ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ದೈನಂದಿನ ಧಾರಾವಾಹಿ - ಭಾಗ 34. ಅಧ್ಯಾಯ 11 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಅಶುತೋಶ್ನ ಬಗ್ಗೆ ತಿಳಿದುಕೊಳ್ಳುವ ಹಂಬಲ ಅಧಿಕವಾಗಿತ್ತು. ಇ-ಮೇಲ್ ಗೆಳೆಯ ಅವನೇ ಏನೊ ಅನುಮಾನವನ್ನು ಬಗೆಹರಿಸಬೇಕಿತ್ತು. ಅದನ್ನು ನಿಖಿಲ್ ಹೆತ್ತವರಿಂದ ತಿಳಿದುಕೊಳ್ಳುವ ನಿರ್ಧಾರವಿದ್ದರೂ ಅವರುಗಳ ದರ್ಪದಿಂದ ಕೈಗೂಡದ ವಿಷಯವೆನ್ನುವುದನ್ನು ಅವರುಗಳ ಮೊದಲ ಭೇಟಿಯಲ್ಲಿಯೇ ಕಂಡುಕೊಂಡಿದ್ದಳು.ಈಗ ಆತನೆ ಮಾತನಾಡಿರುವುದು ತನಗೆ ಅನುಕೂಲವೆನಿಸಿತು. ನಿಖಿಲ್ನ ಜೊತೆಗೆ ಆತನನ್ನು ಭೇಟಿಯಾಗುವ ಉದ್ದೇಶವೂ ಇತ್ತು. ಆದರೆ ನಿಖೀಲ್ ಆ ಅವಕಾಶವನ್ನು ನೀಡಿರಲಿಲ್ಲ.

ಅದಕ್ಕಾಗಿ ಅಶುತೋಶ್ನನ್ನು ನೇರವಾಗಿ ಕೇಳುವುದರಲ್ಲಿ ಮುಜುಗರವೆನಿಸದು.
ಅಶುತೋಶ್, ನಿಮ್ಮನ್ನು ಭೇಟಿಯಾಗೋ ಇಚ್ಚೆ ಇದೆ ಅವಳ ಮಾತಿಗೆ ಅತ್ತಲಿಂದ ರೆಸ್ಪಾನ್ಸ್ ಇರಲಿಲ್ಲ. ಕೇಳಿದ್ದು ತಪ್ಪಾಯಿತೇನು ಅನಿಸಿತು. ಕ್ಷಣ ಮೌನದ ಬಳಿಕ ಉತ್ತರ ಬಂತು.

ನಿಜವಾಗಿಯೂ, ತುಂಬಾ ಸಂತೋಷ ಅನಿಸ್ತಿದೆ. ಯಾವಾಗ ಭೇಟಿಯಾಗೋಣ? ಇನ್ನೊಂದೆರಡು ವಾರ ಊರಲ್ಲಿಯೇ ಇದ್ದೇನೆ ಹೇಳಿ... ನಿಮಗೆ ಅನುಕೂಲವಾದಾಗ ಅಂದ.ಖಂಡಿತವಾಗಿಯೂ ಹೇಳ್ತೀನಿ. ನೀವು ಒಪ್ಪಿಗೆ ಇತ್ತಿರುವುದಕ್ಕೆ ತುಂಬಾ ಧನ್ಯವಾದಗಳು ಅವಳು ಹೇಳಿ ಮುಗಿಸುವಷ್ಟರಲ್ಲಿ ಫೋನ್ ಕೈ ಬದಲಾಯಿಸಿರುವುದು ತಿಳಿಯಲಿಲ್ಲ. ದನಿ ಬದಲಾಗಿತ್ತು. ನಿಖಿಲ್ ಲೈನ್ನಲ್ಲಿದ್ದ.

ಮನಸ್ವಿತಾ, ಎನಿ ಪ್ರಾಬ್ಲಂ?
ನೋ ಸರ್, ನಿಮಗೆ ಫೋನ್ ಮಾಡದೆ, ನೀವು ಮನೆಯಲ್ಲಿರುವಿರೆಂದು ಮನೆಯ ಕಡೆಗೆ ಹೋಗಿದ್ದೆ. ನೀವು...
ಅವಳ ಮಾತನ್ನು ಕೇಳಿ ಹೃದಯ ತುಂಬಿ ಬಂದಂತಾಯಿತು. ಕಾರಣ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡದವನು ಮನೆಯತ್ತ ಪಾದ ಬೆಳಸಿದ ಅವಳನ್ನು ಬೇರೆ ರೀತಿಯಲ್ಲಿಯೇ ಅರ್ಥೈಸಿಕೊಂಡ. ಜೊತೆಗೆ ತನ್ನ ಮನೆಯವರ ಪ್ರತಿಕ್ರಿಯೆ ಏನು ಅನ್ನುವುದನ್ನು ತಿಳಿದುಕೊಳ್ಳುವುದು ಬೇಕಿತ್ತು. ಮಮ್ಮಿ ಯಾವತ್ತೂ ತನ್ನ ಪರ ಆದರೆ ಡ್ಯಾಡ್ ಬಗ್ಗೆ ಯೋಚಿಸಲಾರ.

