ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಇಂದು ಫೇಸ್ಬುಕ್ನಲ್ಲಿ, ಟ್ವಿಟರ್ನಲ್ಲಿ ಎಲ್ಲೆಲ್ಲೂ ಮೋದಿ ಅಲೆ ಕಾಣುತ್ತಿದೆ. ಅವರು ಪ್ರಧಾನಮಂತ್ರಿ ಅಭ್ಯರ್ಥಿ  ಆಗಬೇಕೆಂದು ಕೆಲವು ಯುವಕರು ಅಡ್ವಾಣಿಯವರ ಮನೆ ಎದುರು ಕೂಗಾಡಿದರು! ಇದ್ದಕ್ಕಿದ್ದಂತೆ ಅಡ್ವಾಣಿಯವರು ಖಳನಾಯಕ ಎಂಬಂತೆ ಬಿಂಬಿಸಲ್ಪಡುತ್ತಿದ್ದಾರೆ. ಅಡ್ವಾಣಿಯವರ ಪ್ರಧಾನಮಂತ್ರಿಯಾಗುವ ಕನಸು ