ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಪೆರ್ಲ:ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ ೨೦೦೪ ನವೆಂಬರ್ ೬ ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಆರಂಭವಾದ ಪೆರ್ಲದ ಬಜಕೂಡ್ಲಿನ ‘ಅಮೃತಧಾರಾ ಗೋಶಾಲೆ’ಗೆ ದೇಶದ ಪ್ರತಿಷ್ಟಿತ ‘ಬ್ರೀಡ್ ಸೇವಿಯರ್ ಅವಾರ್ಡ್ - ೨೦೧೨’ ಒಲಿದಿದೆ.

ಕೇವಲ ೪೮ ದನಗಳು ಮತ್ತು ೫ ಹೋರಿಗಳ ಸಾಕಣಿಕೆಯ ಮೂಲಕ ಆರಂಭವಾದ ಈ ಗೋಶಾಲೆಯಲ್ಲಿ ಪ್ರಸ್ತುತ ೧೫೦ಕ್ಕೂ ಮಿಕ್ಕಿ ದೇಸೀ ಜಾನುವಾರುಗಳಿಗೆ ಆಶ್ರಯ ನೀಡಲಾಗುತ್ತಿದ್ದು ದೇಶ, ವಿದೇಶಗಳಲ್ಲಿ ಗೋಪ್ರೇಮಿಗಳ ಗಮನವನ್ನು ಸೆಳೆದಿದೆ. ಈ ಗೋಶಾಲೆಯಲ್ಲಿರುವ ಕಾಸರಗೋಡು ತಳಿಯ ಗಿಡ್ಡ ದನ ‘ಬಂಗಾರಿ’ ಈಗಾಗಲೇ ‘ಲಿಮ್ಕಾ ಬುಕ್ ಓಫ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಗಳಿಸಿದ್ದು, ಈಗ ‘ಸೇವಾ’ ಸಂಸ್ಥೆಯು ದೇಶೀ ತಳಿ ಜಾನುವಾರುಗಳ ಸಂರಕ್ಷಣೆಗಾಗಿ ಕೊಡಮಾಡುವ ‘ಬ್ರೀಡ್ ಸೇವಿಯರ್’ ಪ್ರಶಸ್ತಿಗೆ ಯೋಜನೆಯನ್ನು ಗುರುತಿಸಿರುವುದು ದೇಶೀ ಗೋತಳಿಯ ಸಂರಕ್ಷಣೆಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹಿಂದೆ ಬಹುದೊಡ್ಡ ಸಂಖ್ಯೆಯಲ್ಲಿದ್ದ, ಈಗ ವಿನಾಶದಂಚಿಗೆ ಸರಿಯುತ್ತಿರುವ ಕಾಸರಗೋಡು ತಳಿಯ ಹಸುಗಳು ಶೂನ್ಯ ಬಂಡವಾಳದ ಕೃಷಿಗೆ ಹೆಚ್ಚು ಯೋಗ್ಯವಾದವುಗಳು. ಅತಿ ಕಡಿಮೆ ಆಹಾರ ಸೇವನೆ ಮಾಡುವ ಈ ಗೋವುಗಳ ಹಾಲು, ಮೂತ್ರ, ಸೆಗಣಿ ಅತ್ಯಂತ ಶ್ರೇಷ್ಟವಾದವುಗಳು. ಇವುಗಳ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡಿರುವುದರಿಂದ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ‘ಕಾಮದುಘಾ’ ಯೋಜನೆಗೆ ಪ್ರಶಸ್ತಿ ದೊರೆತಿದೆ.
