ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:19 PM

ಪೋರಿಯ 'ಮನಿ' ಪಾಠ

Posted by ekanasu

ಯುವಾ...

ಅಂದು ಏಕೋ ನನ್ನ ಸ್ನೇಹಿತನ ಮೊಗದಲ್ಲಿ ನಗುವಿರಲಿಲ್ಲ. ತುಂಬಾ ಬೇಸರದಲ್ಲಿದ್ದ. ಬಂದವನೆ ನೇರ ನನ್ನನ್ನು ಗಟ್ಟಿಯಾಗಿ ತಬ್ಬಿ ಅಳತೊಡಗಿದ. ನಾನು ಏನೋ ಅನಾಹುತವಾಗಿರಬಹುದೆಂದು ನನ್ನಲ್ಲೇ ಅಂದುಕೊಂಡೆ. ಆದರೆ ನಾನಂದುಕೊಂಡಂತೆ ಏನೂ ಆಗಿರಲಿಲ್ಲ.
'ಅಪ್ಪನೊಂದಿಗೆ ಜಗಳವಾಡಿ ಬಂದೆ. ಅವರು ಯಾವಾಗಲೂ ಹೀಗೇ. ಕಾಲೇಜು ಫೀ, ರೂಮ್ ಬಿಲ್, ಪಾಕೇಟ್ಮನಿ ಪ್ರತಿಯೊಂದನ್ನು ಕೇಳಿದ ಕೂಡಲೇ ಕೊಡುವುದಿಲ್ಲ. ಒಂದೆರಡು ದಿನ ಅಂತ ಹೇಳಿ 10-15 ದಿನವಾದರೂ ಕೊಡುವುದಿಲ್ಲ. ಈ ಬಾರಿ ಸ್ಯಾಮ್ಸಂಗ್ ಮೊಬೈಲ್ ಕೊಡಿಸುತ್ತೇನೆ ಎಂದವರು ಕೊಡಿಸಲಿಲ್ಲ. ಅದಕ್ಕೆ ಕಾಲೇಜಿಗೆ ಹೋಗಲ್ಲ ಎಂದು ಜಗಳವಾಡಿ ಬಂದೆ'. ಎಂದು ಒಂದೇ ಉಸಿರಿಗೆ ಉತ್ತರಿಸಿದ. ನಾನು ಅವನೊಡನೆ ಸೇರಿ ಅವರ ಅಪ್ಪನನ್ನು ಬಯ್ದೆ. ಇವನದೇ ಸರಿ ಎಂದು ಸಮರ್ಥಿಸಿಕೊಂಡೆ. ಅವರು ಬರುವವರೆಗೂ ನೀನು ಮನೆಗೆ ಹೋಗಬೇಡ. ಇಲ್ಲಿಯೇ ಇರು ಎಂದೆ.

ಸರಿ ಬೇಜಾರು ಕಳೆಯಲು ಫಿಲಂಗೆ ನೋಡೊಣ ಎಂದುಕೊಂಡು ಸಿಟಿಗೆ ಹೋದೆವು. ಫಿಲಂ ಮುಗಿಯುವಷ್ಟರಲ್ಲಿ ಸಾಯಂಕಾಲವಾಗಿತ್ತು. ಬಸ್ಸ್ಟಾಂಡ್ ಪಕ್ಕದಲ್ಲಿನ ಬೃಂದಾವನ್ ಹೋಟೆಲ್ನಲ್ಲಿ ತಿಂಡಿ ತಿಂದೆವು. ಬಸ್ ಬರಲು ಇನ್ನು ಅರ್ಧಗಂಟೆ ಸಮಯವಿತ್ತು. ಸಾಯಂಕಾಲ ಸಮಯವಾದ್ದರಿಂದ ಪಕ್ಕದ ಸಾರ್ವಜನಿಕ ಪಾರ್ಕ್ ತೆರೆದಿತ್ತು. ಅಲ್ಲಿ ಬಣ್ಣ-ಬಣ್ಣದ ಹುಡುಗಿಯರು ಬರುತ್ತಾರೆ ನೋಡಿ ಕೀಟಲೆ ಮಾಡಬಹುದು ಎಂದುಕೊಂಡು ಹೋದೆವು. ನಮ್ಮ ನಿರೀಕ್ಷೆ ಹುಸಿಯಾಗಿರಲಿಲ್ಲ.