ನಿಜವಾಗಿಯೂ ತುಂಬಾ ಖುಷಿ ಅನಿಸ್ತಿದೆ. ನೀವೊಂದು ಕಾಲ್ ಮಾಡುತ್ತಿದ್ದರೆ ನಾನು ಮನೆಗೆ ಬರ್ತಾ ಇದ್ದೆ ಅಂದಾಗ ಮನಸ್ವಿತಾಳಿಗೆ ಇರಿಸು ಮುರಿಸೆನಿಸಿತು. ಕೂಡಲೆ ತಾನು ಅಲ್ಲಿಗೆ ಹೋಗಿರುವ ಉದ್ದೇಶವನ್ನು ತಿಳಿಸಿಬಿಡಬೇಕೆನ್ನುವುದು ಹೊಳೆಯಿತು.
ಸಾರ್, ದೆಹಲಿಯ ಕಂಪಿನಿಯಿಂದ ಫ್ಯಾಕ್ಟರಿ ಪ್ರೊಡಕ್ಷನ್ನ ಕೊಟೇಶನ್ ಕೇಳಿ ಪತ್ರ ಬಂದಿದೆ. ಅದನ್ನು ಕೈ ಬಿಟ್ಟರೆ ಒಳ್ಳೆಯ ಕಸ್ಟಮರ್ನ್ನು ಕಳೆದುಕೊಳ್ಳುತ್ತೇವೊ ಏನು ಅನಿಸ್ತು. ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಬಂದೆ ಅಂದಾಗ ನಿಖಿಲ್ಗೆ ನಿರಾಶೆಯಾಗಿತ್ತು. ಆತ ವ್ಯವಹಾರಿಕವಾಗಿಯೇ ಮಾತನಾಡಬೇಕಾಯಿತು.

ಮನಸ್ವಿತಾ, ನೀವು ಅದಕ್ಕಾಗಿ ಮನೆಯವರೆಗೆ ಬರುವ ರಿಸ್ಕ್ ತೆಗೆದುಕೊಳ್ಳಬೇಕಾಗಿರಲಿಲ್ಲ. ಒಂದು ಕಾಲ್ ಮಾಡಿ ತಿಳಿಸಿದ್ದರೆ ನಾನೇ ಆಫೀಸಿಗೆ ಬರುತ್ತಿದ್ದೆ. ವ್ಯವಹಾರ ಮನೆಯವರೆಗೂ ಹೋಗುವುದನ್ನು ನಾನು ಇಚ್ಚಿಸುವುದಿಲ್ಲ ಆತನ ಮಾತು ಟ್ರಾಕ್ ಬದಲಿಸಿದಾಗ ಅವಳು ಉಗುಳು ನುಂಗಿಕೊಂಡಳು. ಅವನಿಂದ ಇಂತಹ ನೇರವಾದ ಮಾತುಗಳನ್ನು ಕೇಳಿಸಿಕೊಂಡಿದ್ದರು ಈಗಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಕಂಪೆನಿಯ ಏಳಿಗೆಗೋಸ್ಕರ ತನ್ನ ಹೋರಾಟವನ್ನು ಹೊಗಳುತ್ತಿದ್ದ ನಿಖಿಲ್ ಇವನೇನಾ ಅನಿಸಿತು.ಕ್ಷಮಿಸಿ ಅಂದು ಫೋನ್ ಇಡುವಷ್ಟರಲ್ಲಿ ಆತನೆ ಹೇಳಿದ, ಇನ್ನೊಂದು ಅರ್ಧ ಗಂಟೆಯಲ್ಲಿ ಅಲ್ಲಿಗೆ ಬರ್ತೀನಿ. ಅದಕ್ಕೆ ಸಂಬಂಧ ಪಟ್ಟ ಕಾಗದ ಪತ್ರಗಳನ್ನು ರೆಡಿಯಾಗಿರಲಿ ಪ್ರತಿಕ್ರಿಯಿಸದೆ ಫೋನ್ ಕಟ್ ಮಾಡಿದ ಸದ್ದು ಕೇಳಿಸಿತು.

ಮೊದಲ ಬಾರಿಗೆ ಅವಮಾನಿತಳಂತೆ ಮುಖ ಬಿಗಿದುಕೊಂಡು ಕುಳಿತವಳು ಕಂಪ್ಯೂಟರ್ ಅನ್ನು ನಿದ್ರಾಹೀನ ಸ್ಥಿತಿಗೆ ತರುವಾಗ ಮೇಲ್ ಇರುವುದು ಕಾಣಿಸಿತು. ಅನಾಸಕ್ತಿಯಿಂದಲೇ ತೆರೆದಳು. ಅರವಿಂದ ದೀರ್ಘವಾದ ಪತ್ರ ಬರೆದಿದ್ದ. ಅದರಲ್ಲಿ ಆತನ ವೈಯಕ್ತಿಕ ವಿಷಯಗಳ ಬದಲಿಗೆ ತನ್ನ ಆಗು ಹೋಗುಗಳನ್ನು ಅನುಸರಿಸಿದಂತೆ ಬಾಚೂ ತಪ್ಪದೆ ಬರೆದಿದ್ದ.
ಕೊನೆಗೂ ಈ ಅರವಿಂದ ನಿಗೂಢವಾಗಿಯೇ ಉಳಿಯುತ್ತಾನೆನ್ನುವ ಕಾರ್ಮೋಡ ಕವಿಯಿತು. ನಿಖಿಲ್ನ ಗುಂಗಿನಿಂದ ಹೊರಬಂದ ನೆಮ್ಮದಿಯಿದ್ದರೂ ಅರವಿಂದ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯದಲ್ಲಿಯೇ ಅಶುತೋಶ್ನ ಭೇಟಿಯಾಗಬೇಕಾಗಿರುವ ವಿಷಯದ ಬಗ್ಗೆ ರೂಪು ರೇಷೆಯನ್ನು ಹಾಕಬೇಕೆನಿಸಿತು. ಈ ಅಶುತೋಶ್ನೆ ಅರವಿಂದನಾದರೆ ತನಗೇನು ಅಪಾಯವಿಲ್ಲ. ಆದರೂ ಅದನ್ನು ಧೃಡ ಪಡಿಸಿಕೊಳ್ಳವುದು ಅಗತ್ಯವಿದೆ ಎಂಬ ಅಭಿಪ್ರಾಯವಿತ್ತು.

