ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ  ವರ್ಷ ಜನವರಿಯಲ್ಲಿ ನಾನು ಓದಿದ ಬೆಂಗಳೂರಿನ ಪಶು ವೈದ್ಯ ಕಾಲೇಜಿನಲ್ಲಿ ಮಿತ್ರ  ಡಾ .ಗಣೇಶ .ಎಂ . ಹೆಗಡೆ ನೀಲೇಸರರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಿತ್ತು. ಅನಿವಾರ್ಯವಾಗಿ ಹೋಗಲಾಗದ ಕಾರಣ, ಬಿಡುಗಡೆಯ ಮರುದಿನವೇ ಫೋನಾಯಿಸಿ ” ಮೊದಾಲು ಎರಡೂ ಪುಸ್ತಕ ಕಳುಹಿಸಿ ಮಾರಾಯ್ರೇ ” ಎಂದೆ.


 


ಒಂದನೇ ಪುಸ್ತಕ – “ಭೂಮಿ ಬುಕ್ಸ್ ಪ್ರಕಾಶನದಲ್ಲಿ “ಡೇರಿ ಡಾಕ್ಟರ್  ಹೋರಿ ಮಾಸ್ಟರ್ “; ಎರಡನೆಯದು ಶಿರಸಿ ಓಣಿಕೇರಿಯ ಕೃಷಿ – ಋಷಿ ಬೆಂಗಳಿ ವೆಂಕಟೇಶರ “ಸುಸ್ಥಿರ ಕೃಷಿಗೆ ಹತ್ತಾರು ಹಾದಿ” , ಇದು ಕೃಷಿ ಮಾಧ್ಯಮ ಕೇಂದ್ರ, ಧಾರವಾಡದ ಪ್ರಕಟಣೆ.
ಪುಸ್ತಕ ಬಂದ  ಕೂಡಲೇ  ” ಡೇರಿ ಡಾಕ್ಟರ್ —–”ನ ಎರಡು ಅಧ್ಯಾಯ ಮುಗಿಸಿ ಹೆಗ್ದೇರಿಗೆ ಫೋನ್ ಮಾಡಲೇಬೇಕಾಯ್ತು .
ಎಲ್ಲಾ   20 ಅಧ್ಯಾಯಗಳೂ  ಎರಡೇ ದಿನದಲ್ಲಿ ಮುಗಿದು ಹೋಯ್ತು.  ಅಬ್ಬಾ! ಅಂತೂ  ದೊರಕಿತಲ್ಲ, ಕನ್ನಡಕ್ಕೊಬ್ಬ ” ಜೇಮ್ಸ್ ಹೆರಿಯಟ್! “.
ಅಂದ ಹಾಗೆ ನಿಮಗೆ ತಿಳಿದಿರಬಹುದು, ಇಂಗ್ಲೆಂಡಿನ  ಪಶುವೈದ್ಯ ಜೇಮ್ಸ್ ಹೆರಿಯಟ್ ನ ಬಗ್ಗೆ. ಒಬ್ಬ  ಹಸು-ಹಂದಿ-ಕುದುರೆ – ಕೋಳಿ -ಆಡು- ಕುರಿ- ನಾಯಿ – ಬೆಕ್ಕು ಎಲ್ಲವನ್ನೂ ಚಿಕಿತ್ಸೆ ಮಾಡುವ ಸಾಮಾನ್ಯ ಪಶುವೈದ್ಯನೊಬ್ಬ  ತನ್ನ ಚಿತ್ರ-ವಿಚಿತ್ರ  ಅನುಭವಗಳನ್ನೆಲ್ಲ ದಾಖಲಿಸಿ ಅನೇಕ ಪುಸ್ತಕಗಳನ್ನು ಬರೆದದ್ದು, ಅವುಗಳ ಬಗ್ಗೆ ಚಲನಚಿತ್ರ – ಧಾರಾವಾಹಿಗಳಾಗಿ ಪ್ರಪಂಚದ ಕೋಟಿ  ಕೋಟಿ ಮನೆ –  ಮನಗಳನ್ನು ತಲುಪಿದ್ದು ಇತಿಹಾಸ.
ಅಂತಹದೇ ಅನುಭವಗಳು ದಿನನಿತ್ಯದಲ್ಲಿ  ಹೆಗಡೆ ಅಥವಾ ನನ್ನಂತಹ ಪಶು ವೈದ್ಯರುಗಳಿಗೆ ಮಾಮೂಲಿ ಎನಿಸಿದರೂ, ಹೆರಿಯಟ್  ದಾಖಲಿಸಿದ ಕ್ರಮ ಅನನ್ಯ, ಅಧ್ಭುತ .
