ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

 'ಕಳೆದು ಹೋದ ನೆನಪುಗಳು ಕಳೆದು ಹೋದ ಬಂಗಾರದ ಆಭರಣದಂತೆ'. ಪ್ರತಿಯೊಬ್ಬರಿಗೂ ಅವರವರದೇ ನೆನಪುಗಳಿರುತ್ತವೆ. ಅವುಗಳಲ್ಲಿ ಕೆಲವಂತೂ ನಾವು ಬದುಕಿರುವವರೆಗೂ ನಮ್ಮ ಜೊತೆಯಲ್ಲಿರುತ್ತವೆ. ಇನ್ನು ಬಾಲ್ಯದ ನೆನಪೆಂದರೆ ಕೇಳಬೇಕೆ? ಅಲ್ಲಿ ಅದೆಷ್ಟೋ ಆಟಗಳು, ತುಂಟಾಟ, ಕೀಟಲೆ, ಜಗಳ ಮುಂತಾದವು ಇದ್ದೇ ಇರುತ್ತವೆ. ಅಂದು ಅದೇಕೊ ಮನಸಿಗೆ ತುಂಬಾ ಬೇಸರವಾಗಿತ್ತು. ಬೆಳಗಿನಿಂದ ಎಲ್ಲದರಲ್ಲೂ ಅಸಮಧಾನ ಕಾಣುತ್ತಿತ್ತು. ಉಪನ್ಯಾಸಕರ ಪಾಠವೂ ಜೋಗುಳದಂತಾಗಿ ನಿದ್ರಾದೇವಿ ಆಹ್ವಾನಿಸುತ್ತದ್ದಳು.ಸಾಯಂಕಾಲ ಐದು ಗಂಟೆ ಸಮಯ. ದಿನವಿಡಿ ಕ್ಲಾಸ್ ರೂಮಿನಲ್ಲಿ ಕುಳಿತು ಬೋರೆನಿಸಿತ್ತು. ರೂಮಿಗೆ ಬಂದು ಬಟ್ಟೆ ಬದಲಿಸದೆ, ಮುಖವನ್ನು ತೊಳೆಯದೇ ಮಂಚದ ಮೇಲೆ, ದೇಹಕ್ಕೆ ಆದ ಆಯಾಸ ಮತ್ತು ಕಣ್ಣು ಬೇಡುತ್ತಿದ್ದ ನಿದ್ದೆಯ ದಾಹ ತಣಿಸಲು, ತಿಳಿಯದೆ ಒರಗಿದೆ. ಐದೇ ನಿಮಿಷದಲ್ಲಿ ನಿದ್ದೆಯ ಮಂಪರು ಆವರಿಸಿತು, ಇನ್ನೆನೂ ಗಾಢ ನಿದ್ದೆಗೆ ಜಾರಬೇನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸಿತು.


ಒಮ್ಮೇಲೆ ಕೋಪ ಒಕ್ಕರಿಸಿ ಬಂತು. 'ಹಾಳಾದ ಮೊಬೈಲ್ ಸುಖವಾಗಿ ನಿದ್ದೆ ಮಾಡೋಕೆ ಬಿಡಲ್ಲ' ಎಂದು ಒಡೆದು ಹಾಕಬೇಕೆನಿಸಿತು. ಆದರೆ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಮತ್ತೆ ರಿಂಗಣಿಸಿತು. ಇದರ ಕಾಟ ಅತೀಯಾಯಿತು. ಸ್ವೀಚ್ ಆಫ್ ಮಾಡಬೇಕೆಂದು ಕೈಗೆತ್ತಿಕೊಂಡೆ. ಯಾವುದೋ ಹೊಸ ನಂಬರ. ಯಾರದು ಎಂದು ರೀಸಿವ್ ಮಾಡಿದೆ.

ಆ ಕಡೆಯಿಂದ ಅಪರಿಚಿತ ಧ್ವನಿ. ಒಮ್ಮೆಗೆ ಹಾಯ್ ಎಂದು ನನ್ನ ಪೂವರ್ಾಪರ ವಿಚಾರಸಿತು. ಯಾರು ಅಂತಾ ಕೇಳಲು ಸಹ ಅವಕಾಶ ನೀಡಲಿಲ್ಲ. ನಾನು ಕೇಳುವುದಕ್ಕೂ ಮುಂದಾಗಲಿಲ್ಲ. 'ಏನ್ರೀ ಮಾತಾಡಿ ನಾನು ಯಾರು ಅಂತ ಗೊತ್ತಾಯಿತಾ' ಅಂದರು. ಇಲ್ಲ ಅಂದೆ. ನಾನು ಬುದ್ಧು ಅಂದ. ಯಾವ ಬುದ್ದು ನನಗೆ ಆ ಹೆಸರಿನವರು ಯಾರು ಗೊತ್ತಿಲ್ಲವೆಂದು ಕಾಲ್ ಕಟ್ ಮಾಡಿ ಮಲಗಿದೆ. ಒಂದೆರಡು ತಾಸುಗಳ ಬಳಿಕ ಎಚ್ಚರವಾದಾಗ ನೋಡೊಣವೆಂದು ಆ ನಂಬರ್ಗೆ ಕಾಲ್ ಮಾಡಿದೆ. ಆ ಕಡೆಯ ಧ್ವನಿ ಅವನು ಹನುಮಂತ ಅಂತ ನಿಮ್ಮ ಬಾಲ್ಯದ ಸ್ನೇಹಿತ ನೀವು ಬುದ್ಧು ಅಂತ ಕರೆಯುತ್ತಿದ್ದವ ಎಂದು ಮತ್ತು ಆತ ನಮ್ಮೂರಿಗೆ ಬಂದು ನನಗೆ ಪರಿಚಯವಿರುವವರ ಹತ್ತಿರ ಕರೆ ಮಾಡಿಸಿದ್ದ. ಮತ್ತು ಆತ ಈಗ ಅಲ್ಲಿ ಇಲ್ಲವೆಂದು ಹೇಳಿತು. ಕಾರಣ ಆತನ ಬಳಿ ಮೊಬೈಲ್ ಇರಲಿಲ್ಲ. ಹಾಗೇ ಯೋಚಿಸುತ್ತಾ ಕುಳಿತೆ.....