ಇನ್ನು ಅರ್ಧ ಗಂಟೆಯವರೆಗೂ ನಿಖಿಲ್ಗೆ ಕಾಯುವುದರಲ್ಲಿಯೂ ಒಂದು ರೀತಿಯ ವೇದನೆಯೆನಿಸಿತು. ಅಶುತೋಶ್ ಕೂಡ ಆತನ ಜೊತೆಗೆ ಬರುತ್ತಾನೆನ್ನುವ ನಿರೀಕ್ಷೆಯಿರಲಿಲ್ಲ.
ಆ ದಿನದ ಕ್ಯಾಷ್ ಕಲೆಕ್ಷನ್ಗಳನ್ನು ಬ್ಯಾಂಕ್ಗೆ ತೆಗೆದುಕೊಂಡು ಹೋಗಲು ರಾಮರಾಜ್ ಅಣಿಗೊಳಿಸುವ ಹೊತ್ತಿಗೆ ನಿಖಿಲ್ ಆಫೀಸಿಗೆ ಬಂದದನ್ನು ನೋಡಿ ಮನಸ್ವಿತಾ ಅವನಿಗೆ ಫೋನ್ ಮಾಡಿ ಅರ್ಧ ಗಂಟೆ ಕಾಯುವಂತೆ ಸೂಚಿಸಿದಳು. ತಟ್ಟನೆ ಅವಳಿಗೆ ನೆನಪಾಯಿತು. ಅರ್ಧ ಗಂಟೆಯಷ್ಟೆ ತಡವಾಗಿ ಕಳುಹಿಸಿದರೆ ಚೆಕ್ ಕ್ಲಿಯರೆನ್ಸ್ಗೆ ಹೋಗಬೇಕಾಗಿರುವುದು ಮರುದಿವಸ. ಆದ್ದರಿಂದ ಒಂದು ದಿವಸದ ಬಡ್ಡಿ ನಷ್ಟವಾಗುವುದನ್ನು ತಿಳಿದವಳು ಕೂಡಲೇ ನಿಖಿಲ್ನ ಕ್ಯಾಬಿನ್ಗೆ ಬಂದಳು.

ನಿಖಿಲ್ ಅವನನ್ನು ಸ್ವಾಗತಿಸಿದನಾದರೂ ಮುಖದಲ್ಲಿ ಲವಲವಿಕೆಯಿಲ್ಲವಾಗಿತ್ತು. ಅಶುತೋಶ್ ಕೂಡ ಬರುತ್ತೆನೆಂದಿದ್ದವನು ಆಫೀಸಿಗೆ ಬರದಿದ್ದದೂ ಅವಳಿಗೆ ಆಶ್ಚರ್ಯ. ಅವನ ಬಗ್ಗೆ ವಿಚಾರಿಸಬೇಕೆಂದುಕೊಂಡವಳು ಮನಸ್ಸನ್ನು ನಿಗ್ರಹಿಸಿಕೊಂಡಳು. ನಿಖಿಲ್ ಚೆಕ್ಗಳನ್ನು ಪರಿಶೀಲಿಸಿ ಕಲೆಕ್ಷನ್ಗೆ ಕಳುಹಿಸುವಂತೆ ಹೇಳಿದ. ಆತನ ಮುಖದಲ್ಲಿಂದು ಗಂಭೀರತೆಯನ್ನು ಕಂಡು ಅವಳು ಏನೊಂದು ಮಾತನಾಡದೆ ಹೊರಗೆ ಬಂದಳು. ತನ್ನ ಕ್ಯಾಬಿನ್ ಸೇರಿ ರಾಮರಾಜ್ನನ್ನು ಕರೆಸಿ ಹತ್ತು ನಿಮಿಷಗಳಲ್ಲಿಯೇ ಬ್ಯಾಂಕ್ಗೆ ಹೋಗಬೇಕೆಂದು ಇಲ್ಲದಿದ್ದರೆ ಕ್ಲಿಯರೆನ್ಸ್ಗೆ ಒಂದು ದಿನ ಡಿಲೆಯಾಗುವುದೆಂದು ತಿಳಿಸಿದಳು. ಆತ ಉಳಿದೆಲ್ಲ ಕೆಲಸಗಳನ್ನು ಬದಿಗಿರಿಸಿ ಮೊದಲಿಗೆ ಬ್ಯಾಂಕ್ಗೆ ಕಳುಹಿಸುವ ಚೆಕ್ ಮತ್ತು ಕ್ಯಾಷ್ಗಳನ್ನು ಪೇ ಇನ್ ಸ್ಲಿಪ್ಗಳಲ್ಲಿ ಬರೆದು, ಕ್ಯಾಷಿಯರ್ ಕೈಯಲ್ಲಿ ಕೊಟ್ಟ.

