ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...ಕನ್ನಡ ಸಂಘ (ಸಿಂಗಪುರ)ವು ವಾರ್ಷಿಕವಾಗಿ ಆಯೋಜಿಸುವ ಸಿಂಗಾರ ಉತ್ಸವ ಸರಣಿಯಲ್ಲಿ ದಾಖಲೆಯೋಪಾದಿಯಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಸಿಂಗನ್ನಡಿಗರ ಭಾಗವಹಿಸುವಿಕೆ ಮತ್ತು ಪ್ರತಿಭಾಪ್ರದರ್ಶನದಿಂದ ಅಭೂತಪೂರ್ವ ಕಲಾಪ್ರದರ್ಶನ ವೇದಿಕೆಯಾಗಿ ಪರಿಣಮಿಸಿದ "ಸಿಂಗಾರೋತ್ಸವ - 2013" ಹಬ್ಬ,  ಸಿಂಗಪುರದ 'ಬುಕಿತ್ ಮೇರಾ ಸೆಂಟ್ರಲ್' ನಲ್ಲಿರುವ 'ಸ್ಪ್ರಿಂಗ್ ಸಿಂಗಪುರ' ಸಭಾಂಗಣದಲ್ಲಿ ಸಿಂಗನ್ನಡಿಗರ ಸಮಕ್ಷಮದಲ್ಲಿ ಅದ್ದೂರಿ, ವೈಭವ, ಉತ್ಸಾಹ, ಉಲ್ಲಾಸಗಳಿಂದ ಅಮೋಘವಾಗಿ ಆಚರಿಸಲ್ಪಟ್ಟಿತು.


ಈ ಕಾರ್ಯಕ್ರಮದ ಹಂದರವನ್ನು ಸುಮಾರು ಆರು ಗಂಟೆಗಳಿಗೂ ಮೀರಿದ 'ಬಿಡುವಿಲ್ಲದ ತಡೆರಹಿತ' ಕಾರ್ಯಕ್ರಮವಾಗಿ ಮಾರ್ಪಡಿಸಬೇಕಾಗಿ ಬಂದದ್ದು, ಸಿಂಗಾರ ವಾರ್ಷಿಕ ಹಬ್ಬ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತ ಬರುತ್ತಿರುವುದಕ್ಕೆ ಸಾಕ್ಷಿಯೇನೊ ಎಂಬಂತಿತ್ತು.

ಸಭಿಕರೆಲ್ಲಾ ಒಬ್ಬೊಬ್ಬರಾಗಿ ಸಭಾಂಗಣಕ್ಕೆ ಬರಲಾರಂಭಿಸುತ್ತಿದ್ದಂತೆ 'ಬಂದೆವು ನಾವು ನಿಮ್ಮ ಚರಣಕ್ಕ..' ಹಾಡಿನ ಗಣೇಶನ ಆರಾಧನೆಯೊಂದಿಗೆ ಹಲವಾರು ಪುಟಾಣಿಗಳು, ಮಕ್ಕಳು ಹಾಗೂ ಉತ್ಸಾಹಿ ಮಹಿಳೆಯರ ಅಂದಚಂದದ, ರಂಗುರಂಗಿನ ದಿರುಸಿನಲ್ಲಿ ಅಲಂಕಾರಭರಿತ ಆಕರ್ಷಕ ನೃತ್ಯದೊಂದಿಗೆ ಅದ್ದೂರಿಯ ಹಾಗೂ ವೈಭವಪೂರ್ಣ ಆರಂಭ ಕಂಡಿತು. ನಂತರ ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್‌ರವರು ತಮ್ಮ ಕಿರು ಸ್ವಾಗತ ಭಾಷಣವನ್ನೂ ಕ್ಷಿಪಣಿ ವೇಗದಲ್ಲಿ ಮುಗಿಸಿ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟರು. ಹಿಂದೆಯೆ ತೆರೆಯ ಮೇಲೆ ಕಾರ್ಯಕ್ರಮದ ಪೂರ್ವಸಿದ್ದತೆಗಳ 'ತುಣುಕು ಸಂಗಮ'ವು ಇಣುಕಿ ಮುಂದಿನ ರಸಪೂರ್ಣ ಪ್ರದರ್ಶನಗಳಿಗೆ ಚಾಲನೆ ನೀಡಿತು.
ಮನಮೋಹಕ ನೃತ್ಯ ಕಾರ್ಯಕ್ರಮ
                                      