ಹೆರಿಯಟ್ ಪುಸ್ತಕಗಳಲ್ಲಿ ಬರುವ ನೂರಾರು ಅನುಭವ ಕಥನಗಳಲ್ಲಿ ಆಯ್ದ  20 ಪ್ರಸಂಗಗಳನ್ನು ಹೆಗಡೆಯವರೇ ಪಶುವೈದ್ಯರಾಗಿ, ಅಲ್ಲಿ ಬರುವ ಪ್ರಾಣಿ ಹಾಗೂ ಇತರೆ ಪಾತ್ರಗಳೆಲ್ಲವೂ ಅವರ ಸುತ್ತುಮುತ್ತಲಿನವುಗಳೇ ಆಗಿ ಪುಸ್ತಕಗಳಲ್ಲಿ ಓಡಾಡಿಕೊಡಿದ್ದಾರೆ .
ಅಧ್ಯಾಯಗಳೇ   ಹಾಗೆ. ಯಾವುದನ್ನೂ ಮೊದಲು ಓದಬಹುದು, ನಂತರವೂ. ಮಾರ್ಜಾಲ ನ್ಯಾಯದ ಜಲಜಮ್ಮ ಅಧಿಕಾರ ಚಲಾಯಿಸುವುದು;  ಜೀವಂತ ಇರುವಾಗಲೇ  ಡಾಕ್ಟ್ರನ್ನೇ ಫೋಟೋ ಫ್ರೇಮ್  ಹಾಕಿಸಿ ಆರಾಧಿಸುವ ಮಾಲಿನಿ ಶರ್ಮ; ನಾಯಿಯೇ  ಜೀವವಾಗಿದ್ದ ರೌಡಿ ವಾಸು; ಕ್ರಿಸ್ಮಸ್ ಶುಭದಿನ ಬೆಳ್ಳಂಬೆಳಗ್ಗೆ ಆಡಿನ ಬಾಯಿಂದ ಹೊರಬಂದ ಚಡ್ಡಿ ; ಟೀವಿಗೂ ಬೇಕಾದ ಡಾಕ್ಟರ್ ; ವೈರಿ ಸತ್ಯಪಾಲನ ಹೆಂಡತಿ ಡಾಕ್ಟ್ರಿಗೆ ಪ್ರಿಯವಾದದ್ದು; ಗೋ ಡಾಕ್ಟ್ರ ಸೂಜಿಯಿಂದ ಬ್ರುಸೆಲ್ಲಾ ಅಂಟಿಸಿಕೊಂಡ ನಾಥಪ್ಪ ಗೋ ಡಾಕ್ಟ್ರ ಸೂಜಿಯಿಂದಲೇ ಗುಣವಾದದ್ದು; ಸೋಮಯ್ಯನೆಂಬ ಜಂಭದ ಕೋಳಿಗೆ ಕದಂ ಡಾಕ್ಟ್ರ ಮಸಾಲೆ ಮದ್ದು; ಆದರ್ಶಗಳ ಬೆನ್ನು ಹತ್ತಿ ಡೈರಿ ಸ್ಥಾಪಿಸಿ  ಕೈ ಸುಟ್ಟುಕೊಂಡ ಕಿರೀಟಿ ; ಡಾಕ್ಟ್ರ ಕೈಗುಣ ಬಲಪಡಿಸಿದ ಬಕೆಟ್ ಒದೆಯುವ ಕರು; ಬ್ರುಸೆಲ್ಲಾ ಕಾಯಿಲೆ ಹಿಡಿಸಿಕೊಂಡ ಡಾಕ್ಟ್ರು ಮತ್ತು ಮೆಂಟಲ್ ಲೀನಾ ಮಧ್ಯೆ ಕಿಚಿ ಕಿಚಿ; ಉಪ್ಪಿನಕಾಯಿ ಅಂಗಡಿಯ ಬೆಕ್ಕಿನ ಹೊಟ್ಟೆಯಲ್ಲಿ ಸಿಕ್ಕ ಕೂದಲುಂಡೆ ; ಜೀವ ಉಳಿಸಿದ ಗಂಟಿಯೇ ಜೀವ ಹೋಗುವಂತೆ ಜಾಡಿಸಿ ಒದ್ದದ್ದು; ಸಾರ್ವಜನಿಕವಾಗಿ ಮರ್ಯಾದೆ ತೆಗೆದ ಹಂಪಣ್ಣನಿಗೆ ಸವಾಲಾಗಿ ನಿಲ್ಲಬಹುದಾಗಿದ್ದ ಪೂಜಾರ್ರು ; ಕುದುರೆ ಶೋನಲ್ಲಿ  ಸ್ಟ್ರಿಕ್ಟ್ ಆಗಿ ಮಾರ್ಕು ಹಾಕಿದ ಡಾಕ್ಟ್ರಿಗೆ ಕತ್ತೆಗಳ ತಿರಸ್ಕಾರ; ಕಸಾಯಿ ಖಾನೆಗೆ ಒಪ್ಪಿಸಿದ ವೀಣೆ ಹಸು ಓಡಿ ವಾಪಾಸು ಬಂದು ಧಾಕಪ್ಪನನ್ನು ಸೇರಿಕೊಂಡದ್ದು – ಹೀಗೆ ನವರಸ ಪಾಕದ ಜೀವಂತ ಸಂದರ್ಭಗಳಲ್ಲಿ  ಓದುಗ ಒಂದೋ ಡಾಕ್ಟರ್ ಆಗುತ್ತಾನೆ; ಇಲ್ಲವೇ ಪ್ರಾಣಿಯ ಮಾಲಕನಾಗುತ್ತಾನೆ.
ಇತರೆ ಪಾತ್ರಗಳೂ ಆಗಬಹುದು ; ಪ್ರಾಣಿಯಾಗಿಯೂ ಅನುಭವಿಸಬಹುದು.
ಈ ಪುಸ್ತಕ ಓದುವವನಿಗೆ ಕೃಷಿ – ಗೋ ಸಂಪತ್ತು ಇರಲೇಬೇಕೆಂದಿಲ್ಲ. ಅವೆಲ್ಲವೂ ಇದೆಯೆಂಬ ಭ್ರಮೆಯನ್ನು ಆವರಿಸಿ ಎಲ್ಲಾ ಪ್ರಸಂಗಗಳಲ್ಲಿ ನಮ್ಮ ಪಾತ್ರಗಳನ್ನು ನಾವೇ ಕಂಡುಕೊಳ್ಳುತ್ತೇವೆ .
ಕಳೆದ 25 ವರ್ಷಗಳ ನನ್ನ ಪ್ರಾಕ್ಟೀಸಿನಲ್ಲಿ ಅರಿವಿದ್ದೋ- ಅರಿವಿಲ್ಲದೆಯೋ ಆಗಾಗ ಹೆರಿಯಟ್ ನ ನೆನಪಾಗುತ್ತಿದ್ದರೂ  ಈ ಪುಸ್ತಕ  ಓದಿದ ನಂತರ ” ಹೌದಲ್ಲ, ನನ್ನಲ್ಲೂ ಒಬ್ಬ ಹೆರಿಯಟ್ ಇದ್ದಾನೆ” ಎಂಬಷ್ಟರ ಮಟ್ಟಿಗೆ ನನಗೇ  ನನ್ನ ಬಗ್ಗೆ ಹೆಮ್ಮೆ.
ಹೆಗಡೆಯವರ ಭಾವಾನುವಾದವೇ ಹಾಗೆ, ಅವರು ಈ ಮೊದಲು ಮೂಲ ಕನ್ನಡಿಗರೇ ಅದ, ಗುಜರಾತಿ ಪಶು ವೈದ್ಯ,  ಡಾ . ಹೆರಂಜಾಲರ ಆತ್ಮ ಕಥೆಯನ್ನು 2006ರಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದರು . ಅವರ ಭಾವಾನುವಾದ ಎಷ್ಟು ಸಮೃದ್ಧ ವಾಗಿತ್ತೆಂದರೆ ಮೂಲ ಲೇಖಕ ಹೆರಂಜಾಲರೇ ನನ್ನ ಬಳಿ ಒಮ್ಮೆ ” ಆ ಪುಸ್ತಕ ಮರಾಠಿ , ಗುಜರಾತಿ, ಹಿಂದಿ ಇತರೆ ಭಾಷೆಗಳಿಗೆ ತರ್ಜುಮೆಯಾಗಿದ್ದರೂ, ಹೆಗ್ಡೇರು ಬರೆದ ಹಾಗೆ ಈ ಹಿಂದೆ ಯಾರೂ ಬರೆದಿಲ್ಲ ” ಎಂದಿದ್ದರು . ಆ ” ಓರ್ವ ಪಶು ವೈದ್ಯನ ಅಪೂರ್ವ ಅನುಭವಗಳು ” ಪುಸ್ತಕ ಓದಿದ ನಂತರ ನಾನು ಹೆಗ್ಡೇರಿಗೆ ಫ್ಯಾನ್ ಆಗಿಬಿಟ್ಟೆ.