ಅವನು ನಾನು ಒಂದರಿಂದ ನಾಲ್ಕನೇ ತರಗತಿಯ ಕ್ಲಾಸ್ಮೇಟ್. ಬರೊಬ್ಬರಿ 13ವರ್ಷಗಳ ಬಳಿಕ, ಈಗ ಹೇಗೋ ನಂಬರ ಪಡೆದು ಕಾಲ್ ಮಾಡಿದ್ದ. ನನಗೆ ಒಂದು ಕ್ಷಣ ಆಶ್ಚರ್ಯ, ಸಂತೋಷ. ತಕ್ಷಣ ಅವನೊಡೆ ಕಳೆದ ಬಾಲ್ಯದ ನೆನಪುಗಳು ಉಕ್ಕಿ ಬಂದವು.

ಆಗ ನಮಗಿನ್ನೂ ಜಗತ್ತಿನ ಅರಿವೆ ಇರಲಿಲ್ಲ. ಆಶ್ರಮ ಶಾಲೆ ಎಂಬ ವಸತಿ ಶಾಲೆಯಲ್ಲಿ ಖೈದಿಗಳಂತೆ ಬಂಧಿಯಾಗಿದ್ದೇವು. ಅದು ಉಗ್ರಾಣದಂತ ಶಾಲೆ. ಊಟ, ಪಾಠ, ವಾಸ್ತವ್ಯ ಎಲ್ಲವೂ ಒಂದೇ ಕೋಣೆಯಲ್ಲಿ. ಒಬ್ಬರೇ ಶಿಕ್ಷಕರು. ಕಲಿಕೆ ಮಾತ್ರ ಶೂನ್ಯ. ನಿಷ್ಕಲ್ಮಶ ಮನಸ್ಸು ನಮ್ಮದು. ಏನೊಂದು ತಿಳಿಯದು. ಜತೆಗೆ ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಬಿಟ್ಟು ಬಂದ ನೋವು. ಆ ನೋವು ಮರೆಸಲು ಜೊತೆಯಾದವನೇ ಇವನು. ಆಗಲೇ ನಮ್ಮ ಕೋಮಲ ಮನಸ್ಸಿನಲ್ಲಿ ಮಧುರವಾದ ಸ್ನೇಹದ ಬೆಸುಗೆಯಾಗಿತ್ತು.. ಯಾವಾಗಲೂ ಜತೆಯಲ್ಲಿಯೇ ಕಾಲ ಕಳೆಯುತ್ತಿದ್ದೇವು.

ಒಂದೇ ತಟ್ಟೆಯಲ್ಲಿ ಊಟ ಮಾಡುವುದು, ಹರಟೆ ಹೊಡೆಯುವುದು, ನಮ್ಮ ದಿನನಿತ್ಯದ ಚಟುಚಟಿಕೆಗಳ ಒಂದಾಗಿತ್ತು. ಅಲ್ಲಿ ನಮಗೆ ಸ್ವಾತಂತ್ರ್ಯವಿರಲಿಲ್ಲ್ಲ. ಬಂಧಿಸಿಟ್ಟ ಪಂಜರದ ಹಕ್ಕಿಯಂತೆ ಕಲಿತೆವು. ನೆನಪಿಸಿಕೊಂಡರೆ, ಈಗಲೂ ಕಣ್ಣೀರು ಬರುತ್ತವೆ. ಎಷ್ಟೋ ವರ್ಷಗಳ ನಂತರ ಆ ಬಾಲ್ಯದ ಗೆಳೆಯ ಕಾಲ್ ಮಾಡಿ ವಿಚಾರಿಸಿದ್ದು ಮರೆಯಲಾಗದು. ಪಾಪ ಅವನಿಗೇನು ಸಮಸ್ಯೆ ಕಾದಿತ್ತೋ ಗೊತ್ತಿಲ್ಲ. ಅವನ ವಿಳಾಸವು ಸಹ ಸಿಗಲಿಲ್ಲ. ಈ ಹಾಳಾದ ಮೊಬೈಲ್ ಮತ್ತು ನನ್ನ ಒಂದು ಕ್ಷಣದ ನಿದ್ದೆಯ ಮೇಲೆ ಈಗಲೂ ಕೋಪವಿದೆ. ಆದರೂ ಅವನು ನನಗೆ ಮತ್ತೆ ಸಿಗುವನೆಂಬ ನಂಬಿಕೆ ಇದೆ.
                                                   ಬಸಪ್ಪ ಕುಂಬಾರ
ಪತ್ರಿಕೋದ್ಯಮ ವಿಭಾಗ ಗುವಿವಿ ಗುಲ್ಬರ್ಗಾ

1 comments:

oh madhu said...

nice story

Post a Comment