಿಲು ತೆರೆದು ಅಶುತೋಶ್ ನಿಂತಾಗ ನಿಖಿಲ್ ನಗು ಸೂಸಿ ಹೊರಗೆ ಬಂದ. ಅವರು ಹೋದ ಬಳಿಕ ಎಷ್ಟೊ ಹೊತ್ತು ಅವಳು ಹಾಗೇ ನಿಂತಿದ್ದಳು.
ಮನದ ಭಾವನೆಗಳೆನ್ನೆಲ್ಲಾ ನಿಂತ ಕೊಳಕ್ಕೆ ಕಲ್ಲು ಎಸೆದು ಕದಡಿದಂತೆ ಮಾಡಿದ್ದ ಅಶುತೋಶ್. ಇಲ್ಲಿಯವರೆಗೂ ಇ-ಮೇಲ್ ಕಳುಹಿಸುತಿದ್ದು ಆತನೇ ಅನ್ನುವುದು ಸುಳ್ಳಾಯಿತು. ಹಾಗಾದರೆ ಆ ಕೃತ್ಯ ಯಾರದಾಗಿರಬಹುದು? ತನ್ನನ್ನು ಪ್ರೀತಿಯಿಂದ ಆಹ್ವಾನಿಸಿದ ನಿಖಿಲ್ನೆ ಆಗಿರಬಹುದಲ್ಲವೇ? ಇರಲಿ, ತಾನು ಹೇಗೂ ಎಥಿಕಲ್ ಹ್ಯಾಕಿಂಗ್ ಬಗ್ಗೆ ಕಲಿಯುತ್ತಿರುವುದರಿಂದ ಸುಲಭದಲ್ಲಿ ಪತ್ತೆ ಹಚ್ಚಬಹುದೆನಿಸಿತು.

ಆ ಸಂಜೆ ಕಂಪ್ಯೂಟರ್ನ ಮುಂದೆ ಕುಳಿತು ಬಹಳ ಹೊತ್ತು ಅದರ ಟೆಕ್ನಿಕ್ಗಳನ್ನು ಕಲಿತಳು. ತನಗೆ ಬಂದಿರುವ ಮೇಲ್ನಲ್ಲಿ ಅರವಿಂದನ ಮೇಲ್ ತೆರೆದು ಅದರ ಯುಆರ್ಎಲ್ ಅನ್ನು ಗಮನವಿರಿಸಿ ಅದರೊಳಗೆ ಇಳಿಯುವುದನ್ನು ಅಭ್ಯಸಿಕೊಂಡಳು. ಬಹಳಹೊತ್ತು ಜಾಲಾಡಿಸಿದ ಬಳಿಕ ತಾನು ಹ್ಯಾಕಿಂಗ್ ನಡೆಸುತ್ತಿರುವ ಪಿಸಿಯ ಬಗ್ಗೆ ಕೆಲವೊಂದು ಮಾಹಿತಿಗಳು ದೊರೆತವು. ಅದು ಅರವಿಂದ್ ಅನ್ನುವ ವ್ಯಕ್ತಿಗೆ ಸಂಬಂದಪಟ್ಟ ಪಿಸಿ ಮತ್ತು ಆತನ ಡೆಸ್ಕ್ ಟಾಪ್ನ ಪರದೆಯ ಮೇಲೆ ಸುಂದರ ಯುವಕನ ಭಾವಚಿತ್ರವಿರುವುದನ್ನು ಗಮನಿಸಿದಳು. ಆ ಫೋಟೊದಲ್ಲಿರುವ ವ್ಯಕ್ತಿಯೇ 'ಅರವಿಂದ್' ಹಾಗಾಗಿ ಅಶುತೋಶ್ ಆಗಲಿ ನಿಖಿಲ್ ಆಗಲಿ ಇ-ಮೇಲ್ ಕಳುಹಿಸುತ್ತಿದ್ದುದಲ್ಲವೆನ್ನುವುದು ದೃಢವಾಯಿತು.

ಕೂಡಲೇ ಎಥಿಕಲ್ ಹ್ಯಾಕಿಂಗ್ನಿಂದ ಹೊರಗೆ ಬಂದು ಮೆನು ಕಮಾಂಡ್ನಿಂದ ರನ್ ಕಮಾಂಡ್ ಕೊಟ್ಟು ಟೆಂಪರರಿ ಫೈಲ್ಗಳನ್ನು ನೋಡುತ್ತಾ ಕ್ಲಿಕ್ ಮಾಡಿದ ಕೂಡಲೇ ಇಂಟರ್ನೆಟ್ ಟೆಂಪರರಿ ಫೋಲ್ಡರ್ ಕಾಣಿಸಿತು. ಅದನ್ನು ತೆರೆದಾಗ ಜಿಪಿಜಿಯಲ್ಲಿ 'ಅರವಿಂದ್'ನ ಪೋಟೊ ಸೇವಾಗಿರುವುದು ಕಾಣಿಸಿತು. ಅದನ್ನು ಮೈ ಪಿಕ್ಚರ್ಸ್ಗೆ ಸೇರಿಸಿ ಗೆಲುವು ಸಾಧಿಸಿದಂತೆ ನಿಟ್ಟುಸಿರಿಟ್ಟಳು.

