ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ: ಹೇಮಾಮಾಲ ಬಿ.ಮೈಸೂರು.
ಗಣರಾಜ್ಯೋತ್ಸವ ದಿನವಾದ ಜನವರಿ 26 ಶನಿವಾರ ಹಾಗೂ ಮರುದಿನ ಭಾನುವಾರದ ರಜೆಯೂ ಇದ್ದುದರಿಂದ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಚಾರಣ ಏರ್ಪಡಿಸಿದ್ದರು.ಜನವರಿ 25 ರಂದು ರಾತ್ರಿ, ಸುಮಾರು 20 ಜನರಿದ್ದ ನಮ್ಮ ತಂಡ ಮೈಸೂರು ಬಿಟ್ಟಿತು. ಚಿಕ್ಕಮಗಳೂರು ಜಿಲ್ಲೆಯ ಕಳಸ ಮಾರ್ಗವಾಗಿ ಪ್ರಯಾಣಿಸಿ ಸಂಸೆ ಎಂಬ ಪುಟ್ಟ ಊರು ತಲಪಿದಾಗ ಬೆಳಗಾಗಿತ್ತು. ಊರು ಅಂದರೆ ಅಲ್ಲಿದ್ದುದು ಎರಡು ಅಂಗಡಿಗಳು, ಎರಡು ಜೀಪ್ ಗಳು, ಪುಟ್ಟ ನದಿ, ಅದಕ್ಕೊಂದು ಸೇತುವೆ,ಪುಟ್ಟ ಕವಲು ದಾರಿ ಅಷ್ಟೆ. ಚಳಿ ಜೋರಾಗಿಯೇ ಇತ್ತು. ಹಾಗಾಗಿ ಸೇತುವೆ ಮೇಲೆ ನಿಂತು ಬಿಸಿಲು ಕಾಯಿಸುವುದು ಬಹಳ ಹಿತವಾಗಿತ್ತು.


ಅಲ್ಲಿಂದ ಮುಂದಕ್ಕೆ ಕಲ್ಲು-ಮಣ್ಣಿನ ತೀರ ಕಿರಿದಾದ ರಸ್ತೆಯ ಮೂಲಕ ನಡೆದು ಅಥವಾ ಜೀಪಿನಲ್ಲಿ ಪ್ರಯಾಣಿಸಿ 'ಮುಲ್ಲೋಡಿ ಸತೀಶ್' ಅವರ ಮನೆಗೆ ತಲಪಬೇಕಾಗಿತ್ತು. ಆಗಲೇ ವಿಳಂಬವಾಗಿದ್ದರಿಂದ ನಾವು ನಾಲ್ಕು ಮಂದಿ ಮಹಿಳೆಯರು ಎಲ್ಲರ ಲಗ್ಗೇಜ್ ನೊಂದಿಗೆ ಜೀಪಿನಲ್ಲಿ ಹೊರಟೆವು. ಇತರರು ಕಾಲ್ನಡಿಗೆಯಲ್ಲಿ ಬಂದರು. ಸಂಸೆಯಿಂದ ಮುಲ್ಲೋಡಿಗೆ ಸುಮಾರು 6 ಕಿ.ಮಿ. ದೂರ. ತೀರ ಇಕ್ಕಾಟ್ಟಾದ ಈ ದಾರಿಯಲ್ಲಿ ಜೀಪಿನ ಮೂಲಕ ಪ್ರಯಾಣಿಸಿ ಮುಲ್ಲೋಡಿ ತಲಪುವಷ್ಟರಲ್ಲಿ ಟೊರಟೊರ - ಜೈಂಟ್ ವೀಲ್ ನಲ್ಲಿ ಕುಳಿತ ಅನುಭವ.ಮುಲ್ಲೋಡಿ ಮನೆಯಿಂದ ಕುದುರೆಮುಖ ಶಿಖರದ ಕಡೆಗೆ ಚಾರಣಕ್ಕೆ ಹೊರಟ್ಟಾಗ ಬೆಳಗ್ಗೆ 10.30 ಘಂಟೆ ಕಳೆದಿತ್ತು. ಕಲ್ಲು-ಮಣ್ಣಿನ ದಾರಿಯಲ್ಲಿ ನಿಧಾನವಾಗಿ ಬೆಟ್ಟವೇರತೊಡಗಿದೆವು. ಸ್ವಲ್ಪ ದೂರದಲ್ಲಿ ಕಾಡು ಸಿಕ್ಕಿತು, ಕಾಡಲ್ಲೊಂದು ಪುಟ್ಟ ತೊರೆ, ಆಮೇಲೆ ಹುಲ್ಲುಗಾವಲು...ಇದೇ ರೀತಿ ಪುನರಾವರ್ತನೆ ಆಗುತ್ತಾ ಸುಮಾರು ಒಂದು ಘಂಟೆ ನಡೆದಾದ 'ಒಂಟಿಮರ' ಕಟ್ಟೆ ಸಿಕ್ಕಿತು. ಅಲ್ಲಿ ಸ್ವಲ್ಪ ಹೊತ್ತು ಕುಳಿತು, ಸೌತೆಕಾಯಿ, ಹಣ್ಣು, ಕುರುಕಲು ತಿಂಡಿ ಇತ್ಯಾದಿ ತಿಂದು ಹೊರಟೆವು. ಈ ಚಾರಣದ ದಾರಿಯಲ್ಲಿ ಉದ್ದಕ್ಕೂ ಹುಲ್ಲುಗಾವಲು, ದಟ್ಟವಾದ ಶೋಲಾ ಅರಣ್ಯಗಳು, ಹಸಿರಾದ ಬೆಟ್ಟಗಳು, ನೀರಿನ ತೊರೆಗಳು ಲಭಿಸುತ್ತವೆ. ಅದೃಷ್ಟವಿದ್ದರೆ ಕಾಡು ಮೃಗಗಳೂ ಕಾಣ ಸಿಗುತ್ತವಂತೆ. ಅಲ್ಲೊಂದು ಕಡೆ 'ಲೋಬೊ ಮನೆ' ಎಂದು ಕರೆಯಲ್ಪಡುವ ಪಾಳುಬಿದ್ದ ಮನೆ ಕಾಣಸಿಗುತ್ತದೆ.