ಇಡೀ ಕಾರ್ಯಕ್ರಮದ ಹಂದರವನ್ನು ನಾಲ್ಕು ಪ್ರಮುಖ ಗುಂಪುಗಳಾಗಿ ವಿಭಾಗಿಸಿ ಆಯಾ ವಿಭಾಗದಲ್ಲಿ ಸುಲಭವಾಗಿ ಆಯ್ದುಕೊಳ್ಳಲನುವಾಗುವಂತೆ 'ವಿಷಯಾಧಾರಿತ' ಉಪವಿಭಾಗಗಳಾಗಿ (ಕರ್ನಾಟಕ ಜಿಲ್ಲೆ / ಪ್ರಾಂತ್ಯ, ಕರ್ನಾಟಕದ ಹಬ್ಬಗಳು, ಭಾರತದ ಪೌರಾಣಿಕ ಹಿನ್ನಲೆ, ಕರ್ನಾಟಕದ ಶ್ರೇಷ್ಟ ವ್ಯಕ್ತಿತ್ವಗಳು, ಎಪ್ಪತ್ತರಿಂದ ತೊಂಭತ್ತರ ದಶಕದ ಕನ್ನಡ ಹಾಡುಗಳು, ಕನ್ನಡ ಸಾಹಿತ್ಯ ಮತ್ತು ಇತರೆ) ವಿಂಗಡಿಸಿಕೊಡಲಾಗಿತ್ತು. ಪೂರ್ತಿ ಕಾರ್ಯಕ್ರಮದಲ್ಲಿ ಕಳಪೆ ಎನ್ನಬಹುದಾದ ಒಂದೇ ಒಂದು ಪ್ರದರ್ಶನವೂ ಇರದೆ ಇದ್ದದ್ದೂ ಅವರೆಲ್ಲರ ಸಿದ್ದತೆ, ಶ್ರಮಗಳಿಗೆ ಜೀವಂತ ಸಾಕ್ಷಿಯಾಗಿತ್ತೆನ್ನಬಹುದು. ಅದಕ್ಕಿಂತಲೂ ಕುತೂಹಲಕರ ವಿಷಯವೆಂದರೆ, ಮಕ್ಕಳಷ್ಟೆ ಉತ್ಸಾಹ, ಉಲ್ಲಾಸಗಳಿಂದ ಸಮೂಹದ ಜತೆಯಲ್ಲಿ ಅಥವಾ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಪ್ರತಿಭೆ ಹೊರಗೆಡವಿದ ದೊಡ್ಡವರು ಸಹ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಮೆರುಗು ತಂದಿತ್ತರು.

ಶ್ಲೋಕ ಪಠಣ, ಭರತ ನಾಟ್ಯ, ಹಾಡುಗಾರಿಕೆ, ದೇವರ ಭಕ್ತಿ ಗೀತೆ, ಬಗೆಬಗೆಯ ನೃತ್ಯ-ಸಮೂಹ ನೃತ್ಯ-ನೃತ್ಯರೂಪಕ, ಜುಗಲ್ ಬಂದಿ ಸಮೂಹ ಗಾಯನ, ಪಿಟೀಲು ವಾದನ, ಕೀಬೋರ್ಡ್ ವಾದನ, ತಬಲಾ ಹಾಗು ತರತರದ ವಾದ್ಯ ಪ್ರಕಾರಗಳ ಝೇಂಕಾರ, ಚಲನ ಚಿತ್ರದ ಹಾಡುಗಳು, ಭಾವಗೀತೆಗಳು, ಹಿಂದೂಸ್ತಾನಿ ಸ್ವರಮಾಲ, ಜನಪದ ಹಾಡುಗಳು ಮತ್ತು ಬಡಗ ಜಾನಪದ ನೃತ್ಯ - ಹೀಗೆ ಸಿಂಗನ್ನಡಿಗರಿಗೆ ಬಗೆಬಗೆ ಭಕ್ಷ್ಯ, ಭೋಜನದ 'ಬಫೆ'ಯ ರಸದೌತಣ ನೀಡಿತು. ಸಮಾರಂಭದುದ್ದಕ್ಕೂ ಅನೇಕ ಪ್ರತಿಭೆಗಳು ತಮ್ಮ ಕಲಾ ಕೌಶಲದಿಂದ ಮನಸೆಳೆದರು.

ಪ್ರೇಕ್ಷಕರನ್ನು ನಕ್ಕು ನಲಿಸಿದ 'ನಮ್ಮ ಇಸ್ಕೂಲು' ನಾಟಕ ಹಲವಾರು ಚಿಣ್ಣರ ಅದ್ಭುತ ಹಾಗೂ ಸಹಜ ನಟನೆ ಜತೆ ವಯಸ್ಕ ಕಲಾವಿದರ ಅಮೋಘ ತಾಳಮೇಳ, ಸಹಯೋಗದಿಂದಾಗಿ ಸಿಂಗಾರ ಉತ್ಸವ ಕಾರ್ಯಕ್ರಮದ ಪ್ರಮುಖ ಮುಖ್ಯ ಆಕರ್ಷಣೆಗಳಲ್ಲೊಂದಾಗಿತ್ತು. ಅದೇ ಲಹರಿಯಲ್ಲಿ ಚುರುಕು ಮುಟ್ಟಿಸುವ ಡೈಲಾಗುಗಳ ಮೂಲಕ ನಗೆಯುಕ್ಕಿಸಿದ ಸ್ವಾಮೀಜಿಗಳ ಕಿರು ಪ್ರಹಸನವೂ ಪ್ರೇಕ್ಷಕರನ್ನು ಕಟ್ಟಿಡುವಲ್ಲಿ ಯಶಸ್ವಿಯಾಯ್ತು.