ಅನಂತರ ಅರವಿಂದನಿಂದ ಬರುವ ಇ-ಮೇಲ್ಗಳು ಬರಬರುತ್ತಾ ಕಡಿಮೆಯಾದವು. ಆದರೂ ಅವಳು ತನಗೇನು ತಿಳಿದೇ ಇಲ್ಲವೆನ್ನುವಂತೆ ಮೇಲ್ಗೆ ಉತ್ತರಿಸುತ್ತಿದ್ದಳು. ಆಶ್ಚರ್ಯವೆಂಬಂತೆ ಅವನಿಂದ ಉತ್ತರ ಬಂದಿತ್ತು. ಅದನ್ನು ಓದಿದ ಬಳಿಕ ಬಹಳ ಖಿನ್ನಳಾಗಿದ್ದಳು. ಅರವಿಂದ್ ಅಪಾಯದಲ್ಲಿರುವ ಸೂಚನೆಯಿತ್ತು. ಆ ತೊಂದರೆ ಏನೆಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಏನಾದರೂ ಅಪಘಾತವಾಗಿರಬಹುದೆ? ಅಥವಾ ಯಾವುದಾದರೂ ದೀರ್ಘವಾದ ಸಮಸ್ಯೆಯಲ್ಲಿ ಮುಳುಗಿರಬಹುದೆ? ತಿಳಿಯಲಿಲ್ಲ. ಏನಾದರೆ ತನಗೇನು ಎಂಬ ನಿರ್ಲಕ್ಷಿತ ಮನೋಭಾವದಿಂದ ಕುಳಿತರೂ ಅವಳಿಗೆ ಸಮಾಧಾನವೆನಿಸಲಿಲ್ಲ. ಅವನಿಗೆ ಸಮಾಧಾನಿಸಲೆಂದು ಒಂದು ಮೇಲ್ ಕಳುಹಿಸಿದರೆ ಹೇಗೆ ಅನಿಸಿತು.
ಲ್ಯಾಪ್ ಟಾಪ್ ತೆರೆದು ಮೊಡೆಮ್ಗೆ ಕನೆಕ್ಟ್ ಮಾಡುವಷ್ಟರಲ್ಲಿ ಚಾರ್ಜ್ ಇಲ್ಲವೆನ್ನುವಂತೆ ಸೂಚನೆ ಬಂತು. ತಟ್ಟನೆ ಕಂಪ್ಯೂಟರ್ ಆಫ್ ಮಾಡಿದಳು.

***

ಶ್ರೀನಿವಾಸರಾಯರು ಅಂಗಡಿ ಮುಚ್ಚಿ ಮನೆಗೆ ಬರುವಾಗ ರಾತ್ರಿ ಎಂಟು ಗಂಟೆಯಾಗಿರುತ್ತಿತ್ತು. ಆದರೆ ಆ ದಿನ ಅರ್ಧ ಗಂಟೆ ಮೊದಲೆ ಬಂದಾಗ ಅವರೊಬ್ಬರೆ ಇರಲಿಲ್ಲ. ಜೊತೆಗೆ ಒಂದು ಸಣ್ಣ ಸಂಸಾರವೇ ಬಂದ ಹಾಗಿತ್ತು. ಮನಸ್ವಿತಾ ತನ್ನ ಕೆಲಸಗಳನ್ನು ಮುಗಿಸಿ ಕೈಯಲ್ಲೊಂದು ಪತ್ರಿಕೆ ಹಿಡಿದಿದ್ದಳು. ಮನೆಗೆ ಬಂದ ಅತಿಥಿಗಳನ್ನು ಎದುರುಗೊಳ್ಳುವಂತೆ ಭಾಮಿನಿಯವರು ಹೊರಗೆ ಬಂದಾಗ ಶ್ರೀನಿವಾಸರು, ಹೊಸನಗರದ ನವೀನರಾಯರೂಂತ ಹೇಳ್ತಿದಿನಲ್ಲಾ... ಅವರು ಬಂದಿದ್ದಾರೆ. ಯಾರು ಗೊತ್ತಾಯ್ತ ನಿನ್ನ ಸೋದರತ್ತೆ ಪ್ರಭಾಮಣಿಂತ ಇರ್ಲಿಲ್ವಾ ಅವರ ಗಂಡನ ತಮ್ಮ ಕಣೆ ಮಡದಿಗೆ ಪರಿಚಯ ಮಾಡುವಷ್ಟರಲ್ಲಿ ಅತಿಥಿಗಳು ಚಪ್ಪಲಿಯನ್ನು ಹೊರಗೆ ಬಿಟ್ಟು ಮನೆಯನ್ನೆಲ್ಲಾ ಅಳೆಯುವಂತೆ ಕಣ್ಣಾಡಿಸಿದರು.
ಭಾಮಿನಿಯವರು ಅವರನ್ನು ಸ್ವಾಗುತಿಸುವಂತೆ ಮುಂದೆ ಬಂದು, ಬನ್ನಿ ಕುಳಿತುಕೊಳ್ಳಿ ಅಂದರು.

ಬಂದವರು ತಮ್ಮ ಹತ್ತಿರದ ಬಂಧುಗಳು ಅಂದಾಗ ಅವರಿಗೆ ತುಸು ಹೆಚ್ಚೆ ಅಭಿಮಾನವಾಯಿತು. ನವೀನರಾಯರು ಚೇರ್ನಲ್ಲಿ ಕುಳಿತುಕೊಂಡು, ಇವಳು ನನ್ನ ಹೆಂಡ್ತಿ, ರಮಣೀಂತ. ಇವಳು ಕಿರಿಯವಳು ಮಗಳು ನಯನ. ಇನ್ನೊಬ್ಬ ದೊಡ್ಡವನು ಮಗ ರಾಧೇಶ. ಅಲ್ಲೇ ಹೊಸನಗರದಲ್ಲಿಯೆ ಹೈಸ್ಕೂಲ್ ಮೇಸ್ಟ್ರಾಗಿದ್ದಾನೆ ತನ್ನ ಸಂಸಾರದ ಪುಟ್ಟ ಪರಿಚಯ ಮಾಡಿಕೊಂಡಾಗ ನಗುಮುಖದಿಂದಲೇ ಕೈ ಮುಗಿದು ಒಳಗೆ ನಡೆದರು.
ತನ್ನ ಕೋಣೆಯಲ್ಲಿಯೇ ಕುಳಿತು ಇದನ್ನೆಲ್ಲಾ ಕೇಳಿಸಿಕೊಂಡ ಮನಸ್ವಿತಾಳಿಗೆ ಹೊರಗೆ ಬರಬೇಕೆನಿಸಲಿಲ್ಲ. ಅವಳನ್ನು ಯಾರೂ ಕರೆಯಲೂ ಇಲ್ಲ. ಬಂದ ಅತಿಥಿಗಳಿಗೆ ಮನೆಯಲ್ಲಿ ಇನ್ನೂ ಒಬ್ಬರು ಇದ್ದಾರೆನ್ನುವ ಕಲ್ಪನೆಯೂ ಇರಲಿಕ್ಕಿಲ್ಲ.