ಮತ್ತೂ ಸ್ವಲ್ಪ ಮುನ್ನಡೆದಾಗ ಬಿಸಿಲು, ಹಸಿವು ಎರಡೂ ಹೆಚ್ಚಾಗಿತ್ತು. ಎದುರುಗಡೆಯಿಂದ ಶಿಖರ ಹತ್ತಿ ಕೆಳಗಿಳಿದು ಬರುತ್ತಿದ್ದ ಕೆಲವರನ್ನು ವಿಚಾರಿಸಿದಾಗ ಇನ್ನು ಹೆಚ್ಚು ದೂರವಿಲ್ಲವಾದರೂ ಮುಂದಿನ ಬೆಟ್ಟ ತುಂಬಾ ಕಡಿದಾಗಿದೆಯೆಂದೂ ಕನಿಷ್ಟ 3 ಘಂಟೆ ಬೇಕಾಗುತ್ತದೆಯೆಂದೂ ಹೇಳಿದರು! ಹಾಗಾದರೆ ನಾವು ಇನ್ನು ಮುಂದುವರಿದರೆ, ಶಿಖರ ತಲಪುವಷ್ಟರಲ್ಲಿ ಸಂಜೆಯಾಗಬಹುದು, ಆಮೇಲೆ ಮುಲ್ಲೋಡಿಗೆ ಹಿಂತಿರುಗುವಷ್ಟರಲ್ಲಿ ರಾತ್ರಿಯಾಗುವದರ ಜತೆಗೆ ನಮ್ಮಲ್ಲಿ ಚೈತನ್ಯ ಇರಲಾರದು ಅನಿಸಿತು. ಹಾಗಾಗಿ ಅಲ್ಲಿ ನೆರಳಿರುವ ಕಡೆ ವನಭೋಜನ ಮಾಡಿ ಹಿಂತಿರುಗುವುದೆಂದು ನಿಶ್ಚಯಿಸಿದೆವು. ನಮ್ಮ ತಂಡದ ಕೆಲವು ಉತ್ಸಾಹೀ ತರುಣರು ಶಿಖರವೇರಿ ಧ್ವಜ ಹಾರಿಸಿ ಬರುತ್ತೇವೆಂದು ಹೊರಟರು. ಅವರು ನುಡಿದಂತೆ ಸಾಧಿಸಿದ ಶಿಖರಗಾಮಿಗಳು!