ಹೀಗೆ ವಿಧವಿಧ ಸ್ತರ, ಲಹರಿಗಳಲ್ಲಿ ಹರಿದಾಡಿದ ಉತ್ಸವ ಸುಧೆ ಸಾಹಿತ್ಯಾಸಕ್ತರನ್ನು ತಟ್ಟದೆ ಬಿಡಲಿಲ್ಲ - ನೃತ್ಯ, ವಾದ್ಯ ಗಾಯನ, ಕಾವ್ಯ ವಾಚನ ಮತ್ತು ಗಾಯನ ರೂಪದಲ್ಲಿ ಹರಿದ ಈ ಸಾಹಿತ್ಯ ಗಂಗೆಯನ್ನು ಉಣಬಡಿಸಿ ಸಾಹಿತ್ಯಾಸಕ್ತರ ಮನ ತಣಿಸಿದರು. ರಂಗು ರಂಗಿನ ಮೆರುಗು ಕೊಡುವ ಕೈಲಾಸಂರವರ 'ಕೋಳೀಕೆ ರಂಗ' ಹಾಡಿನ ನೃತ್ಯವು ಎಲ್ಲರ ಮನಸೆಳೆಯಿತು. ಇವೆಲ್ಲಾ ಕಾರ್ಯಕ್ರಮದ ನಡುವೆಯೆ ಕನ್ನಡ ಚಲನ ಚಿತ್ರ ರಂಗದ ಹಳೆ ಮತ್ತು ಹೊಸ ತುಣುಕುಗಳನ್ನು ಒಗ್ಗೂಡಿಸಿದ 'ಕನ್ನಡ ಚಲನ ಚಿತ್ರ' ಎರಡು ಭಾಗಗಳಲ್ಲಿ ಪ್ರಸ್ತುತವಾಗಿ ನೋಡುಗರಿಗೆ ನೆನಪಿನ ಕಚಗುಳಿಯಿಟ್ಟಿತು. ಇತ್ತೀಚೆಗಷ್ಟೆ ನಮ್ಮನ್ನಗಲಿದ ಡಾಕ್ಟರ್ ಪಿ.ಬಿ. ಶ್ರೀನಿವಾಸ್‌ರವರ ನೆನಪಿನ ತುಣುಕು ಮತ್ತು ಹಾಡುಗಳನ್ನೊಡಗೂಡಿಸಿದ್ದ ಭಾವಪೂರ್ಣ ಶ್ರದ್ದಾಂಜಲಿಗೆ ಅಲ್ಲಿ ನೆರೆದಿದ್ದ ಕನ್ನಡಿಗರೆಲ್ಲ ಅಶ್ರುತರ್ಪಣದೊಂದಿಗೆ ಕಣ್ಮರೆಯಾದ ಗಾನ ಗಂಧರ್ವನಿಗೆ ತಮ್ಮ ಕೊನೆಯ ನಮನ ಸಲ್ಲಿಸಿದರು. ಸಿಂಗಾರೋತ್ಸವದ ಅಂಗವಾಗಿ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯು ಇದೇ ಸಂದರ್ಭದಲ್ಲಿ ನಡೆಯಿತು. ಈ ಸೊಗಸಾದ ಸಂಜೆ ಎಲ್ಲರೂ ಇನ್ನೊಂದಷ್ಟು ಹೊತ್ತು ನಡೆದಿದ್ದರೆ ಚೆನ್ನಿತ್ತೆಂದು ಅಂದುಕೊಳ್ಳುತ್ತಿರುವಾಗಲೇ ವಂದನಾರ್ಪಣೆ ಮತ್ತು ನಾಡಗೀತೆಯೊಂದಿಗೆ ವಿಧ್ಯುಕ್ತವಾಗಿ ಹಾಗೂ ಸುಗಮವಾಗಿ ಮುಕ್ತಾಯವಾಯ್ತು.

ವರದಿ: ನಾಗೇಶ ಮೈಸೂರು, ಸಿಂಗಪುರ; ಛಾಯಾಚಿತ್ರ: ಕನ್ನಡ ಸಂಘ (ಸಿಂಗಪುರ)

0 comments:

Post a Comment