ಅಷ್ಟು ಹೊತ್ತಿಗೆ ಶ್ರೀನಿವಾಸರಾಯರು ಕೈಕಾಲು ಮುಖ ತೊಳೆದುಕೊಂಡು ಬಂದವರೆ, ಮಗ ಏನು ಮಾಡ್ಕೊಂಡಿದ್ದಾನೆ? ವಯಸ್ಸೆಷ್ಟು? ಎಂದು ಬಹಳ ಉತ್ಸಾಹದಿಂದ ಕೇಳುವಾಗ ಮನಸ್ವಿತಾಳ ಮೈಯೆಲ್ಲಾ ಉರಿದು ಹೋಯಿತು.
ಯಾವ ಸಂಬಂಧಗಳನ್ನು ಹತ್ತಿರ ಸೇರಿಸದ ತಂದೆ ಇದ್ದಕ್ಕಿಂದಂತೆ 'ಸಂಬಂಧಿಕರು' ಅಂತ ಯಾರ್ಯಾರನ್ನೊ ಮನೆಗೆ ಕರೆ ತಂದಿದ್ದು ಅವಳಿಗೆ ಸುತಾರಾಂ ಇಷ್ಟವಿರಲಿಲ್ಲ. ಈಗ ಅವರುಗಳೆನ್ನೆಲ್ಲಾ ಕರೆತರುವ ಉದ್ದೇಶವೇನೆಂದು ತಿಳಿಯಿತು.

ನವೀನರಾಯರು ತಮ್ಮ ಮಗನ ಬಗ್ಗೆ ಅಭಿಮಾನದಿಂದ ಮತ್ತೊಮ್ಮೆ ಹೇಳಿಕೊಂಡಾಗ ಶ್ರೀನಿವಾಸರಾಯರು ಮನಸ್ವಿತಾಳ ಕೋಣೆಯತ್ತ ನೋಡಿದರು. ಆದರೆ ಸಂಬಂಧಗಳ ವಿಷಯವಾಗಿ ಮಾತನಾಡುವುದು ಅವಳಿಗೆ ಇಷ್ಟವಿಲ್ಲದ ವಿಷಯವೆಂದು ತಿಳಿದವರು ಅವಳು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕೆಂದು ನಿರ್ಧರಿಸಿದರು.

ಭಾಮಿನಿಯವರು ಬಂದ ಅತಿಥಿಗಳನ್ನು ಸತ್ಕರಿಸುವಂತೆ ನೀರು ಬೆಲ್ಲದ ತಟ್ಟೆಯನ್ನು ತಂದು ಅವರ ಎದುರಿಗೆ ಇಟ್ಟಾಗ ಅತಿಥಿ ಸತ್ಕಾರದ ಮರ್ಯಾದೆಯೆಂಬಂತೆ ಶಾಸ್ತ್ರಕ್ಕೆ ನೀರನ್ನು ಒಂದು ಲೋಟಕ್ಕೆ ಸುರಿದು ಕುಡಿದರು. ನಯನ ಸುತ್ತಲೂ ಕಣ್ಣಾಡಿಸಿದರೆ ರಮಣೀಯವರು ಭಾಮಿನಿಯವರನ್ನೇ ಅಡಿಯಿಂದ ಮುಡಿಯವರೆಗೆ ಅಳೆಯುತ್ತಿದ್ದರು.

ತಾಯಿ, ನಿಮ್ಗೆ ತೊಂದ್ರೆ ಕೊಡ್ತಾ ಇದ್ದೀವೇನೊ? ಬೆಳಗ್ಗೆ ಬೇಗ ಹೊರಟ್ರೂ ಇಲ್ಲಿ ತಲುಪವಷ್ಟರಲ್ಲಿ ಕತ್ತಲೆ ಆಗೋಯ್ತು. ಕೊನೆಗೆ ಅಂಗಡಿ ಹತ್ರ ಮಾತಾಡ್ತಾ ನಿಂತೆವು ಕ್ಷಮಾಪಣೆಯ ದೃಷ್ಟಿಯಲ್ಲದಿದ್ದರೂ ತಮ್ಮಿಂದಾಗಿ ಅವರಿಗೆಲ್ಲಾ ತೊಂದರೆಯಾಯಿತು ಅನ್ನುವ ಮಾನವೀಯತೆಯ ದೃಷ್ಟಿಯಿಂದ ಹೇಳಿದಾಗ, ಛೇ! ಛೇ! ಅದ್ರಲ್ಲೇನು ತೊಂದರೆ. ನೀವು ಬಂದಿರೋದೇ ನಮಗೆ ಖುಷಿ ಅಂದರು ಭಾಮಿನಿಯವರು.

ಇತ್ತೀಚಿನ ದಿನಗಳಲ್ಲಿ ಮನೆಗೆ ಯಾರು ಬರುತ್ತಿರಲಿಲ್ಲವಾದ್ದರಿಂದ ಅವರಿಗೆ ಅತಿಥಿಗಳ ಆಗಮನ ಸಮಾಧಾನ ತಂದಿತ್ತು. ಇದರಿಂದಾಗಿ ತಮ್ಮ ಮಗಳಿಗೆ ಸಂಬಂಧಗಳಾದರೂ ಬರಲಿ ಅನ್ನುವ ಸ್ವಾರ್ಥವೂ ಇತ್ತು. ಅವರು ಒಳಗೆ ನಡೆದವರೆ ರಾತ್ರಿಯ ಊಟಕ್ಕೆ ತಯಾರಿ ನಡೆಸಬೇಕಿತ್ತು. ಅವರು ಒಳಗೆ ನಡೆದಾಗ ರಮಣೀಯವರು ಅವರನ್ನು ಹಿಂಬಾಲಿಸಿ ಬಂದವರೇ, ಏನು ವಿಶೇಷ ಮಾಡ್ಬೇಡಿ. ನೀವು ಊಟ ಮಾಡುವುದನ್ನೇ ನಮಗೆ ಹಾಕಿದ್ರಾಯಿತು ಅಂದರು.

