ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:14 AM

ನಾನಿರುವುದೇ ಹೀಗೆ

Posted by ekanasuನೋವಿನಿಂದ ತುಂಬಿಕೊಂಡಿದ್ದ ಮನಸ್ಸು ಭಾರವಾಗಿತ್ತು. ಮುಸ್ಸಂಜೆ ವೇಳೆಯಲ್ಲಿ ತಂಗಾಳಿ ಬೀಸುತ್ತಿತ್ತು. ಪ್ರಶಾಂತ ವಾತಾವರಣ ಸಮುದ್ರದ ಕಡಲಿನಲ್ಲಿದ್ದ ಬೆಟ್ಟದ ತುದಿಯ ಮೇಲೆ ಕುಳಿತಿದ್ದೆ. ಸ್ವಲ್ಪ ಹತ್ತಿರದಲ್ಲಿ ನಾಯಿ ಮರಿಯೊಂದು ಬಿದ್ದ ಪ್ಲಾಸ್ಟಿಕ್ ಚೀಲ ಎಳೆದಾಡುತ್ತ ಸದ್ದು ಮಾಡುತ್ತಿತ್ತು. ಆ ಸದ್ದಿಗೆ ನಾನು ಸರ್ರನೇ ಹಿಂದೆ ತಿರುಗಿ ನೋಡಿದಾಗ ನನ್ನ ದೃಷ್ಟಿ ನೇರವಾಗಿ ಆ ಕಡೆಗೆ ಹರಿಯಿತು. ಎದ್ದು ಅದರ ಹತ್ತಿರ ಹೋದಾಗ ಅಲ್ಲಿರುವ ವಸ್ತುವಿನ ಮೇಲೆ ಬೆಳಕು ಚೆಲ್ಲುತ್ತಿದ್ದರಿಂದ ಆ ಬೆಳಕಿನ ಪ್ರತಿಫಲನ ನನ್ನ ಕಣ್ಣಿಗೆ ರಾಚಿತು. ಎದ್ದು ಆ ವಸ್ತುವನ್ನು ಕೈಗೆತ್ತಿಕೊಂಡಾಗ ಚಿಕ್ಕದಾದ ಶಂಖವಾಗಿತ್ತು. ಆ ಶಂಖ ಮತ್ತೆ ನನ್ನ ಬಾಲ್ಯದ ನೆನಪಿನ ಅಂಗಳಕ್ಕೆ ಕರೆದುಕೊಂಡು ಹೋಯಿತು.

ಅದಿನ್ನು ಆಡುವ ಕುಣಿದು ಕುಪ್ಪಳಿಸುವ ವಯಸ್ಸು. ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕಡೆ ಹಬ್ಬದ ವಾತಾವರಣವಿತ್ತು. ಎಲ್ಲರೂ ಸಂತೋಷ ಸಂಭ್ರಮದಲ್ಲಿ ತೆಲಾಡುತ್ತಿದ್ದರು. ಬಿಟ್ಟು ಬಿಡದೆ ಜಿಟಿಜಿಟಿ ಮಳೆಯ ಸಿಂಚನವಾಗುತ್ತಿತ್ತು. ಶಾಲೆಯ ಆವರಣದಲ್ಲಿ ಗಿಜಿ ಬಿಜಿ ಕೆಸರಾಗಿದ್ದರು, ಅದನ್ನು ಲೆಕ್ಕಿಸದೆ ಎಲ್ಲರು ಓಡಾಡುತ್ತಿದ್ದರು.

ನಾನು ಶಾಲೆಯ ಮೈದಾನದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅಲ್ಲಿ ಸಿನಿಮಾದಂತೆ ನಡೆದು ಹೋಯಿತು. ಕೈಯಲ್ಲಿದ್ದ ಹೂ ಜಾರಿ ಕೆಳಗೆ ಬಿತ್ತು. ಕೆಳೆಗೆ ಬಾಗಿ ಕೈಗೆತ್ತಿಕೊಳ್ಳವಷ್ಟರಲ್ಲಿ ಪಕ್ಕದಲ್ಲ್ಲಿ ಯಾರೋ ಬಿದ್ದಿರುವ ಸದ್ದು ಕೇಳಿತು. ಓಡಿ ಕೈಹಿಡಿದು ಮೇಲೆತ್ತುವಾಗ ಚಂದಿರನಂತ ಮುಖ, ಹವಳದಂತೆ ಫಳ ಫಳ ಹೊಳೆಯುವ ಹಲ್ಲುಗಳು, ಮುದ್ದಾದ ಮೂಗುತಿ ಸುಂದರವಾದ ಚೆಲುವೆ, ಒಂದೇ ಸಮನೆ ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ ಹೃದಯದ ಒಳಗೆ ಜಿಗಿದಳು.