ಭಾರತೀಯ ಗೋಬ್ಯಾಂಕಿನ ಮುಖಾಂತರ ೩೮೦ ಆಸಕ್ತ ಸಾಕಣಿಕೆದಾರರಿಗೆ ಕಾಸರಗೋಡು ಗೋವುಗಳನ್ನು ಅಮೃತಧಾರಾ ಗೋಶಾಲೆ ಈಗಾಗಲೇ ವಿತರಿಸಿದೆ. ಶಮನ ತೈಲ, ಹಿಮಗಿರಿ ತೈಲ, ಶೋಡಷಿ ದಂತ ಮಂಜನ, ಕ್ಲೀನ್ ನೈಲ್[ಉಗುರು ಶುಚಿಕಾರಕ], ಗೋಸಾರವಟಿ ಇತ್ಯಾದಿ ವಿಶೇಷ ಪಂಚಗವ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ನಬಾರ್ಡ್ ಸಂಸ್ಥೆಯ ಅನುದಾನದಲ್ಲಿ ೪ ಪಂಚಾಯತುಗಳಲ್ಲಿ ಕಾಸರಗೋಡು ಗೋವುಗಳ ಗಣತಿ ಹಾಗೂ ಉತ್ತಮ ಗೋವುಗಳ ಮಾಹಿತಿ ಸಂಗ್ರಹ ಕಾರ್ಯ ನಡೆಸಿ ೨೦೦ ಉತ್ಕೃಷ್ಟ ಗೋವುಗಳನ್ನು ಆಯ್ಕೆ ಮಾಡಲಾಗಿದೆ. ರಕ್ತ ಪರೀಕ್ಷೆಯ ಮುಖಾಂತರ ತಳಿ ಶುದ್ಧತೆಯ ಬಗ್ಗೆ ಸಂಶೋಧನೆ, ಕಾಸರಗೋಡು ಗೋಆಧಾರಿತ ಕೃಷಿಯ ಬಗ್ಗೆ ಆಸಕ್ತರಿಗೆ ಉಚಿತ ತರಬೇತಿ ಶಿಬಿರಗಳನ್ನೂ ಆಯೋಜಿಸಿರುವುದರಿಂದ ‘ಅಮೃತಧಾರಾ’ ಗೋಶಾಲೆಗೆ ಅರ್ಹವಾಗಿ ಈ ಪ್ರಶಸ್ತಿ ದೊರೆತಿದೆ.
ಈಗಾಗಲೇ ಅಮೃತಧಾರಾ ಗೋಶಾಲೆಯಲ್ಲಿ ಎ೨ ಹಾಲಿನ ಬಗ್ಗೆ ಸಂಶೋಧನೆಗೆ ಚಾಲನೆ ನೀಡಲಾಗಿದೆ. ಕಾಸರಗೋಡು ಗೋವಿನ ಪ್ರಚಾರಕ್ಕಾಗಿ ಭಾರತೀಯ ಗೋಯಾತ್ರೆ, ಗೋಸಂಸತ್ತು, ಗೋಮಾತಾ ತುಲಾಭಾರ ಇತ್ಯಾದಿ ಕಾರ್ಯಕ್ರಮಗಳನ್ನು ‘ಕಾಮದುಘಾ’ ಯೋಜನೆಯು ಯಶಸ್ವಿಯಾಗಿ ಆಯೋಜಿಸಿದೆ. ಕೇರಳದ ವಿವಿಧೆಡೆಗಳಲ್ಲಿ ದೇಶೀ ಗೋತಳಿಯ ಪ್ರಚಾರಕ್ಕಾಗಿ ಗೋವುಗಳ ಪ್ರದರ್ಶನ ನಡೆಸಿರುವುದನ್ನೂ ಮನಗಂಡ ‘ಸೇವಾ’ ಸಂಸ್ಥೆಯು ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡುತ್ತಿದೆ.
ಹಸು, ಎಮ್ಮೆ, ಆಡು, ಕುರಿ ಸಹಿತ ವಿವಿಧ ದೇಸೀ ತಳಿಯ ಜಾನುವಾರುಗಳ ಸಂರಕ್ಷಣೆಗಾಗಿ ‘ಸೇವಾ’ ಸಂಸ್ಥೆ ನೀಡುವ ಈ ‘ಬ್ರೀಡ್ ಸೇವಿಯರ್’ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 8, 9 ರಂದು ದೆಹಲಿಗೆ ಸಮೀಪದ ಕರ್ನಾಲ್ ನಲ್ಲಿ ನಡೆಯಲಿದೆ.

0 comments:

Post a Comment