ನವೀನರಾಯರಿಗೆ ತಾವು ಬಂದ ಉದ್ದೇಶವನ್ನು ಪ್ರಸ್ತಾಪಿಸುವುದು ಹೇಗೆಂದು ತಿಳಿಯದೆ ಚಡಪಡಿಸುತ್ತಿರುವಾಗಲೇ ಶ್ರೀನಿವಾಸರಾಯರು ಹೇಗೆ ಈ ಸಂಬಂಧವನ್ನು ಗಟ್ಟಿಗೊಳಿಸುವುದೆಂದು ಲೆಕ್ಕ ಹಾಕುತ್ತಿದ್ದರು.
ಕೊನೆಗೆ ನವೀನರಾಯರೆ, ನಿಮ್ಮ ಮಗಳು ಇನ್ನೂ ಬಂದಿಲ್ಲಾನ್ಸುತ್ತೆ ಅಂದಾಗ ಶ್ರೀನಿವಾಸರಾಯರು ಮಗಳ ಕೋಣೆಯತ್ತ ಒಮ್ಮೆ ದೃಷ್ಟಿ ಹಾಯಿಸಿ ಅವಳು ಬಂದಿರುವುದನ್ನು ದೃಢಪಡಿಸಿಕೊಂಡು, ಬಂದಿದ್ದಾಳೆ, ಒಳಗೆ ಕೋಣೆಯಲ್ಲಿರಬೇಕು ಅಂದರು.
ಹಾಗಾದರೆ ನಮ್ಮ ನಯನನಿಗೊಂದು ಕೆಲಸ ಮಾಡಿಕೊಡ್ಬೇಕು ರಾಯರೇ ಅಂದರು ಧೀನತೆಯಿಂದ. ಅಲ್ಲಿಯವರೆಗೂ ಒಳಗೆ ಕುಳಿತಿದ್ದ ಮನಸ್ವಿತಾ ಹೊರಗೆ ಬಂದಾಗ ನವೀನರಾಯರು ಎದ್ದು ಕೈ ಮುಗಿದರೆ ನಯನ ಕೂಡ ಎದ್ದು ನಿಂತಾಗ ಅವಳಿಗೆ ಮುಜುಗರವೆನಿಸಿತು. ಆಫೀಸನಲ್ಲಿಯ ವಾತಾವರಣವನ್ನು ಮನೆಯಲ್ಲಿ ಬಯಸಲಾರಳು.

ಶ್ರೀನಿವಾಸರಾಯರು ಮಗಳ ಮುಂದೆ ಅವರುಗಳು ಬಂದ ವಿಷಯವನ್ನು ಪ್ರಸ್ತಾಪಿಸಲಾರರು. ನವೀನರಾಯರು ಅವರ ಮುಖವನ್ನೊಮ್ಮೆ ದಿಟ್ಟಿಸಿದಾಗ ಕಣ್ಣಲೇ ಏನೋ ಸನ್ನೆ ಮಾಡಿದರು. ಅವರಿಗೂ ಕೇಳುವ ಧೈರ್ಯವಿರಲಿಲ್ಲ. ಮನಸ್ವಿತಳಿಗೂ ಅಲ್ಲಿ ನಿಲ್ಲುವುದು ಸರಿಯೆನಿಸಲಿಲ್ಲ. ನೇರವಾಗಿ ಅಡುಗೆ ಮನೆಗೆ ಬಂದಾಗ ರಮಣೀಯವರು ಬಾಗಿಲಲ್ಲಿ ನಿಂತಿದ್ದವರು ಅವಳನ್ನು ನೋಡುತ್ತಲೇ ಒಂದು ಕ್ಷಣ ಮೂಕ ವಿಸ್ಮಿತರಾದರು. ತಮ್ಮ ನಿರೀಕ್ಷೆ ಮೀರಿದ ವ್ಯಕ್ತಿತ್ವ ಅವಳದೆನಿಸಿತು. ಜೊತೆಗೆ ಸ್ವಾಭಾವಿಕ ಚೆಲುವು. ಸಂಬಂಧಗಳು ಕುದುರದಿದ್ದರೂ ನಯನಳಿಗೊಂದು ಕೆಲಸ ಗಿಟ್ಟಿಸಿಕೊಳ್ಳಬಹುದೆಂದು ಆಲೋಚಿಸಿದರು. ಮುಖದಲ್ಲಿ ಆತ್ಮೀಯ ಭಾವನೆ ಮೊಳಕೆಯೊಡೆದು ಮುಗುಳ್ನಕ್ಕು ಪಕ್ಕಕ್ಕೆ ಸರಿದು ನಿಂತಾಗ ಅವಳೂ ಮುಗುಳ್ನಕ್ಕು ಒಳಗೆ ನಡೆದಳು.

