ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಷ್ಟ್ರ - ಅಂತಾರಾಷ್ಟ್ರ
ಕಳೆದ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಸಂಘ (ಸಿಂಗಪುರ)ವು, ವುಡ್‌ಲ್ಯಾಂಡ್ಸ್ ಸಿಸಿಯ ಸಹಯೋಗದಲ್ಲಿ ಸಂಕ್ರಾಂತಿ ಹಬ್ಬವನ್ನು ವುಡ್‌ಲ್ಯಾಂಡ್ಸ್ ಸಿಸಿಯಲ್ಲಿ ಆಯೋಜಿಸಿ, ಆಚರಿಸಿತು.

ಬಹು ಜನಾಂಗೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಆಚರಣೆಯು "ರಂಗೋಲಿ"ಯ ಸ್ಪರ್ಧೆಯೊಂದಿಗೆ ಶುರುವಾಗಿದ್ದು ವಿಶೇಷವಾಗಿತ್ತು. ಹೆಂಗಳೆಯರು ತಮ್ಮ ಮಕ್ಕಳೊಂದಿಗೆ ಹಬ್ಬದ ಉಡುಗೆ-ತೊಡುಗೆಗಳಲ್ಲಿ ಬಂದು ರಂಗೋಲಿ ಸ್ಪರ್ಧೆಗೆ ತಮಗೆಂದು ಕಾಯ್ದಿರಿಸಿದ್ದ ಜಾಗಗಳಲ್ಲಿ ತಾವೇ ಸ್ವತಃ ತಂದುಕೊಂಡಂತಹ ವಿವಿಧ ಬಣ್ಣ ಹಾಗೂ ಸಾಮಗ್ರಿಗಳೊಂದಿಗೆ ತಮ್ಮ ರಂಗೋಲಿಯನ್ನು ರಂಗುಗೊಳಿಸುವಲ್ಲಿ ಮಗ್ನರಾಗಿದ್ದರು. ಭಾರತದ ವಿವಿಧ ಭಾಗಗಳಲ್ಲಿನ ವೈವಿಧ್ಯಮಯ ರಂಗೋಲಿಗಳ ವಿನ್ಯಾಸ ಹಾಗೂ ಬಣ್ಣಗಳನ್ನು ತುಂಬುವ ಪರಿಯನ್ನು ಎಲ್ಲರೂ ಪರೀಕ್ಷಿಸುತ್ತಾ ಯಾವುದಕ್ಕೆ ಬಹುಮಾನ ಬರಬಹುದೆಂಬ ಲೆಕ್ಕಗಳಲ್ಲಿ ತಲ್ಲೀನರಾಗಿದ್ದರೆ, ಮಕ್ಕಳು ಬಣ್ಣಗಳ ರಾಶಿಯನ್ನು ನೋಡಿ ಆನಂದಿಸುತ್ತಿದ್ದರು. ವಿಶ್ವದಲ್ಲೇ ಅತೀದೊಡ್ಡ ರಂಗೋಲಿಯನ್ನು ನಿರ್ಮಿಸಿ ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಿದ, ನಮ್ಮ ಸಂಘದ ಸದಸ್ಯರಾದ ಶ್ರೀಮತಿ ವಿಜಯ ಮೋಹನ್ ಅವರು ಈ ಸ್ಪರ್ಧೆಗೆ ತೀರ್ಪುಗಾರರಾಗಿ ಬಂದು ಎಲ್ಲಾ ರಂಗೋಲಿಗಳನ್ನು ವೀಕ್ಷಿಸುತ್ತಾ ರಂಗೋಲಿಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಿದ್ದರು.

ಒಂದು ಕಡೆ "ಪೊಂಗಲ್" ತಯಾರಿಸಲು ಕುಂಡಗಳು ಸಿದ್ಧಗೊಳ್ಳುತ್ತಿದ್ದರೆ, ಇನ್ನೊಂದೆಡೆ ಕಬ್ಬಿನ ತೆನೆಗಳನ್ನು ಜೋಡಿಸಿ, ಬಣ್ಣದ ಅಕ್ಕಿಯಿಂದ ಅಲಂಕೃತಗೊಂಡ ಸ್ಥಳವು ಪೂಜೆಗೆ ಸಿದ್ಧಗೊಳ್ಳುತಿತ್ತು, ಪುರೋಹಿತರು ಪೂಜೆಗೆ ತಮ್ಮ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದರೆ, ಗೋಪೂಜೆಗೆಂದು ಬಂದಿದ್ದ ಹಸು ಹಾಗೂ ಕರು ಈ ಕಾರ್ಯಕ್ರಮದ ವಿಶೇಷ ಅತಿಥಿಗಳೆಂದರೆ ತಪ್ಪಾಗಲಾರದು, ಚಿಣ್ಣರು ಗುಂಪು ಗುಂಪಾಗಿ ಇವುಗಳ ಜೊತೆ ಆಟವಾಡಿಕೊಳ್ಳುತ್ತಿದ್ದರು. ಇದೆಲ್ಲದರ ನಡುವೆ ಆನಂದಭವನದ ಕಾಫಿ-ಟೀ-ತಿಂಡಿಯ ಸರಬರಾಜು ಸರಾಗವಾಗಿ ನಡೆಯುತಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ Mr.Alex Tan - WL CCMC Chairman ಮತ್ತು Mr.Ng - Director Integration (PA) ಅವರ ಆಗಮನದ ನಂತರ ಶಾಸ್ತ್ರೋಕ್ತವಾದ ಪೂಜೆ ಹಾಗೂ ಪೊಂಗಲ್‌ನ ತಯಾರಿ, ಗೋ-ಪೂಜೆ ನಂತರ ಎತ್ತರದಲ್ಲಿ ಕಟ್ಟಿದ ಮಡಕೆಯನ್ನು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಹೊಡೆಯುವ ಸ್ಪರ್ಧೆಯು ಎಲ್ಲರನ್ನೂ ರಂಜಿಸಿತು. ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಸಂಘದ ವತಿಯಿಂದ ಶ್ರೀಲಕ್ಷ್ಮಿ ಅವರು ಸಂಯೋಜಿಸಿದ ನೃತ್ಯವನ್ನು ಕುಮಾರಿಯರಾದ ಅಂಕಿತ ರಾಜಾರಾಮ್, ಸಿಮ್ರಿತ ಅಗರ್ವಾಲ್, ಲೀರಾ ಶರ್ಮ ಹಾಗೂ ಸಿರಿ ಜಾರ್ಮಲೆ ಅವರು ಬಹು ಸುಂದರವಾಗಿ ಪ್ರಸ್ತುತಪಡಿಸಿದರು. ಮುಂಬೈನಿಂದ ಬಂದಂತಹ ನೃತ್ಯ ಕಲಾವಿದೆ ಶ್ರೀಮತಿ ನೀಲ ಮೀರಜ್ ಅದ್ಭುತವಾದಂತಹ ಕಥಕ್ ನೃತ್ಯವನ್ನು ಪ್ರದರ್ಶಿಸಿದರು.

- ವರದಿ: ವೆಂಕಟ್ ಆರ್. / ಸುರೇಶ ಹೆಚ್.ಸಿ. ಛಾಯಾಚಿತ್ರ: ವೆಂಕಟ್ ಆರ್./ ಶ್ರೀಲಕ್ಷ್ಮಿ ಎಂ.ಎಸ್.

0 comments:

Post a Comment