ಅಲ್ಲದೇ ನಮ್ಮ ಪರಿಚಿತ ಗೆಳತಿಯರೂ ಬಂದಿದ್ದರು. ಅಲ್ಲೆ ಕುಳಿತು ಹರಟುತ್ತಿದ್ದೆವು. ಆಗ ಸುಮಾರು 8-10 ವರ್ಷದ ಹುಡುಗಿಯೊಬ್ಬಳು ಕೈಯಲ್ಲಿ ಡಬ್ಬ ಹಿಡಿದು ಏನನ್ನೋ ಕೂಗುತ್ತಾ ಪಾರ್ಕ್ ನಲ್ಲಿದ್ದವರ ಹತ್ತಿರ ಹೋಗಿ ಬರುತ್ತದ್ದಳು. ನಾವು ಅವಳನ್ನು ಕರೆದು ಏನದು ಎಂದು ಕೇಳಿದೇವು. ಅವಳು 'ಹಪ್ಪಳ, ಸೊಂಡಿಗ್ಯ ಬೇಕೆನ್ರಿ' ಎಂದಳು. ಪಕ್ಕದಲ್ಲಿದ್ದ ಹುಡುಗಿಯರನ್ನು ಮೆಚ್ಚಿಸಲು ಆ ಹುಡುಗಿಗೆ ನಿನ್ನ ಹೆಸರೇನು? ಹೀಗೆಲ್ಲಾ ಶಾಲೆ ಬಿಟ್ಟು ವ್ಯಾಪಾರ ಮಾಡುವುದು ತಪ್ಪು, ನಿನ್ನನ್ನು ಪೊಲೀಸರಿಗೆ ಕೊಡುತ್ತೇವೆ ಎಂದೆಲ್ಲಾ ಇಲ್ಲಸಲ್ಲದ ಪ್ರಶ್ನೆ ಕೇಳಿದೆವು.

ನಮ್ಮೆಲ್ಲಾ ಮಾತಿಗೂ ತಾಳ್ಮೆಯಿಂದಿದ್ದ ಆ ಪೋರಿ ಕೊನೆಗೂ ಮೌನ ಮರಿದು ನಾನು ಶಾಲೆಗೆ ಹೋಗ್ತಿನಿ. ಮನೆಲಿ ಕೆಲ್ಸಾನೂ ಮಾಡ್ತಿನಿ. ಶ್ಯಾಲಿ ಬಿಟ್ಟಾಗ ಮತ್ತೆ ಖಾಲಿ ಇದ್ದಾಗ ಈ ರೀತಿ ಹಪ್ಪಳ, ಸೊಂಡಿಗ್ಯಾ ಮಾರ್ತಿನಿ. ನಿಮ್ಮಂಗ ಬ್ಯಾಗ್ ಹಾಕ್ಯಂಡು ಕಾಲೇಜಿಗ್ಯ ಹೋಗಿ ಬಂದು ಈ ಥರ ಬಸ್ಸ್ಟ್ಯಾಂಡ್, ಪಾರ್ಕ್ ಅಂತ ಟೈಂ ಕಳೆಂಗಿಲ್ಲ ಎಂದು ಹೊರಟು ಹೋದಳು. ಅವಳ ಉತ್ತರ ನಮ್ಮ ಮುಖಕ್ಕೆ ಹೊಡೆದಂತಿತ್ತು. ಆ ಎಳೆಯ ಮಾತು ನಮ್ಮದೆಗೆ ಬಾಣ ನಾಟಿದಂತಾಗಿತ್ತು.

ಹೌದು ಪಿಜಿ ಓದುತ್ತಿದ್ದರು ನಮಗೆ ಅಡ್ಮಿಷನ್, ಬಟ್ಟೆ, ಪುಸ್ತಕ, ಬೈಕ್, ಮೊಬೈಲ್ ಅಷ್ಟೇ ಏಕೆ ಗರ್ಲ್ ಫ್ರೆಂಡ್ ಜೊತೆ ಮಾತನಾಡಲು. ಅವಳಿಗೆ ಗಿಫ್ಟ್ ನೀಡಲು ಅಪ್ಪನ ಕರೆನ್ಸಿಯೇ ಬೇಕು. ನಾವಿಲ್ಲಿ ಮಾಡುವ ಗನಂಧಾರಿ ಕೆಲಸಕ್ಕೆ ತಿಂಗಳ ಪಾಕೆಟ್ಮನಿ ಸರಿಯಾಗಿ ಬರದಿದ್ದರೆ ಪಾಲಕರನ್ನು ಬ್ಲಾಕ್ಮೇಲ್ ಮಾಡುವ ತಂತ್ರ ಬೇರೆ. ಇಷ್ಟೇಲ್ಲಾಮಾಡುವ ನಮಗಿಂತ ಆ ಪೋರಿಯೆ ಎಷ್ಟೋ ಉತ್ತಮ ಎಂದು ಒಂದು ಕ್ಷಣ ಅನಿಸಿದ್ದು ಸುಳ್ಳಲ್ಲ. ರಜೆ ಸಮಯದಲ್ಲಾದರೂ ಕೆಲಸ ಮಾಡಿ ತಂದೆ-ತಾಯಿಗಳ ಶ್ರಮವನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂಬ ಪಾಠ ಹೇಳಿಕೊಟ್ಟ ಆಪೋರಿಗೆ ನೂರೊಂದು ಥ್ಯಾಂಕ್ಸ್...


ರವೀಂದ್ರ ವಿಕೆ.
ಪತ್ರಿಕೋದ್ಯಮ ವಿಭಾಗ
ಗುಲ್ಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗಾ.


0 comments:

Post a Comment