ನಾನು ಓದಿ ಪುಸ್ತಕ ಕೆಳಗಿಟ್ಟ ಕೂಡಲೇ ನನ್ನ ಹೆಂಡತಿಯೂ ಒಂದೇ ದಿನದಲ್ಲಿ ಓದಿ ಮುಗಿಸಿ, ತೆಗೆದ ಬಾಯಿಗೆ ” ಪಶುವೈದ್ಯ ವೃತ್ತಿಗೆ ಮಕ್ಕಳನ್ನು ಸೇರಿಸಬೇಕೋ ಬೇಡವೋ ಎನ್ನುವ ತಂದೆ ತಾಯಂದಿರೂ, ಅವರ ಮಕ್ಕಳೂ ಓದಲೇಬೇಕಾದ್ದು” ಎಂದು ವಗಾಯಿಸಿಬಿಟ್ಟಳು .
ಪಶುವೈದ್ಯ ವೃತ್ತಿಯಲ್ಲಿ ಪ್ರಾಣಿಯೇ ಕೇಂದ್ರ ಬಿಂದು. ಮಾಲೀಕ, ವೈದ್ಯರು ಜೊತೆಗೆ ನೆರವಾಗುವವರು; ವೃತ್ತಿಯಲ್ಲಿ ಹಣವನ್ನೇನೋ ಯಥೇಚ್ಚವಾಗಿ ಸಂಪಾದಿಸಲಾಗದೇ ಇರಬಹುದು – ” ವೈವಿಧ್ಯವೇ ಸಮೃ ಧ್ಧಿ” ಎಂಬ ಪರಮ ಸತ್ಯ ಈ ಹೊತ್ತಿಗೆಯಲ್ಲಿ  ಸ್ಪಷ್ಟವಾಗಿಯೇ ಬಂದಿದೆ.
ಪುಸ್ತಕ ಪ್ರಕಟಣೆಗೆ ಪ್ರೇರೇಪಿಸಿದ ಪತ್ರಕರ್ತ ನಾಗೇಶ್ ಹೆಗಡೆಯವರದ್ದೇ ಮುಖ ಪುಟ ವಿನ್ಯಾಸ; ಚಿತ್ರಕಲೆಯ ವಿದ್ಯಾರ್ಥಿನಿ ಶ್ವೇತಾ ಆಡುಕಲಾ ಅವರ ಆಕರ್ಷಕ ರೇಖಾ ಚಿತ್ರಗಳು – ಒಟ್ಟೂ ಸಮಗ್ರತೆಯನ್ನು ಎತ್ತಿ ತೋರಿಸುತ್ತವೆ .ಭೂಮಿ ಬುಕ್ಸ್ ನವರಿಗೆ ಕೃತಜ್ಞತೆಗಳು .
ಪುಸ್ತಕದಲ್ಲಿ ಡಾ .ಗಣೇಶ ಎಂ ನೀಲೇಸರರ ದೂರವಾಣಿ, ಇ ಮೈಲ್  ವಿವರಗಳಿವೆ . ಓದಿ ಇಷ್ಟವಾದರೆ ಅವರಿಗೆ ಒಂದು ಥ್ಯಾಂಕ್ಸ್  ಹೇಳಿ .            .
    ಶೀರ್ಷಿಕೆ:     ಡೇರಿ ಡಾಕ್ಟರ್ ಹೋರಿ ಮಾಸ್ಟರ್
ಭಾವಾನುವಾದ: ಡಾ.ಗಣೇಶ ಎಂ.ನೀಲೇಸರ
ಪ್ರಕಟಣೆ:        ಭೂಮಿ ಬುಕ್ಸ್, ಶೇಷಾದ್ರಿಪುರಂ,ಬೆಂಗಳೂರು. 080 23565885
ಪುಟಗಳು:       160
ಬೆಲೆ:ರೂ.        120
-   ಡಾ. ಪಿ. ಮನೋಹರ ಉಪಾಧ್ಯ.

0 comments:

Post a Comment