ಮುಲ್ಲೋಡಿ ಮನೆಯಿಂದ ಮಧ್ಯಾಹ್ನದ ಊಟಕ್ಕೆ ಚಿತ್ರಾನ್ನ ಕೊಟ್ಟಿದ್ದರು. ನಾವು ಕೆಲವರು ಚಾರಣವನ್ನು ಅಲ್ಲಿಗೇ ನಿಲ್ಲಿಸಿ ಕುದುರೆಮುಖ ಶಿಖರಕ್ಕೆ ಸಮೀಪ ಬಂದುದಕ್ಕೆ ತೃಪ್ತಿ ಪಟ್ಟೆವು. ಬಂದ ದಾರಿಯಲ್ಲಿ ಹಿಂತಿರುಗಿ, ಸಂಜೆ 7 ಘಂಟೆಗೆ ಮುಲ್ಲೋಡಿ ಮನೆ ತಲಪಿದೆವು. ಟೀ-ಬಜ್ಜಿ ಸೇವಿಸಿ, ಆ ಮನೆಯ ಸದಸ್ಯರೊಂದಿಗೆ ಒಂದಿಷ್ಟು ಹರಟೆ ಹೊಡೆಯುವಷ್ಟರಲ್ಲಿ ಅಂಗಳದಲ್ಲಿ 'ಕಾಂಪ್ ಫೈರ್' ಹಾಕಿದ್ದರು. ಹಗಲಿನ ವೇಳೆ ಸೆಖೆಯಿದ್ದರೂ ರಾತ್ರಿ ಅಲ್ಲಿ ತುಂಬಾ ಚಳಿಯಿತ್ತು. ಕಾಂಪ್ ಫೈರ್ ಪಕ್ಕ ಚಳಿಕಾಯಿಸುತ್ತಾ ಸವಿದ ಚಪಾತಿ-ಪಲ್ಯ, ಪಲಾವ್-ಗೊಜ್ಜಿನ ಊಟ ಅದ್ಭುತವಾಗಿತ್ತು.ಆ ದಿನ ಅಲ್ಲಿಗೆ ಬೆಂಗಳೂರಿನಿಂದಲೂ ಒಂದು ತಂಡ ಬಂದಿತ್ತು. ನಮ್ಮ ತಂಡ ಸತೀಶ್ ಅವರ ಮನೆಯಲ್ಲಿ ಮಲಗಿದರೆ,ಆ ತಂಡದವರು ಅಂಗಳದಲ್ಲಿ ಟೆಂಟ್ ಒಳಗೆ ಮಲಗಿದರು.


ಮುಲ್ಲೋಡಿ ಮನೆಯ ಮುಂದೆ ಕಾಫಿ ತೋಟ, ಸುತ್ತಲೂ ಕೋಟೆ ಕಟ್ಟಿದ ಕುದುರೆಮುಖ ಬೆಟ್ಟಗಳು, ಪಕ್ಕದಲ್ಲಿ ಸೋಮಾವತಿ ಜಲಪಾತ, ಸುತ್ತ ಮುತ್ತ ಹೆಸರು ಗೊತ್ತಿಲ್ಲದ ವನಸುಮಗಳ ರಾಶಿ,ಪಕ್ಕದಲ್ಲಿ ಹಸುವಿನ ಕೊಟ್ಟಿಗೆ, ಅಂಗಳದಲ್ಲಿ ಕಾಳು ಹೆಕ್ಕಿ ತಿನ್ನುವ ಕೋಳಿಗಳು, ನಿರಂತರವಾಗಿ ಪೈಪ್ ನಲ್ಲಿ ಹರಿದುಹೋಗುವ ನೀರು, ಹಿಟ್ಟು ರುಬ್ಬುವ ಕಲ್ಲು, ಸೌದೆ ಒಲೆಯಲ್ಲಿ ಅಡಿಗೆ, ಒಲೆಯ ಮುಂದೆಯೇ ಕುಳಿತು ಬಿಸಿ ಉಪ್ಪಿಟ್ಟು ತಿಂದು ಬೆಲ್ಲದ ಕಾಫಿ ಕುಡಿಯುತ್ತಿದ್ದ ತಿನ್ನುತ್ತಿದ್ದ ಮನೆಯ ಯಜಮಾನ ಶೇಷಪ್ಪ...ಒಟ್ಟಾರೆಯಾಗಿ ಅಪ್ಪಟ ಮಲೆನಾಡಿನ ಚಿತ್ರಣ. ಬೆಟ್ಟದ ಮೇಲೆ ಮನೆ ಮಾಡಿರುವ ಅವರಿಗೆ ಅತಿಥಿಗಳ ಊಟವ್ಯವಸ್ಥೆ ನೋಡಿಕೊಳ್ಳುವುದು ಸುಲಭವಲ್ಲ. ಆದರೂ ಸತೀಶ್ ಅವರ ಮನೆಯರೆಲ್ಲರೂ ತಮ್ಮ ಪರಿಮಿತಿಯಲ್ಲಿ, ನಮ್ಮನ್ನು ಆತ್ಮೀಯವಾಗಿ ಉಪಚರಿಸಿ ಊಟ, ಉಪಾಹಾರ, ಸ್ನಾನ, ವಿಶ್ರಾಂತಿಗೆ ಅನುವು ಮಾಡಿಕೊಟ್ಟರು. ಅವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳು.


