ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮೋಜಿಗಾಗಿ ಬಂದು ಮಸಣ ಸೇರದಿರಿ

* ಅಚ್ಯುತಕುಮಾರ ಯಲ್ಲಾಪುರ
ಬರೀ 23! ಅದು ಯಾರೂ ಸಾಯಬಾರದ ವಯಸ್ಸು. ಅದರಲ್ಲೂ ಬುದ್ದಿವಂತ, ವಿದ್ಯಾವಂತ, ಸುಂದರ ಯುವಕ ಮಂಜಣ್ಣನಂತವರು ಸಾಯುವಂತಹ ವಯಸ್ಸಂತೂ ಅಲ್ಲವೇ ಅಲ್ಲ. ಆದರೂ ಅವನು ಸತ್ತ. ಜೀವನದಲ್ಲಿ ಮಾತ್ರವಲ್ಲ, ಸಾವಿನಲ್ಲಿಯೂ ಆತ ಮೌನಿಯಾಗಿದ್ದ. ಯೌವ್ವನದ ಮೊದಲ ತೆರೆ ಉತ್ಸಾಹದಷ್ಟೆ ಕುರುಡು ಆಗಿರುತ್ತದೆ ಎಂಬ ಸಂದೇಶವನ್ನು ಆತ ಬಿಟ್ಟು ಹೋದ. ಮೋಜಿಗಾಗಿ ಬಂದವನು ಮಸಣದಲ್ಲಿ ಮನೆ ಮಾಡಿದ. ಆತನದೂ ಸ್ವಯಂ ಅಪರಾದವಾದರೂ ಅದು ಆತ್ಮಹತ್ಯೆಯಲ್ಲ. ಹುಟ್ಟಿನಿಂದಲೂ ಅಜ್ಞಾತವಾಗಿ ಸುತ್ತಲೂ ಸುತ್ತುತ್ತಲಿದ್ದ ಸಾವೆಂಬ ರಹಸ್ಯವನ್ನು ಆತ ಹಿಮ್ಮೆಟ್ಟಿದ. ಮಂಜಣ್ಣನನ್ನು ಚಿಕ್ಕನಿಂದಲೂ ಹೆದರಿಸುತ್ತಲೇ ಬಂದಿದ ಕಣ್ಣಿಗೆ ಕಾಣದ ಶತ್ರುವಿಗೆ ಸ್ವಯಂ ಬಲಿಯಾದ.

ಸಾವನ್ನು ಸುತ್ತುವರೆದ ಬದುಕು ಮನುಷ್ಯನನ್ನು ಆಳುತ್ತದೆಯಾದರೂ ಮಂಜಣ್ಣ ವಿಷಯದಲ್ಲಿ ಬದುಕನ್ನೆ ನುಂಗಿ ಸಾವು ಆಕ್ರಮಿಸಿತು. ಅಂದು (3/4/13) ಮೃತ್ಯು ಅದೃಶ್ಯ ರೂಪದಲ್ಲಿ ಆತನ ಬಳಿ ಸುಳಿದಾಡುತ್ತಲಿತ್ತು. ಗೆಳೆಯರೊಡನೆ ಸಾತೋಡ್ಡಿ ಜಲಪಾತದ ವೀಕ್ಷಣೆಗೆ ತೆರಳಿದ ಮಂಜಣ್ಣನಿಗೆ ಆ ದಿನವೇ ಕೊನೆಯಾಯಿತು. ಅತಿಯಾದ ಮೋಜು ಮೃತ್ಯುವಿನತ್ತ ಕರೆದೊಯ್ಯಿತು.

ಮರಣ ಎಂಬ ಭಯಂಕರ ರಹಸ್ಯ ಬಯಲಾಗಿತು. ಕಳ್ಳ ಹೆಜ್ಜೆಯ ಸಾವು ನೀರನ್ನು ಸಮೀಪಿಸಿ, ಯಾರಿಗೂ ತಿಳಿಯದಂತೆ ಆತನನ್ನು ಆಕ್ರಮಿಸಿತು. ಆತ್ಮವನ್ನು ಬದಿರಗೊಳಿಸಿತು. ನೀರಿನಿಂದ ಹೊರ ಬಂದಿದ್ದು ಆತನ ದೇಹ ಮಾತ್ರ! ಸಾವಿನ ನಂತರದ ಊಹೆಗೂ ನಿಲುಕದ ಜಗತ್ತಿಗೆ ಮಂಜಣ್ಣ ಪ್ರವೇಶಿಸಿದ. ವಿಧಿ ವಿಲಾಸಕ್ಕೆ ಶರಣಾದ. ದೇಹ ಪಂಜರದೊಳಗಿನ ಆತನ ಪ್ರಾಣಪಕ್ಷಿ ಹಾರಿಹೋಯಿತು. ಅದೃಷ್ಟ ಕೈ ಕೊಟ್ಟು ಸೋತು ಸಾವನ್ನೊಪ್ಪಿದ.

ಒಂದು ಕ್ಷಣದಲ್ಲಿ ಏನು ಸಾಧನೆ ಆಗಲ್ಲ ಎನ್ನುತ್ತಿದ್ದ ಮಂಜಣ್ಣ ಒಂದೇ ಕ್ಷಣದಲ್ಲಿ ಸಾವನ್ನು ಅಪ್ಪಿಕೊಂಡ. ಸಾವು ಎಂದರೆ ಆಪ್ತರ ಮನದಲ್ಲಿ ಕೆಲ ನೆನಪಿನ ಛಾಯೆಯನ್ನು ಅಸ್ತಂಗತವಾಗಿರಿಸುವದು ಎಂದು ಆತ ಸಾಬಿತು ಪಡಿಸಿದ. ಸಾವಿನ ನೆರಳು ಬದುಕಿನ ನಿಜಾರ್ಥವನ್ನು ಬಚ್ಚಿಟ್ಟಿತು. ಸಮಸ್ಯೆ ಇಲ್ಲದೇ ಆತ ಸಮಾದಿ ಸೇರಿದ. ಮೋಜಿನ ಸುಖಕ್ಕಿಂತಲೂ ದುಖ:ದಲ್ಲಿ ಆತನ ಸ್ನೇಹಿತರು ಹತ್ತಿರವಾದರು. ಅವರ ಕಣ್ಣುಗಳಲ್ಲಿ ನೀರೂರುತ್ತಿದ್ದವು. ಮೂಕಸಾಕ್ಷಿಯಾಗುವ ಬದಲು ಬೇರೆ ಕೆಲಸವೇನೂ ಅವರಿಗಿರಲಿಲ್ಲ.

ನೆನಪಿನ ಪದರದ ಮೇಲಿನ ದೂಳನ್ನು ಜಾಡಿಸಿ ನೋಡಿದರೆ ಸಾತೋಡ್ಡಿಯ ಒಂದೇ ಸ್ಥಳದಲ್ಲಿ ಜೀವ ತೆತ್ತವರ ಬಹುದೊಡ್ಡ ಯಾದಿಯೇ ಸಿಗುತ್ತದೆ. ಅದರ ಅರಿವಿದ್ದರೂ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತದೆ. ಅದೇಷ್ಟೋ ಬಾರಿ ಸ್ನೇಹಿತರೊಡನೆ ಮೋಜಿಗಾಗಿ ಬರುವವರು ಆಕಸ್ಮಿಕ ಮರಣಕ್ಕೆ ತುತ್ತಾದ ನಂತರವೂ ಸಾವಿಗಿಡಾದವರನ್ನು ಅವರ ಪಾಲಕರಿಗೆ ಒಪ್ಪಿಸದೇ ಮಣ್ಣು ಮಾಡುವ ಪ್ರಕ್ರಿಯೇ ಬೆಳಕಿಗೆ ಬರುತ್ತದೆ. ದೂರದ ಠಾಣೆಯಲ್ಲಿ ಯುವಕ ಕಾಣೆಯಾದನೆಂದು ದಾಖಲಾದ ಪ್ರಕರಣ ಪ್ರಾದೇಶಿಕ ಸುದ್ದಿಯಾಗಿ ಮರೆಯಾಗುತ್ತದೆ. ಮೋಜಿನ ಸಾವು ನಿರಂತರವಾಗಿ ಯುವ ಮನಸ್ಸನ್ನು, ಹೃದಯವನ್ನು, ದೇಹವನ್ನು ಕೊಲ್ಲುತ್ತದೆ. ಉಸಿರನ್ನು ನಿಲ್ಲಿಸುತ್ತದೆ. ಇಂಥಹ ಘಟನೆಗಳು ಪ್ರತಿ ವರ್ಷವೂ ಸಾತೋಡ್ಡಿಯಲ್ಲಿ ಮರುಕಳಿಸುತ್ತಲೇ ಇರುತ್ತವೆ. ಮಂಜಣ್ಣನ ಮನೆಯಲ್ಲಿ ಈಗ ಹಗಲುಗಳು ಹೇಗೋ ಉರುಳುತ್ತವೆ. ಆದರೆ ಆತನಿಲ್ಲದ ರಾತ್ರಿಗಳು ಮನೆಯವರ ಕರಳು ಹಿಂಡುತ್ತದೆ. ಸೂತಕದ ರಾತ್ರಿಗಳು ನರ್ತಿಸುತ್ತದೆ. ಬಿಟ್ಟು ಹೋಗುವವರು ನೆನಪುಗಳನ್ನು ಕೊಂದೇ ಹೋಗುತ್ತಾರೆ. ಆದರೆ ಉಳಿದವರಿಗೆ ಬಿಟ್ಟು ಹೋದವರ ನೆನಪುಗಳು ಮಾತ್ರ ಉಳಿದಿರುತ್ತದೆ. ಮೋಜಿಗಾಗಿ ಸಾತೋಡ್ಡಿ ಬರುವವರು ಮಂಜಣ್ಣನ ಸ್ಥಿತಿ ತಲುಪದಿರಿ ಪ್ಲೀಸ್...!

0 comments:

Post a Comment