ರಾಮರಾಜ್ ಹೊರಗೆ ಹೋಗಿ ಒಂದೆರಡು ನಿಮಿಷಗಳಲ್ಲಿಯೇ ಅನುಮತಿ ಕೇಳಿ ಯಾರೊ ನಿಂತಂತಾಯಿತು. ಗಾಜುಗಳಾಚೆಗೆ ನಿಂತಿದ್ದ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣಿಸಲಿಲ್ಲ. ನಿಖಿಲ್ ತನ್ನ ಕ್ಯಾಬಿನ್ಗೆ ಬಂದರೂ ನೇರವಾಗಿ ಬರುತ್ತಿದ್ದ. ಅವಳು ಕುಳಿತಲ್ಲಿಂದ, ಎಸ್, ಕಮಿನ್ ಅಂದಳು.
ಒಳಗೆ ಬಂದ ವ್ಯಕ್ತಿಯನ್ನು ಕಂಡು ಚಕಿತಳಾದಳು.ಅಶುತೋಶ್ ನಗು ಬೀರಿ ನಿಂತಿದ್ದ. ಅವಳೇ ಎಚ್ಚೆತ್ತುಕೊಂಡು, ಬನ್ನಿ ಕುಳಿತುಕೊಳ್ಳಿ ಅಂದಳು. ಅಶುತೋಶ್ ಅವಳು ತೋರಿಸಿದ ಚೇರ್ನಲ್ಲಿ ಕುಳಿತ.

ಹೇಗೆ ಸಾಗ್ತಾ ಇದೆ ಬದುಕು? ಅನಿರೀಕ್ಷಿತ ಪ್ರಶ್ನೆಯನ್ನು ಎಸೆದಾಗ ಅವಳು 'ಅರವಿಂದ'ನೆನ್ನುವ ಅಜ್ಞಾತ ವ್ಯಕ್ತಿಯ ಲಕ್ಷಣಗಳನ್ನು ಅಶುತೋಶ್ನಲ್ಲಿ ಹುಡುಕುವ ಪ್ರಯತ್ನ ಮಾಡಿದಳು. ಆತನ ಪ್ರಶ್ನೆ ಕೂಡ ಅಷ್ಟೇ ಕೂತೂಹಲಕಾರಿಯಾಗಿತ್ತು. ಬದುಕಿನ ಬಗ್ಗೆ ನೇರವಾಗಿ ಕೇಳಿದ್ದಾನೆ. ಇದರ ಅರ್ಥ ಆತನಿಗೆ ತನ್ನ ವೈಯಕ್ತಿಕ ವಿಷಯಗಳು ಗೊತ್ತು. ಆತ ವಿಷಯಗಳನ್ನು ಮೂರನೆಯವರಿಂದ ಸಂಗ್ರಹಿಸಿರಬಹುದು. ಆದರೆ ಯಾರಿಗೂ ತಿಳಿಯಬಾರದೆನ್ನುವ ಉದ್ದೇಶದಿಂದ ಅನಾಮಿಕ ಹೆಸರಿನಿಂದ ತನ್ನ ಬಗ್ಗೆ ಹೇಳಿಕೊಳ್ಳುತ್ತಿರುವನೆ. ಇದರಿಂದ ಅವನಿಗಾಗುವ ಉಪಯೋಗವೇನು? ತನ್ನ ಮೇಲೆ ಆತನಿಗಿರುವ ಭಾವನೆಯನ್ನು ನೇರವಾಗಿ ಹೇಳಿಕೊಳ್ಳಲಾರನೇಕೆ? ಅವಳ ಆಲೋಚನೆ ಸಾಗುತ್ತಿರುವಾಗಲೇ, ನನ್ನ ಪ್ರಶ್ನೆ ಅಷ್ಟೊಂದು ಜಟಿಲವಾಗಿತ್ತೆ? ಅಂದ.

ಬದುಕಿನ ಬಗ್ಗೆ ನೇರವಾಗಿ ಪ್ರಶ್ನೆ ಎಸೆದ್ರಿ... ಉತ್ತರ ಬಹಳ ಕಷ್ಟ ಅನ್ಸುತ್ತೆ ಅವನ ಬಗ್ಗೆ ತನ್ನಲ್ಲಿಯೇ ಮಂಥನ ನಡೆಸಿದವಳು ಬಹಳ ಆತ್ಮೀಯತೆಯಿಂದ ಹೇಳಿದಾಗ ತಾನು ಆ ಪ್ರಶ್ನೆ ಕೇಳಬಾರದಿತ್ತೆನೊ ಅನಿಸದಿರಲಿಲ್ಲ ಅಶುತೋಶ್ಗೆ.
ಸುಮ್ನೆ ,ತಮಾಷೆಗೆ ಹೇಳಿದೆ. ಇಡೀ ದಿನ ನಿಖಿಲ್, ಐ ಮೀನ್ ನಿಖಿಲ್ ಎಂಟರ್ಪ್ರೈಸಸ್ ಬಗ್ಗೆ ತಲೆಕೆಡಿಸಿಕೊಂಡಿರೋ ನಿಮ್ಮ ಬದುಕು ಯಾಂತ್ರಿಕವಾಗಿದೆಯೊ ಏನೊ ಅನ್ನೋದಕ್ಕೆ ಕೇಳಿದೆ.

ಬದುಕು ಯಾಂತ್ರಿಕವಾಗಿರುತ್ತಿದ್ದರೆ ಈಗಿರುವ ಲವಲವಿಕೆಯೇ ಬತ್ತಿ ಹೋಗುತ್ತಿತ್ತೊ ಏನೊ? ತನಗೆ ಯಾವತ್ತು ಹಾಗೆ ಅನಿಸಿದ್ದೆ ಇಲ್ಲ. ನಿಖಿಲ್ ಎಂಟರ್ ಪ್ರೈಸೆಸ್ನ ಏಳಿಗೆಗಾಗಿ ದುಡಿಯುತ್ತಿರುವುದು ಸುಳ್ಳಲ್ಲ. ಹಾಗಂತ ಬದುಕು ಯಾಂತ್ರಿಕವಾಗುವುದನ್ನು ಬಯಸಳು.
ನಮಗೆ ಮಾಡೋ ಕಾರ್ಯದಲ್ಲಿ ಆಸಕ್ತಿಯಿದ್ರೆ ಯಾಂತ್ರಿಕತೆಯ ಪ್ರಶ್ನೆ ಬರಲಾರದು ನೇರವಾಗಿ ಅವನನ್ನು ಚುಚ್ಚುವಂತೆ ನುಡಿಯದಿದ್ದರೂ ಅವನಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದೆನೆಂಬ ಭಾವನೆಯಿತ್ತು ಅವಳಲ್ಲಿ. ಆ ಭಾವನೆ ಅರವಿಂದನೇ ಅಶುತೋಶ್ನೆನ್ನುವ ಸಂಶಯದಿಂದ ಮಾತ್ರ. ಅವನು ನಕ್ಕ.