ಅವಳ ಮೊದಲ ನೋಟಕ್ಕೆ ಸೋತು ಹೋದೆ. ಅವಳನ್ನೇ ಪದೇ ಪದೇ ನೋಡುವ ತವಕ ಪ್ರೀತಿಯ ಪುಳಕ. ಅವಳಿಗೆ ಮಾತನಾಡಿಸುವ ತವಕ ಜೋರಾಯಿತು. ಆದರೆ, ಪರಿಚಯವಿರಲಿಲ್ಲ. ಮನಸ್ಸಿನಲ್ಲಿ ಭಯದ ವಾತಾವರಣ ಮನೆ ಮಾಡಿತು. ಭಯದ ಮನಸ್ಸಿಗೆ ಹಿಂಜರಿಸಿ ಮಾತನಾಡಲು ಮುಂದಾದರೂ ಎದೆಯ ಬಡಿತ ಸಹಜ ಸ್ಥಿತಿಗಿಂತ ಸ್ವಲ್ಪ ಜೋರಾಯಿತು.

ಆ ಕಡೆಗೆ ಗಮನ ಹರಿಸದೆ ಮಾತನಾಡಲು ಪ್ರಯತ್ನಿಸಿದೆ.. ಇಬ್ಬರಲ್ಲಿ ಮಾತಿನ ಸುರಿಮಳೆ ಪ್ರಾರಂಭವಾಯಿತು. ಆ ಮಾತುಗಳಿಗೆ ಫುಲ್ ಸ್ಟಾಪ್ ಬಿಳಲಿಲ್ಲ. ಅವಳ ಸೌಂದರ್ಯ, ಮಾತಿನ ಲಹರಿ ಮೋಡಿಮಾಡಿತು. ಪ್ರತಿದಿನ ಪ್ರತಿಕ್ಷಣವು ರೋಮಾಂಚನಗೊಳಿಸುತ್ತಿತ್ತು. ಅವಳ ಕಾಲ್ಗೆಜ್ಜೆ ಸದ್ದು ಕಿವಿಯಲ್ಲಿ ಕಂಪಿಸುತ್ತಿದ್ದರೆ ಮೈಝೆಲ್ ಎನಿಸುತ್ತಿತ್ತು. ದಿನಾಲು ದಾರಿ ಕಾಯುವುದೆ ನನ್ನ ಕೆಲಸವಾಯಿತು. ಆದರೆ ಅವಳು ಬರಲ್ಲಿಲ್ಲವೆಂದರೆ ನನ್ನ ಕಣ್ಣುಗಳು ಕ್ಲಾಸ್ ರೂಮಿನ ಕಿಟಕಿಯತ್ತ ಕೂರುತ್ತಿದ್ದವು.


ಹೀಗೆ ದಿನಗಳು ಕಳೆದಂತೆ ಅವಳ ನಯ ವಿನಯ ಮಾತಿನ ಶೈಲಿ, ನವಿರಾದ ಉತ್ತರ, ಪ್ರೀತಿಯ ಕಡೆ ವಾಲಿಸಿತು. ಆದರೆ, ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ ಅಂತ ಹೇಳಲು ಅದೆಷ್ಟು ಸಲ ವಿಫಲನಾದೆ. ಪ್ರೀತಿಯನ್ನು ಪ್ರಸ್ತಾಪಿಸಲು ಮನೆಯಲ್ಲಿರುವ ಕನ್ನಡಿ ಮುಂದೆ ನಿಂತು ರಿಹರ್ಸಲ್ ಮಾಡಿ ದೃಢ ಮನಸ್ಸಿನಿಂದ ನಿರ್ಧಾರ ಮಾಡಿ ನಡುಕ ದ್ವನಿಯಲ್ಲಿ ಪ್ರೀತಿಯ ವಿಷಯ ಪ್ರಸ್ತಾಪಿಸಿದೆ. ಕ್ಷಣ ದಿವ್ಯ ಮೌನವಹಿಸಿ ಏನು ತಿಳಿಯದ ಮುಗ್ದ ಮನಸ್ಸಿನಿಂದ ಮಧುರ ದ್ವನಿಯಲ್ಲಿ ಪ್ರೀತಿಗೆ ಹಸಿರು ನಿಶಾನೆ ತೋರಿಸಿದಳು. ತನ್ನ ಮನಸ್ಸಿನಲ್ಲಿರುವ ಭಾವನೆಗಳ ಪ್ರೇಮಪತ್ರದ ಜೊತೆಗೆ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ 'ಶಂಖ'ವನ್ನು ಕೊಟ್ಟಳು.