ಮಗಳು ಇಷ್ಟೊಂದು ಉನ್ನತಿಯಲ್ಲಿರುವಾಗ ಅವಳ ತಂದೆ ತಾಯಿಯರೇಕೆ ಇನ್ನೂ ಈ ಕೂಪದಲ್ಲಿದ್ದಾರೊ ಅನಿಸಿತು. ರಮಣೀಯವರು ಮನಸ್ವಿತಾಳನ್ನು ನೋಡುತ್ತಾ ನಿಂತರು.
ಮಗಳು ಒಳಗೆ ಬಂದಾಗ ತಮ್ಮ ಕೆಲಸದಲ್ಲಿಯೇ ಮುಂದುವರೆದ ಭಾಮಿನಿಯವರು ಅವಳತ್ತ ತಿರುಗಿಯೂ ನೋಡಲಿಲ್ಲ. ಆದರೆ, ಇವರು ನನ್ನ ಸೋದರತ್ತೆಯ ಗಂಡನ ಕಡೆಯವರು. ಏನೊ ಮಗಳದ್ದು ಓದು ಮುಗಿಯುತ್ತಂತೆ ಕೆಲಸಕೇಳ್ಕೊಂಡು ಬಂದಿದ್ದಾರೆ. ಇವರ ಮಗ ಹೈಸ್ಕೂಲ್ ಮೇಷ್ಟ್ರಂತೆ ಅವರೆಂದಾಗ ಮನಸ್ವಿತಾ ಬಾಗಿಲಿನ ಬಳಿ ನಿಂತಿದ್ದವರತ್ತ ನೋಡಿದಳು. ಅವರು ಮುಗುಳ್ನಕ್ಕು ನಿಂತಿದ್ದರು. ಔಪಚಾರಿಕವಾಗಿ ನಗು ತೋರಿಸಲೇಬೇಕಿತ್ತು. ಮುಗುಳ್ನಕ್ಕು ತನ್ನಕೋಣೆ ಸೇರಿಬಿಡಬೇಕೆನ್ನುವ ಧಾವಂತವಿತ್ತು. ಆದರೆ ನವೀನರಾಯರು ಸಂಕೋಚದಿಂದಲೇ ಮುಂದೆ ಬಂದು, `ನಮಸ್ಕಾರ ತಾಯಿ, ನೀನು ಒಳ್ಳೆ ಹುದ್ದೆಯಲ್ಲಿದ್ದಿಯಂತೆ. ನಿನ್ನ ಅಪ್ಪಯ್ಯ ಎಲ್ಲನೂಹೇಳಿದ್ರು. ನಮಗೂ ಸ್ವಲ್ಪ ಬಡತನ ಇದೆ.

ಹೇಗಾದ್ರೂ ಮಾಡಿ ನಮ್ಮ ಮಗಳಿಗೊಂದು ಕೆಲಸ ತೆಗೆಸಿಕೊಟ್ರೆ ಇಡೀ ಜನ್ಮದಲ್ಲಿ ನಿನ್ನನ್ನು ಮರೆಯೋದಿಲ್ಲ' ಎಂದು ಸ್ವಲ್ಪ ಅತಿ ವಿನಯದಿಂದ ಕೇಳುವಾಗ ಅವಳಿಗೆ ಕರೆಕರೆಯೆನಿಸಿತು. ಒಬ್ಬ ವಯಸ್ಸಾದ ವ್ಯಕ್ತಿ ಆ ರೀತಿಯಾಗಿ ತಲಬಗ್ಗಿಸಿಕೊಂಡು ಕೇಳುವುದು ಸರಿಯಲ್ಲವೆನಿಸಿತು. ತನ್ನ ಬಗ್ಗೆ ಏನೆಲ್ಲಾ ಹೇಳಿ ಅವರುಗಳನ್ನು ಮನೆಯವರೆಗೂ ಕರೆಸಿದ ಅಪ್ಪಯ್ಯನ ಮೇಲೆ ಅವಳಿಗೆ ಸಿಟ್ಟು ಬಂತು. ಬಂದವರ ಎದುರಿಗೆ ಅದನ್ನು ತೋರಿಸಿಕೊಳ್ಳುವುದು ಸಮಂಜಸವೆನಿಸಲಿಲ್ಲ. ಅವರನ್ನು ಸಮಾಧಾನಿಸಿವುದಕ್ಕಾದರೂ ಏನಾದರೂ ಮಾತು ಹೇಳಲೇ ಬೇಕಿತ್ತು. ಅದಕ್ಕಾಗಿ, `ಸರಿ, ಪ್ರಯತ್ನಿಸೋಣ. ಅವಳ ಅಪ್ಲಿಕೇಶನ್ ಜೊತೆಗೆ ರೆಸ್ಯೂಮನ್ನು ಕೂಡ ಕೊಡಲಿ' ಎಂದು ಅವರ ಪ್ರತಿಕ್ರಿಯೆಗೂ ಕಾಯದೆ ಒಳಗೆ ನಡೆದಳು.


ನವೀನರಾಯರಿಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂತಸವಾಯಿತು. ಅವರು ನಯನಾಳನ್ನು ಕರೆದು, `ಈಗ್ಲೇ ಒಂದು ಅಪ್ಲಿಕೇಶನ್ ಬರೆದು ಕೊಡು. ಅವರು ನಾಳೆ ಆಫೀಸಿಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಾರಲ್ಲ. ಶುಭಸ್ಯ ಶೀಘ್ರಂ. ಅವರ ಹತ್ತಿರವೇ ಪೆನ್ನು ಪೇಪರ್ ತೆಗೆದುಕೊಂಡು ಬರೆದುಕೊಡು' ಎಂದು ಮಗಳನ್ನು ಉತ್ತೇಜಿಸಲು ಅವಳು, `ಪಪ್ಪ, ನೀವು ಅವಸರ ಮಾಡ್ತಿದ್ದೀರಿ. ಅಪ್ಲಿಕೇಶನ್ ಬರೆಯೋದು ನನಗೆ ಗೊತ್ತಿಲ್ಲ. ಅಣ್ಣನನ್ನು ಕೇಳಿ ಬರೆದುಕೊಡಬೇಕಷ್ಟೆ. ನಾವು ಊರಿಗೆ ಹೋದ ಮೇಲೆ ಅದನ್ನು ಮಾಡುವ. ಹಾಗಂತ ನೀವು ಅವರಿಗೆ ಹೇಳಿ ಬಿಡಿ' ಮುಖ ತಿರುಗಿಸಿಕೊಂಡು ಅಮ್ಮನ ಬಾಲ ಹಿಡಿದ ಮಗಳನ್ನು ನೋಡಿ ನವೀನರಾಯರಿಗೆ ಬೇಸರವಾದರೂ ತೋರಿಸಿಕೊಳ್ಳದೆ ನೇರವಾಗಿ ಮನಸ್ವಿತಾಳ ಕೋಣೆಯ ಎದುರು ನಿಂತರು.