ಬದುಕಿನಲ್ಲಿ ಲವಲವಿಕೆಯಿರೋದ್ರಿಂದ ನಿಮ್ಮಂತವರೇ ನಮ್ಮಂತ ಬಡಪಾಯಿಗಳಿಗೆ ಸ್ಪೂರ್ತಿ... ಅಶುತೋಶ್ನ ಮಾತುಗಳು ಹೆಬ್ಬಂಡೆಯೊಂದು ಭೀಕರವಾಗಿ ಸ್ಪೋಟಿಸಿದಂತೆ ಆಯಿತು. ಹಿಮದ ನೆಲದ ಮೇಲೆ ಶತ್ರು ಪಾಳ್ಯದ ಮೇಲೆ ನಿಗಾವಿಟ್ಟು ಹಗಲು ರಾತ್ರಿ ಕಾಯುವ ಜವಾಬ್ದಾರಿಯುತ ವ್ಯಕ್ತಿಯೊಬ್ಬನಿಂದ ಬಂದ ಭಾವುಕತೆಯ ಮಾತುಗಳಿಗೆ ಅಭಿಮಾನಕ್ಕಿಂತಲೂ ಗೌರವ ಉಕ್ಕಿತು.

ಅಶುತೋಶ್ನೇ ಅರವಿಂದನೆನ್ನುವ ಸತ್ಯದ ಪರದೆ ಹರಿದು ನಿಗೂಢತೆಯ ಪೂರ್ಣ ದೃಷ್ಟಿ ಗೋಚರಿಸಿತು. ತನ್ನ ವೈಯಕ್ತಿಕ ವಿಷಯಗಳನ್ನು ಆತ ಸಂಗ್ರಹಿಸಿರುವುದವರೂ ಹೇಗೆ? ನಿಖಿಲ್ಗೂ ತಿಳಿಯದ ಕೆಲವು ವಿಚಾರಗಳು ತನ್ನ ಮನಸ್ಸನ್ನು ಕೊರೆಯುತ್ತಲಿತ್ತಲ್ಲವೆ? ಅದನ್ನು ಯಾರ ಬಳಿ ಹೇಳಿಕೊಳ್ಳಲಿ? ಹೀಗೆ ಆತ್ಮೀಯತೆ ತೋರಿದರೆ ಎಲ್ಲವನ್ನೂ ಹೇಳಿ ಬಿಡಬೇಕೆನ್ನುವ ಧಾವಂತ ತನ್ನಲ್ಲಿದೆ. ಆದರೆ ತನ್ನ ಬಗ್ಗೆ ಕೆಟ್ಟ ಭಾವನೆ ಬರುವಂತೆ ತಾನು ನಡೆದುಕೊಂಡ ಹಾಗಲ್ಲವೆ?

ದೇಶ ಸೇವೆಗೆ ಟೊಂಕಕಟ್ಟಿ ನಿಂತವರು ನೀವು. ನಿಮ್ಮನ್ನು ಆರಾಧಿಸೋ ಸಾಮಾನ್ಯ ಜನರು ನಾವು ಅವಳಿಂದ ಬಂದ ಮಾತುಗಳಲ್ಲಿ ಅರ್ಥವನ್ನು ಹುಡುಕುತ್ತಿದ್ದ ಅಶುತೋಶ್ ಅವಳ ಕಪ್ಪಗಿನ ನಯನಗಳನ್ನೇ ನೋಡುತ್ತಿದ್ದ. ಅರಿವಿಲ್ಲದ ಸೆಳೆತವೊಂದು ಅವನನ್ನು ಪ್ರೀತಿಯ ಕಡಲಿಗೆ ನೂಕಿತು.

ಅವನ ಮನದ ಭಾವನೆಗಳಿಗೆ ಲಗ್ಗೆಯಿಟ್ಟ ಆ ನೇತ್ರಗಳನ್ನು ಮರೆಯಲಾರದಂತೆ ಆತನ ಮೆದುಳಿನೊಳಗೆ ಹೂತು ಹೋದವು. ಅವಳು ಏನೆಂದುಕೊಳ್ಳುತ್ತಾಳೋ ಏನೊ ಅನ್ನುವುದು ಕೂಡ ಆತನ ಅರಿವಿಗೆ ಬರಲಿಲ್ಲ. ಸ್ನೇಹಮಯಿಯಾಗಿದ್ದ ಆ ಮುಖ ಭಾವನೆ ಅವನಲ್ಲಿ ಬಹಳವಾಗಿ ಉಳಿದಿದ್ದು ಕೀಳರಿಮೆಯ ತೆರೆಯನ್ನು ಸರಿಸಿತು.