ಅನೇಕ ಸಲ ಚಿಕ್ಕ ಚಿಕ್ಕ ಜಗಳದಲ್ಲಿ ಸಂತೋಷ ಕಾಣುತ್ತಿದ್ದೆವು. ನನ್ನ ದೊಡ್ಡ ದ್ವನಿಯ ಬಾಣ ಅವಳ ಮನಸ್ಸಿಗೆ ನಾಟಿದರು ಕೆಲವು ಕ್ಷಣ ಓಲೈಸುವುದರಲ್ಲಿ ಮಗ್ನನಾಗುತ್ತಿದೆ. ಕೆಲವು ಸಮಯದಲ್ಲಿ ಅವಳ ತಪ್ಪಿಗೆ ಕವನ ಧಾಟಿಯಲ್ಲಿ ಬೈಯಬೇಕೆಂದರೆ, ಅವಳ ನಗುವ ಮುಖನೋಡಿ ಮಂಜಿನ ಹನಿಯಂತೆ ಕರಗುತ್ತಿದ್ದೆ. ತಪ್ಪಾದ ವಿಷಯಕ್ಕೆ ಜೋರಾದ ದ್ವನಿಯಲ್ಲಿ ಮಾತನಾಡಿದರೆ ನಾನಿರುವುದೆ ಹೀಗೆ' ಎಂಬ ಪ್ರತ್ಯುತ್ತರ ಸಿಗುತ್ತಿತ್ತು. ದಿನಗಳು ಊರಳಿದಂತೆ ಪ್ರೇಮ ಗಾಢವಾಯಿತು. ಅದು ಶಾಲೆಯ ಕಡೆಯ ಪರೀಕ್ಷೆ ದಿನ.

ಮುಸ್ಸಂಜೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರೇಮಪತ್ರ ನೀಡುವಾಗ ಇಬ್ಬರ ಕಣ್ಣುಗಳು ತುಂಬಿಕೊಂಡವು. ಕಣ್ಣಿನಿಂದ ಮರೆಯಾಗುವವರೆಗೂ ಪ್ರತಿ ಹೆಜ್ಜೆ ಹೆಜ್ಜೆಗೆ ತಿರುಗಿ ನೋಡಿದಳು. ನೇರವಾಗಿ ನನ್ನ ಕೋಣೆಗೆ ಹೋಗಿ ಪತ್ರ ಓದಬೇಕು ಅನುವಷ್ಟರಲ್ಲಿ ಅಮ್ಮ ಕರೆದಳು. ಹೋಗಿಬರುವಷ್ಟರಲ್ಲಿ ಆ ಪತ್ರ ಅಲ್ಲಿ ಇರಲಿಲ್ಲ. ಕೋಣೆ ತುಂಬ ಹುಡುಕಾಡಿದರು ಕೊನೆಗೆ ಸಿಗಲಿಲ್ಲ. ಆತಂಕ ಹೆಚ್ಚಾಯಿತು. ಮನದಲ್ಲಿ ತಳಮಳ ಉಂಟಾಯಿತು.

ಅದೇ ನಮ್ಮ ಭೇಟಿಯ ಕೊನೆಯ ಸೇತುವೆ. ಮರುದಿನದಿಂದ ಅವಳು ಕಾಣಲಿಲ್ಲ. ಅವಳ ಮನೆ, ಶಾಲೆ ಹತ್ತಿರ ಅದೇಷ್ಟು ದಿನ-ರಾತ್ರಿಗಳನ್ನು ಕಳೆದೇನೋ ಲೆಕ್ಕವಿಲ್ಲ. ಕೆಲವು ತಿಂಗಳು ನಂತರ ಮನೆಗೆ ಸುಣ್ಣ ಬಣ್ಣ ಹಚ್ಚುತ್ತಿದ್ದರು. ನಾನು ಮನಸ್ಸಿಲ್ಲದೆ ತಾಯಿಗೆ ಆಸರಾದೆ. ಅಜ್ಜಿ ತಾನು ಜೋಪಾನವಾಗಿಟ್ಟ ಹಳೆಯಕಾಲದ ಪೆಟ್ಟಿಗೆ ತಂದು ನನ್ನ ಮುಂದಿಟ್ಟಳು. ಕಾಗದಗಳು ಜೋಪಾನವಾಗಿಟ್ಟದ್ದಳು. ಒಂದೊಂದಾಗಿ ತೆಗೆಯುತ್ತಿದ್ದೆ. ಆಗ ಅಜ್ಜಿ ಈ ಕಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಿವೆ ಇದು ನಿನ್ನ ತಂದೆಯ ಕೆಲಸದ ಕಾಗದ ಇರಬೇಕು ನೋಡು ಅಂದಳು. ಅದನ್ನು ಕೈಗೆತ್ತಿಕೊಂಡು ಮೊದಲ ಪದದಿಂದ ಕೊನೆಯ ಸಾಲಿನವರೆಗೆ ಓದಿ ಮುಗಿಸಿ ಕೊಣೆಯಿಂದ ಹೊರಗೆ ಹೆಜ್ಜೆ ಇಟ್ಟೆ. ಮಾತು ಬರಲಿಲ್ಲ. ಗಂಟಲು ಒಣಗಿತ್ತು. ಮೂಕನಾದೆ ಏನು ತೋಚಲಿಲ್ಲ. ಆ ಪತ್ರದಲ್ಲಿ ಹೀಗೆ ಬರೆದಿತ್ತು ಕುಟುಂಬ ಸಹಿತ ದೂರದ ಪಟ್ಟಣಕ್ಕೆ ಹೋಗುತ್ತಿದ್ದೆವೆ. ನಾಳೆ ನಾವಿಬ್ಬರು ಶಾಲೆಯ ಹತ್ತಿರ ಇರುವ ಮರದ ಕೆಳೆಗೆ ಭೇಟಿಯಾಗೊಣ. ನಿನಗಾಗಿ ಕಾಯುತ್ತಿರುವೆ ಇಂತಿ ನಿನ್ನ...... ಅಜ್ಜಿಯ ಅನಕ್ಷರತೆ ನನ್ನ ಪ್ರೀತಿಗೆ ಮುಳ್ಳಾಗಿತ್ತು.