ಕೋಣೆಯ ಬಾಗಿಲು ಮುಚ್ಚಿದ್ದರಿಂದ ಅವರಿಗೆ ಮತ್ತೊಮ್ಮೆ ಅವಳನ್ನು ಡಿಸ್ಟರ್ಬ್ ಮಾಡುವುದಕ್ಕೆ ಸರಿಯೆನಿಸಲಿಲ್ಲ. ಆದರೂ ಇಂತಹ ಅವಕಾಶ ತಪ್ಪಿದರೆ ತಮಗೆ ಅನಾನೂಕೂಲವೆಂದೆನಿಸಿ ಕೋಣೆಯ ಬಾಗಿಲನ್ನು ನಯವಾಗಿ ಕುಟ್ಟಿದರು. ಸ್ವಲ್ಪ ಹೊತ್ತಾದ ಮೇಲೆ ಬಾಗಿಲು ತೆರೆದು ನಿಂತಳು ಮನಸ್ವಿತಾ. ನವೀನರಾಯರನ್ನು ನೋಡುತ್ತಲೇ ಅವಳ ಮುಖ ಗಂಟಿಕ್ಕಿಕೊಂಡಿತು. ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದು ಮೂಡಿರುವುದು ನವೀನರಾಯರ ಗಮನಕ್ಕೂ ಬಂದಿತು.

`ನಿನಗೆ ತೊಂದರೆ ಕೊಡ್ತಾ ಇದ್ದೇನೆ ಅನಿಸ್ತಿದೆ. ಈಗ್ಲೇ ಒಂದು ಅಪ್ಲಿಕೇಶನ್ ಬರೆದು ಕೊಡೋಣಾಂತ. ಒಂದು ಪೇಪರ್ ಪೆನ್ನು ಕೊಟ್ರೆ ಚೆನ್ನಾಗಿತ್ತು' ಮತ್ತದೇ ಪೊಲಾಯ್ಟ್ ದನಿಯಲ್ಲಂದಾಗ ಅವಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾದರೂ ಅದನ್ನು ತೋರಗೊಡದೆ, `ಅದಕ್ಕೇನು ಅವಸರವಿಲ್ಲ. ನೀವು ಊರಿಗೆ ಹೋದ ಮೇಲೆ ನಮ್ಮ ಮನೆಯ ವಿಳಾಸಕ್ಕೆ ಅದನ್ನು ಬರೆದು ಕಳುಹಿಸಿ. ನಾನು ಅದರ ಬಗ್ಗೆ ಕ್ಯಾರ್ ತೆಗೆದುಕೊಳ್ಳುತ್ತೇನೆ' ಎಂದು ಅವರನ್ನು ಸಾಗಹಾಕುವ ಮಾತನಾಡಿದರೂ ಅವರು ರಚ್ಚೆ ಬಿಡವರಂತೆ ನಿಂತೇ ಇದ್ದರು.

`ನಾಳೆ ಅನ್ನುವುದಕ್ಕಿಂತ ಇವತ್ತೇ ಆದರೆ ಚೆಂದವಲ್ವೆ? ಹೇಗೂ ನಾವು ಇಲ್ಲೇ ಇದ್ದೀವಿ. ಇವತ್ತೇ ಬರೆದುಕೊಟ್ರೆ ನಾಳೆ ನೀವು ಆಫೀಸಿಗೆ ತಲುಪಿಸಬಹುದಲ್ವೆ?' ಅವರೆಂದಾಗ ರೇಗಿದರೂ ತಾಳ್ಮೆಯಿಂದ ವರ್ತಿಸಿದಳು. ಅನಗತ್ಯ ತನ್ನನ್ನು ತೊಂದರೆ ಮಾಡುವವರನ್ನು ಅವಳು ಇಚ್ಛೆಪಡುವುದೇ ಇಲ್ಲ. ಪದೇ ಪದೇ ಅವಳ ಹಿಂದೆಯೇ ಬರುವುದನ್ನು ಬಯಸದೆ ಅವಳು ಮಾತಾಡದೆ ಒಂದು ಬಿಳಿಯ ಹಾಳೆ ಮತ್ತು ಪೆನ್ನು ತಂದು ಅವರ ಕೈಯಲ್ಲಿಟ್ಟಳು. ಅವರು ಹೋಗುತ್ತಲೇ ಕೋಣೆಯ ಬಾಗಿಲು ಮುಚ್ಚಿ ಬೋಲ್ಟ್ ಸೇರಿಸಿದಳು.

ಮನೆಯ ವಾತಾವರಣವೇ ಹದಗೆಟ್ಟಿರುವಾಗ ಮನೆಯಲ್ಲಿ ಮುಕ್ತವಾಗಿ ಅವಳಿಗೆ ಬಿಹೇವ್ ಮಾಡುವುದು ಅಸಾಧ್ಯವಾಗಿತ್ತು. ಈ ಸೂಕ್ಷ್ಮತೆ ಬಂದವರಿಗೆ ತಿಳಿಯುವುದು ಬೇಡವೆಂದುಕೊಂಡು ಮನೆಯವರಿಗೆ ಎದುರಾಡದೆ ಅದನ್ನೆಲ್ಲಾ ನುಂಗಿಕೊಂಡು ಕುಳಿತಳು. ಈ ಎಲ್ಲಾ ಕಿರಿಕಿರಿಗಳನ್ನು ತಪ್ಪಿಸಿಕೊಂಡು ಇರಬೇಕಾದರೆ ನಿಖಿಲ್ ತನಗಾಗಿ ಗೊತ್ತುಪಡಿಸಿದ ಮನೆಗೆ ಆದಷ್ಟು ಬೇಗ ಶಿಫ್ಟ್ ಮಾಡಿಬಿಡಬೇಕೆಂದು ನಿರ್ಧರಿಸಿದಳು.
ನವೀನರಾಯರು ನಯನಾಳನ್ನು ಕರೆದು, `ನೋಡು, ಒಂದು ಅಪ್ಲಿಕೇಶನ್ ಬರೆ. ಜೊತೆಗೆ ನಿನ್ನ ಬಯೋಡಾಟಾನು ಬರೆದುಕೊಡು' ಎಂದು ಹಾಳೆಯನ್ನು ಮತ್ತು ಪೆನ್ನನ್ನು ಅವಳ ಮುಂದೆಚಾಚಿದರು.