ಮನಸ್ವಿತಾ ಅವನ ಮುಖದಲ್ಲಿ ಮೂಡಿದ್ದ ನವ ಭಾವನೆಗಳಿಗೆ ಸ್ಪಂದಿಸದೆ ನೇರವಾಗಿ ಅವನನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಯತ್ನಿಸಿದಳು. ತಾನು ಎಥಿಕಲ್ ಹ್ಯಾಕಿಂಗ್ನಿಂದ ಕಂಡು ಹಿಡಿಯ ಬೇಕಿದ್ದ ವ್ಯಕ್ತಿಯೇ ಈ ರೀತಿಯಾಗಿ ತನ್ನೆದುರು ಅನಾವರಣಗೊಳ್ಳುತ್ತಾನೆನ್ನುವುದನ್ನು ಕನಸಿನಲ್ಲಿಯೂ ಕಂಡಿರಲಿಲ್ಲ. ಅವಳೂ ವಿಚಲಿತಳಾಗದೆ ಹಾಗೆ ನೋಡುತ್ತಿದ್ದಂತೆ ಮಂದಸ್ಮಿತವೊಂದು, ಮಲ್ಲಿಗೆಯ ಮೊಗ್ಗು ಬಿರಿದಂತೆ ಅವಳ ತುಟಿಗಳಲ್ಲಿ ಕಂಡಿತು.

ಹೊ! ಕ್ಷಮಿಸಿ ನೀವು ನನ್ನ ಹೊಗಳ್ತಾ ಇದ್ದ ಹಾಗೆ... ನಾನು ಆಕಾಶದಲ್ಲಿಯೇ ತೇಲಿದೆನೇನೊ... ಆತರ ಅನುಭವವಾಯ್ತು ಅವಳ ತುಟಿಗಳು ಮತ್ತಷ್ಟು ಬಿರಿದು ಅಚ್ಚ ಬಿಳುಪು ಮಲ್ಲಿಗೆಯೆ ಪೂರಾ ಅರಳಿದಂತೆ ಕಂಡಿತು.
ನಿಮ್ಮನ್ನು ಹೊಗಳುವ ಮಾತಲ್ಲ ಅದು. ಇದ್ದ ವಿಷಯವನ್ನು ಹೇಳ್ಬಿಟ್ಟೆ. ಗನ್ ಹಿಡಿದು ಗಂಭೀರವಾಗಿರೋ ನಿಮ್ಮ ವ್ಯಕ್ತಿತ್ವ ಈ ರೀತಿ ಭಾವುಕತೆಯಿಂದ ತುಂಬಿದ್ರೆ ಹೇಗೆ?

ಅವಳ ಮಾತು ತನ್ನನ್ನು ತಮಾಷೆ ಮಾಡಲೆಂದೇ ಹೇಳಿದಂತೆ ಕಂಡಿತು. ಆದರೂ ಮುಖದ ಬಿಗು ಸಡಿಲಿಸಿಕೊಂಡೆ ಹೇಳಿದ.
ಗನ್ ಹಿಡಿಯೊ ಕೈಗಳಿಗೆ ಭಾವನೆಗಳಿಲ್ಲಾಂತನಾ? ಕಲ್ಲು ಹೃದಯದಲ್ಲಿಯೂ ಭಾವನೆಗಳನ್ನು ಬಿತ್ತುವ ನಿಮ್ಮ ವ್ಯಕ್ತಿತ್ವದೆದುರು ನಾನು ಎಷ್ಟೇ ಶಿಸ್ತಿನ ಸಿಪಾಯಿಯಾದರೂ ಸೋತು ಬಿಡ್ತೀನಿ. ಹಾಗಿರುವಾಗ...
ಹೊಗಳಿಕೆ ಅತಿಯಾಯ್ತು ಅನಿಸ್ತಿದೆ. ಹಾಗಾದ್ರೆ ನಾನೊಂದು ಮಾತು ಕೇಳ್ಲಾ? ಅವಳ ಮಾತುಗಳಲ್ಲಿ ಸಂಕೋಚಕ್ಕಿಂತಲೂ ಕೇಳಬೇಕೊ ಬೇಡವೊ ಅನ್ನುವ ಜಿಜ್ಞಾಸೆಯಿತ್ತು.

ಇದ್ದ ವಿಷಯ ಹೇಳ್ಬಿಟ್ಟೆ ಹೊರತು ನಿಮ್ಮನ್ನು ಹೊಗೊಳೊ ಪ್ರಯತ್ನ ಮಾಡಿಲ್ಲ. ಹಾಗೆ ಹೊಗೊಳೋದಿಕ್ಕೆ ಹೋದ್ರೆ ನನ್ನತ್ರ ಪದಗಳೇ ಇಲ್ಲವೇನೊ? ನಿಮ್ಮಲ್ಲೇನೊ ಕ್ಲಾಶ್ ಇದ್ದ ಹಾಗಿದೆ. ಸಂಕೋಚದ ಹುಡುಗಿಯಂತು ಅಲ್ಲ ನೀವು. ಕೇಳಬೇಕೆಂದಿರುವುದನ್ನು ನೇರವಾಗಿ ಕೇಳ್ಬಿಡಿ ಆತ ನಗುಮೊಗದಿಂದಲೇ ಹೇಳುವಾಗ ಅವಳಿಗೆ ಒಂದು ಕ್ಷಣ ಪೀಠಿಕೆ ಹಾಕಬಾರದಿತ್ತೇನೊ ಅನಿಸಿತು.