ಕೆಲವರ ಮಾಹಿತಿ ಮೆರೆಗೆ ಪಟ್ಟಣದ ಅವಳ ಮನೆಗೆ ಹೋದೆ ಚೆಲುವೆಯ ತಾಯಿ ದುಃಖದಲ್ಲಿ ನಲ್ಲೆಯ ಕೋಣೆ ತೋರಿಸಿದಳು. ನಾನು ನೀಡಿದ ಅನೇಕ ಕಾಣಿಕೆಗಳು ಅಲ್ಲಿ ದ್ದವು. ಮತ್ತೆರಡು ಹೆಜ್ಜೆ ಮುಂದೆ ಇಟ್ಟಾಗ ಹೂವಿನ ಹಾರ ಸಮೆತ ಗೋಡೆಗೆ ಜೋತು ಹಾಕಿದ ಚೆಲುವಿನ ಭಾವಚಿತ್ರ ಕಾಣಿಸಿತು. ಕಾಣಿಕೆ ತರುತ್ತೆನೆಂದು ಹೊರ ಹೋದವಳು ಮರಳಿ ಬಾರದ ಲೋಕಕ್ಕೆ ಹೋಗಿದ್ದಳು. ಅದನ್ನು ನೋಡಿದ ಕ್ಷಣ ಬರಸಿಡಲು ಬಡಿದಂತಾಯಿತು. ಇಲ್ಲಿಯವರೆ ಸಹಜಸ್ಥಿತಿಗೆ ಬರಲಿಲ್ಲ. ಚೆಲುವೆಯ ನೆನಪುಗಳು ಹೃದಯಕ್ಕೆ ಬಾಣದಂತೆ ಚುಚ್ಚುತ್ತಿವೆ. ನೋವು, ಯಾತನೆ, ಚಿಂತೆ ಕಾಡುತ್ತಿವೆ. ಪ್ರತಿಯೊಂದು ದೃಶ್ಯಗಳು ಕಣ್ಣು ಮುಂದೆ ಸುಳಿದಾಡುತ್ತಿವೆ. ಏಕಾಂತ ಆವರಿಸಿಕೊಂಡಾಗ ಮಧುರ ಪಿಸುಮಾತುಗಳು ಕೇಳಿಸಿದಂತೆ ಭಾಸವಾಗುತ್ತಿವೆ. ನನ್ನ ಡೈರಿಯಲ್ಲಿ ಬೆಟ್ಟ ಅದೇ ಬೆಟ್ಟದ ಮುಂದಿನ ಸಮುದ್ರದ ಅಲೆಗಳ ಬೊಗರ್ೆರತ ಬಂಡೆಯ ಮೇಲೆ ಕುಳಿತ ನಾನು ಮತ್ತು ನಮ್ಮ ಪ್ರೀತಿಗೆ ಕಾರಣವಾದ ಶಂಖ ಎಲ್ಲವೂ ಇವೆ. ಆದರೆ ಅವಳು ಮಾತ್ರ ಮರಿಚಿಕೆಯಾಗಿ ಉಳಿದಳು. .


ಅಂಬಾದಾಸ ಎಸ್ ಪಾಟೀಲ
ಪತ್ರಿಕೋದ್ಯಮ ವಿಭಾಗ
ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