`ಪಪ್ಪ, ನಂಗೆ ಬರೆಯುವುದಕ್ಕೆ ಬರುವುದಿಲ್ಲಂತ ಹೇಳಿದ್ನಲ್ಲ. ಅಣ್ಣನತ್ರ ಕೇಳಿ ಬರೆಯುತ್ತೇನೆ. ಈಗ ಅದನ್ನ ಅವರಿಗೆ ಕೊಟ್ಟುಬಿಡು' ಎಂದು ಅದನ್ನು ನಿರಾಕರಿಸಿದಳು. ಅವರಿಗೆ ಏನು ಮಾಡಬೇಕೆಂದು ತೋಚದೆ ತಾವೇ ಮಗಳ ಹೆಸರಿನಲ್ಲಿ ಅರ್ಜಿಯನ್ನು ಬರೆಯಲು ಕುಳಿತರು. ಶ್ರೀನಿವಾಸರಾಯರು ಅವರು ಬರೆಯುತ್ತಿರುವುದನ್ನು ಕಂಡು, `ನೀವೇನು ಕೆಲಸ ಮಾಡುತ್ತಿರುವಿರಿ?' ಎಂದು ಕೇಳಲು ಅವರು ತಲೆಯಿತ್ತಿದರು.
`ಈಗಿನ ಮಕ್ಕಳಿಗೆ ಯಾವುದೂ ಅರ್ಥವಾಗುವುದಿಲ್ಲ. ಒಂದು ಅರ್ಜಿ ಬರೆ ಅಂದ್ರೆ ಹಿಂಜರಿಕೆ ನನ್ನ ಮಗಳಿಗೆ. ನಾಳೆ ಇವರೆಲ್ಲ ಹೊರಗೆ ಹೋಗಿ ದುಡಿಯುವವರು. ಚುರುಕುತನ ಬೇಕೆ. ನೋಡಿ, ನಿಮ್ಮ ಮಗಳ ಹಾಗೆ. ಇಷ್ಟು ಸಣ್ಣ ವಯಸ್ಸಿಗೆ ಅದೇನು ಜವಾಬ್ದಾರಿ, ಲವಲವಿಕೆಯೆಲ್ಲ' ಮಗಳನ್ನು ಅನಗತ್ಯ ತನ್ನೆದುರು ಹೊಗಳುತ್ತಿರುವಂತೆ ಶ್ರೀನಿವಾಸರಾಯರಿಗೆ ತೋರಿತು. ಮಗಳ ಸ್ಟೇಟಸ್ ತಿಳಿಯುತ್ತಿದ್ದರೆ ಇಷ್ಟರವರೆಗೆ ಚಿನ್ನದ ಬಟ್ಟಲಲ್ಲಿ ಉಣ್ಣುತ್ತಿದ್ದರೇನೋ? ಆದರೆ ಅವೆಲ್ಲವನ್ನೂ ತುಳಿದು ತಮ್ಮ ಸ್ವಾರ್ಥವನ್ನು ಸಾಧಿಸಿಕೊಂಡಂತೆ ಅವಳ ಪ್ರತೀಯೊಂದು ಕಾರ್ಯಕ್ಕೂ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು.

ಅವರ ತಾಳಕ್ಕೆ ಶೃತಿಯೆಂಬಂತೆ ಭಾಮಿನಿಯವರು ಕೂಡ ಗಂಡನನ್ನೇ ಅನುಮೋದಿಸುವುದನ್ನು ಮನಸ್ವಿತಾ ಎಂದೂ ಬಯಸುವುದಿಲ್ಲ. ಆದರೆ ಅವನ್ನೆಲ್ಲಾ ಮೀರಿ ನಿಂತಂತೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ದಿನ ಕಳೆಯುವುದನ್ನು ಅಭ್ಯಾಸಮಾಡಿಕೊಂಡಿದ್ದಳು. ತಾನು ಗಳಿಸಿಕೊಂಡಿರುವ ಪದವಿ, ಗೌರವ ಹುದ್ದೆ, ಸ್ಥಾನಮಾನ, ಪಡೆಯುತ್ತಿರುವ ದೊಡ್ಡ ಮೊತ್ತದ ಸಂಬಳ, ಪ್ರತಿಷ್ಠೆ ಎಲ್ಲವನ್ನೂ ಉಳಿಸಿಕೊಳ್ಳುವುದರ ಜೊತೆಗೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆನ್ನುವ ತುಡಿತ ಅವಳಲ್ಲಿರುವುದರಿಂದಲೇ ಅವಳು ಮನೆಯವರಿಗೆ ಎದುರಾಡದೆ ಎಲ್ಲವನ್ನೂ ಸಹಿಸಿಕೊಂಡು ಬದುಕುತ್ತಿರುವುದು.

`ಅಯ್ಯೋ, ನೀನ್ಯಾಕಯ್ಯ ಅದನ್ನೆಲ್ಲಾ ಬರೆಯುತ್ತಾ ಕುಳಿತಿದ್ದೀಯಾ? ನಿನ್ನ ಮಗಳ ಕೈಯಲ್ಲಿಯೇ ಬರೆಸು. ಅವಳಿಗೆ ಬರೊದಿಲ್ಲಾಂತಾದ್ರೆ ನನ್ನ ಮಗಳ ಸಹಾಯ ತಗ್ಗೊಳ್ಳಿ' ಯಾವ ಸ್ವಾರ್ಥದಿಂದ ಶ್ರೀನಿವಾಸರಾಯರು ಆ ಮಾತು ಅಂದರೋ ಕೋಣೆಯೊಳಗಿದ್ದ ಮನಸ್ವಿತಾಳಿಗೂ ಆ ಮಾತುಗಳು ಕೇಳಿತು. ಮೈಯೆಲ್ಲಾ ಉರಿದು ಹೋಗುವಂತೆ ಅವಳು ಕುಳಿತಲ್ಲಿಯೇ ಛಡಪಡಿಸಿದಳು. ತನ್ನ ಯಶಸ್ಸಿನ ಹಿಂದಿರುವ ನೋವು, ಹಠ, ಸಾಧನೆಗಳಿಗೆ ಬೆಲೆಯೇ ಇಲ್ಲದಂತೆ ಬಹಳ ತುಚ್ಛವಾಗಿ ಮಾತನಾಡುವುದನ್ನು ಸಹಿಸಳು.