ನೇರವಾಗಿ ಕೇಳಿಬಿಡಿ ಅಂದ್ರಿ... ಹಾಗಿದ್ದೂ ಅನಾಮಿಕನ ತರ ಇನ್ನೊಬ್ಬರ ವಿಷಯಗಳನ್ನು ತಿಳಿದುಕೊಂಡು ಏನೂ ಗೊತ್ತಿಲ್ಲದಂತೆ ಇದ್ದು ಬಿಡೋದು ಯಾವ ನ್ಯಾಯ? ಇದು ಇನ್ನೊಬ್ಬರನ್ನು ಹಾದಿ ತಪ್ಪಿಸುವ ನೀತಿಯಲ್ಲವೆ?
ಏನೊಂದು ಅರ್ಥವಾಗದಂತೆ ಕಕ್ಕಾಬಿಕ್ಕಿಯಾದ ಅಶುತೋಶ್ ಒಮ್ಮೆ ಬಾಗಿಲಕಡೆಗೆ ದೃಷ್ಟಿ ಹಾಯಿಸಿ, ನೀವು ಈಗ ಪ್ರಶ್ನಿಸುತ್ತಿರೋದು ನನ್ನನ್ನೇ? ಅಂದ.

ಈ ಕ್ಯಾಬಿನ್ನಲ್ಲಿ ಬೇರೆ ಯಾರಿದ್ದಾರೆ? ನಿಮ್ಮನ್ನೇ ಕೇಳ್ತಾ ಇದ್ದೇನೆ
ಹಾಗಿದ್ಮೇಲೆ ಈಗ ಹೇಳಿ. ನೀವು ಯಾವ ವಿಷಯದ ಬಗ್ಗೆ ಮಾತಾಡ್ತಾ ಇದ್ದೀರಿ. ಮತ್ತು ಅದನ್ನು ಸರಿಯಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಹೇಳಿ
ಎಲ್ಲವನ್ನೂ ಬಾಯಿ ಬಿಟ್ಟು ಹೇಳಿದ್ರೆ... ನಿಮಗೂ ನನಗೂ ಗೊತ್ತಿರೋದನ್ನೇ ಮತ್ತೆ ಮತ್ತೆ ಹೇಳಿದ ಹಾಗಾಗುತ್ತಲ್ವೆ? ಅದಕ್ಕೆ ನಿಮ್ಮ ಮುಗ್ಧತೆಯ ನಾಟಕ ಬಿಟ್ಟು ನೇರವಾಗಿ ಮಾತಿಗೆ ಬನ್ನಿ ಅಂದೆ
ಅವನ ಮುಖದಲ್ಲಿ ಕಾರ್ಟೂನ್ಗಳಲ್ಲಿ ಬಳಕೆಯಲ್ಲಿ ಬರುವ ಚಿತ್ರ ವಿಚಿತ್ರ ಚಿಹ್ನೆಗಳು ಮೂಡಿದವು.

ನಾಟಕ ಅಂತಿದ್ದೀರಿ. ನಾನು ನಿಮ್ಮ ಕಣ್ಣಿಗೆ ಒಬ್ಬ ಕನ್ನಿಂಗ್ ತರ ಕಾಣಿಸುತ್ತಿದ್ದೇನೆಯೆ? ಅವನ ಮಾತಿನ ಹಿಂದೆ ನೋವಿನ ಎಳೆಯಿರುವುದು ಸ್ಪಷ್ಟವಾಯಿತು. ಕ್ಷಣ ಹೊತ್ತು ಮನಸ್ವಿತಾಳಿಗೂ ಗೊಂದಲವಾಯಿತು.
ತನಗೆ ಇ-ಮೇಲ್ ಕಳುಹಿಸುತ್ತಿರುವುದು ಅಶುತೋಶ್ ಆಗಿರಲಾರನೆ? ಈ ರೀತಿ ತನ್ನ ಜೊತೆಗೆ ಬಹಳ ಆತ್ಮೀಯನಾಗಿರುವ ವ್ಯಕ್ತಿ ತನ್ನ ವೈಯಕ್ತಿಕ ವಿಷಯಗಳನ್ನು ತಿಳಿದಿಲ್ಲವೆ? ಯಾಕಾಗಿ ಇಷ್ಟೊಂದು ಗೊಂದಲಗಳು ಸೃಷ್ಟಿಯಾಗುತ್ತಿವೆ? ನಿಖಿಲ್ ನೇರವಾಗಿ ತನ್ನ ಮನದ ಭಾವನೆಯನ್ನು ಬಿಚ್ಚಿಟ್ಟ ನಂತರ ತಾನೇಕೆ ಅದನ್ನು ಪುರಸ್ಕರಿಸದೆ ಹೋದೆ? ಯಾವುದೋ ಕಾಣದ ಒಂದು ಇ-ಮೇಲ್ ಕಳುಹಿಸುವ ವ್ಯಕ್ತಿಯೇ ತನ್ನ ಹೃದಯದಲ್ಲಿ ಕುಳಿತಿರುವನೆ? ಅಥವಾ ತನ್ನ ಮನೆಯ ಪರಿಸ್ಥಿತಿಯನ್ನು ಮುಚ್ಚಿಡುವುದಕ್ಕಾಗಿ ಮತ್ತು ಕೀಳರಿಮೆಯೊಂದು ತನ್ನನ್ನು ಆತನ ಆಹ್ವಾನವನ್ನು ಒಪ್ಪಿಕೊಳ್ಳುವುದಕ್ಕೆ ತಡೆಯಾಗುತ್ತಿದೆಯೆ? ಹಾಗಲ್ಲದಿದ್ದರೆ ನಿಖಿಲ್ ತನ್ನ ಅಧಿಕಾರಿ ಅನ್ನುವ ಗೌರವ ಹಾಗೆ ಮಾಡಿತೆ? ಯೋಚನೆಗಳೆಲ್ಲಾ ಒಮ್ಮೆಗೆ ತಡೆಯೊಡ್ಡಿದಂತಾಯಿತು. ಅಶುತೋಶ್ ಹಾಗೆ ಕುಳಿತಿದ್ದ.