ಮುಲ್ಲೋಡಿ ಮನೆಯಲ್ಲಿ ಚಾರಣಿಗರಿಗೆ ಕುದುರೆಮುಖ ಚಾರಣದ ಬಗ್ಗೆ ಮಾಹಿತಿ, ಸಿಗುತ್ತದೆ. ಮುಂಚಿತವಾಗಿ ಸಂಪರ್ಕಿಸಿದರೆ ಅರಣ್ಯ ಇಲಾಖೆಯೀಂದ ಅನುಮತಿ ಪತ್ರ, ಊಟೋಪಚಾರ, ವಾಸ್ತವ್ಯ ಹಾಗೂ ಮರ್ಗದರ್ಶಕರನ್ನು ಒದಗಿಸುತ್ತಾರೆ. ಮಾಡುತ್ತಾರೆ. ಆಸಕ್ತರು ಇವರ ಸಹಾಯದಿಂದ ಮಿತವ್ಯಯದಲ್ಲಿ ಕುದುರೆಮುಖ ಚಾರಣ ಕೈಗೊಳ್ಳಬಹುದು. ಅವರ ವಿಳಾಸ: ಸತೀಶ್, ಮುಲ್ಲೋಡಿ ಹೌಸ್, ಸಂಸೆ. 577124 ಫೋನ್ : 08263 249595


ಮರುದಿನ ಬೆಳಗ್ಗೆ ಮುಲ್ಲೋಡಿ ಮನೆಯಿಂದ ಉಪಾಹಾರ ಸೇವಿಸಿ ಹೊರಟೆವು. ದಾರಿಯಲ್ಲಿ ಸಿಕ್ಕಿದ 'ಕಡಾಂಬಿ' ಜಲಪಾತವನ್ನು ದೂರದಿಂದ ನೋಡಿದೆವು. ಇನ್ನೂ ಸ್ವಲ್ಪ ಮುಂದೆ 'ಗಂಗಾ ಮೂಲ' ಎಂಬ ಸ್ಥಳಕ್ಕೆ ಒಂದು ಕಿ.ಮಿ. ನಡೆದು ಕೆಲವರು ಹೋಗಿ ಬಂದರು. ಕುದುರೆಮುಖ ಪಟ್ಟಣದಲ್ಲಿರುವ 'ಲಕ್ಯಾ' ಅಣೆಕಟ್ಟಿಗೂ ಭೇಟಿ ಕೊಟ್ಟೆವು. ಈ ಅಣೆಕಟ್ಟಿನಲ್ಲಿ ಹಿಂದೆ ಕಬ್ಬಿಣದ ಅದಿರು ಸಂಸ್ಕರಣ ಕಾರ್ಯದಲ್ಲಿ ಮಲಿನವಾದ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಗಣಿಗಾರಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಈ ಅಣೆಕಟ್ಟು ಒಣಗಿ ಭಣಗುಟ್ಟುತ್ತಿದೆ.ಆಮೇಲೆ ಸಿಕ್ಕಿದುದು 'ಹನುಮಾನ್ ಗುಂಡಿ' ಎಂಬ ಜಲಪಾತ. ಇಲ್ಲಿ ದಟ್ಟ ಕಾಡಿನಲ್ಲಿ 300 ಮೆಟ್ಟಿಲು ಕೆಳಗಿಳಿಯಬೇಕು. ಜಲಪಾತ ತುಂಬಾ ಸೊಗಸಾಗಿತ್ತು. ಅನಂತರ ಶೃಂಗೇರಿ ಮಾರ್ಗವಾಗಿ ಮೈಸೂರಿಗೆ ತಲಪಿದಾಗ ರಾತ್ರಿಯಾಗಿತ್ತು. ವಿಭಿನ್ನ ಪರಿಸರ ಹಾಗೂ ಮಲೆನಾಡಿನ ಸರಳ ಮನೆಯ ವಾಸ್ತವ್ಯದ ಅವಕಾಶ ಕಲ್ಪಿಸಿದ ಈ ಚಾರಣ ತುಂಬಾ ಚೆನ್ನಾಗಿತ್ತು. ಈ ಬಾರಿ ಕುದುರೆಮುಖ ಶಿಖರವೇರದಿದ್ದರೂ ಮರಳಿ ಯತ್ನವ ಮಾಡಬೇಕೆಂಬ ಛಲ ಮೂಡಿಸಿತು.

0 comments:

Post a Comment