ನವೀನರಾಯರು ಮಡದಿಯನ್ನು ಕೂಗಿ, `ಇಕ್ಕಳೆ ರಮಣಿ, ನೀನಾದ್ರೂ ಅವಳಿಗೆ ಹೇಳಿ ಬರೆಯಿಸು' ಅಡುಗೆ ಮನೆಯಲ್ಲಿ ಭಾಮಿನಿಯವರೊಂದಿಗಿದ್ದವರನ್ನು ಕರೆದರು. ಗಂಡನ ಮಾತಿಗೆ ಹೊರಗೆ ಬಂದ ರಮಣಿಯವರು ಮಗಳನ್ನು ಕರೆದು, `ನೈನಾ, ಇಲ್ಲಿ ಬಾ. ನಾನು ಬರ್ತೀನಿ. ಒಂದು ಅಜರ್ಿ ಬರೆದು ಕೊಡು' ಎಂದು ಮುದ್ದಿನ ಮಗಳನ್ನು ಕರೆದುಕೊಂಡು ಮನಸ್ವಿತಾಳ ಕೋಣೆಯ ಬಳಿ ಬಂದರು.
ಮನಸ್ವಿತಾಳಿಗೆ ಹೊರಗೆಲ್ಲ ನಡೆಯುತ್ತಿರುವುದು ತಿಳಿಯುತ್ತಿತ್ತು. ಅವರುಗಳು ಬಾಗಿಲು ಬಡಿಯುವ ಮೊದಲೆ ಬಾಗಿಲು ತೆರೆದು ಹೊರಗೆ ಬಂದಳು. ತಾಯಿ ಮಗಳು ಇಬ್ಬರೂ ಅವಳನ್ನು ನೋಡುತ್ತಾ ನಿಂತರೆ ವಿನ: ಬಾಯಿಯಿಂದ ಮಾತು ಹೊರಡದಾಯಿತು. ರಮಣಿಯವರು ಮಗಳನ್ನು ಹುರಿದುಂಬಿಸುವಂತೆ, `ಹೋಗು ಹೋಗು ಕೇಳು' ಎಂದು ಪುಸಲಾಯಿಸಿದರು. ನಯನ ಪೆನ್ನು ಪೇಪರುಗಳನ್ನು ತೆಗೆದುಕೊಂಡು, `ಹೆಲ್ಪ ಮಾಡ್ತೀರಾ?' ಅಂದಳು. ಅಲ್ಲಿಯವರೆಗೂ ತಾಳ್ಮೆಯಿಂದ್ದಿದ್ದ ಮನಸ್ವಿತಾಳ ಸಂಯಮದ ಕಟ್ಟೆ ಒಡೆಯಿತು.

`ಏನು ಓದಿದ್ದಿಯಾ ನೀನು?' ತಕ್ಷಣವೇ ಪ್ರಶ್ನಿಸಿದಾಗ ನಯನಾ ಅವಳ ಪ್ರಶ್ನೆಗಿಂತಲೂ ಅವಳು ಕೇಳಿದ ಆ ರೀತಿಗೆ ತತ್ತರಿಸಿದಳು. ಮಾತು ಬರದವರಂತೆ ಕ್ಷಣ ಹೊತ್ತು ಮನಸ್ವಿತಾಳನ್ನೇ ನೋಡಿದಳು. ಅವಳ ಕಣ್ಣುಗಳಲ್ಲಿ ಕೋಪದ ಕಿಡಿಗಳಿರುವುದು ತಿಳಿಯಿತು.
`ಬಿ.ಕಾಂ' ತಲೆತಗ್ಗಿಸಿ ನಿಂತವಳು ನೀರಸವಾಗಿ ಉತ್ತರಿಸಿ ಹಿಂತಿರುಗಬೇಕೆಂದುಕೊಂಡಳು.
`ಡಿಗ್ರಿ ಓದಿರೋಳಿಗೆ ಒಂದು ಅಪ್ಲಿಕೇಶನ್ ಬರೆಯುವುದಕ್ಕಾಗೋಲ್ವಾ?' ದನಿಯಲ್ಲಿ ಹಿಂದಿನ ಗಡಸುತನವಿಲ್ಲದಿದ್ದರೂ ನಯನಾಳಿಗೆ ಆ ಪ್ರಶ್ನೆ ತನ್ನ ಪ್ರತಿಷ್ಠೆಗೆ ದಕ್ಕೆ ತಂದಂತಹ ಅನುಭವವಾಯಿತು. ಅವಳಿಗರಿವಿಲ್ಲದಂತೆ ಕಣ್ಣುಗಳನ್ನು ನೀರು ಹನಿಯಿತು. ರಮಣಿಯವರು ಮೂಕರಾಗಿ ನಿಂತರು. ಶ್ರೀನಿವಾಸರು ಏನೋ ಮಾತಾಡಲು ಬಾಯಿ ತೆರೆದಾಗ ಒಳಗಿನಿಂದ ಹೊರಗೆ ಬಂದ ಭಾಮಿನಿಯವರು ಅವರನ್ನು ಮಾತನಾಡದಂತೆ ತಡೆದರು.
...ಮುಂದುವರಿಯುವುದು...

3 comments:

Anonymous said...

end this story please..

Anonymous said...

once again end this please..mitra

Anonymous said...

story yake finish madthilla

Post a Comment