ಕ್ಷಮಿಸಿ, ಏನೋ ನನ್ನಲ್ಲಿಯೇ ಕೆಲವು ಗೊಂದಲಗಳು ಇದ್ದವು. ಅದಕ್ಕೆ ನಿಮ್ಮನ್ನೇ ಗುರಿಯಾಗಿಸಿದೆನೇನೊ? ದಯವಿಟ್ಟು ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ
ಅವನಿಗೆ ಈಗ ಸ್ಪಷ್ಟವಾಗತೊಡಗಿತು. ಯಾವುದೋ ಗಂಭೀರ ಸಮಸ್ಯೆಯನ್ನು ಅವಳು ಎದುರಿಸುತ್ತಿದ್ದಾಳೆ ಅನಿಸಿತು. ತನ್ನ ಸ್ನೇಹ ಪರಿಧಿಯಲ್ಲಿ ಅದನ್ನು ಹೇಳಿಕೊಳ್ಳಲಿ ಅನ್ನುವ ಭಾವನೆ ಮೂಡಿತು.

ಅಂದ್ರೆ, ಯಾರೋ ನಿಮ್ಮನ್ನು ಟ್ರಾಪ್ ಮಾಡ್ತಾ ಇದ್ದಾರೆ ಅನ್ಸುತ್ತೆ
ಟ್ರಾಪ್ ಮಾಡ್ತಾ ಇಲ್ಲ... ಆದ್ರೆ ನನ್ನನ್ನು ಪರೋಕ್ಷವಾಗಿ ಪ್ರಪೋಸ್ ಮಾಡ್ತಾ ಇದ್ದಾರೆ. ಆ ವ್ಯಕ್ತಿ ನೀವೇ ಏನೋ ಅನಿಸ್ತು... ತಟ್ಟನೆ ತುಟಿ ಕಚ್ಚಿ ಹಿಡಿದಳು.
ಹಾಗಿದ್ರೆ ನಾನ್ಯಾಕೆ ಸುತ್ತಿ ಬಳಸಿ ಮಾತಾಡ್ತಾ ಇದ್ದೆ? ನೇರವಾಗಿ ನಿಮ್ಮನ್ನು ಪ್ರಪೋಸ್ ಮಾಡ್ತಿದ್ದೆ. ಸದ್ಯಕ್ಕೆ ಆ ಸಂದರ್ಭ ಬಂದಿಲ್ಲ... ಬಂದಾಗ ನಾನೇ ಮಾಡ್ತೀನಿ
ಅಲ್ಲಿಯವರೆಗೂ ಏನೇನೊ ಭಾವನೆಗಳನ್ನು ಹೆಣೆದುಕೊಂಡಿದ್ದ ಅವಳಲ್ಲಿ ನಿರ್ಲಿಪ್ತತೆ ತುಂಬಿ ಮುಖ ಕಾಂತಿಯನ್ನು ಕಳೆದುಕೊಂಡತಾಯಿತು. ಮಾತು ಕ್ಷೀಣವಾಯಿತು.

ಆದ್ರೆ, ನನ್ನ ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆಯೂ ಹೇಳಿಕೊಳ್ಬೇಕೆನ್ನುವ ಮನಸಿಲ್ಲ. ಇದನ್ನು ನೀವು ಅರ್ಥ ಮಾಡಿಕೊಂಡಿದ್ದೀರಿಂತ ತಿಳೀತೀನಿ.ಅದರ ಬಗ್ಗೆ ನಂಗೆ ಆಸಕ್ತಿನೂ ಇಲ್ಲ. ಸಪೋಸ್, ನೀವು ಇಷ್ಟ ಆದ್ರೆ ನಾನು ನೇರವಾಗಿ ಪ್ರಪೋಸ್ ಮಾಡುವವನು. ಇಲ್ಲಿ ನಿಮ್ಮ ಹಿನ್ನಲೆ, ಸಮಸ್ಯೆ, ವೈಯಕ್ತಿಕ ಸಂಕಟಗಳು ನನಗೆ ಬೇಕಾಗಿಲ್ಲ. ಎಷ್ಟಾದರೂ ನಮ್ಮ ಮದುವೆಯ ನಂತರ ನೀವು ಹೊಂದಿಕೊಂಡು ಹೋದರೆ ಸಾಕು. ಅದು ನನಗೆ ಬೇಕಾಗಿರೋದು ಏನೊ ಒಂದು ರೀತಿಯ ತೀರ್ಮಾನ ತೆಗೆದುಕೊಂಡವರಂತೆ ಆತ ಹೇಳಿದ ಬಳಿಕ ಮಾತಾಡಿ ತಪ್ಪು ಮಾಡಿದನೇನೊ ಅನಿಸದಿರಲಿಲ್ಲ ಮನಸ್ವಿತಾಳಿಗೆ.

ಉತ್ತರಿಸುವ ಪರಿಯೇ ಇಲ್ಲದಂತಾಗಿದ್ದು ಇದೇ ಮೊದಲು ಅಶುತೋಶ್ ಇಷ್ಟೊಂದು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾತನೆಂದು ತಿಳಿದಿರಲಿಲ್ಲ.ಅಷ್ಟರಲ್ಲಿ ಬಾಗಿಲು ತೆರೆದುಕೊಂಡಿತು. ಮನಸ್ವಿತಾ ಸರಿಯಾಗಿ ಹಿಂದಕ್ಕೆ ಒರಗಿ ಕುಳಿತಳು.

...ಮುಂದುವರಿಯುವುದು...

0 comments:

Post a Comment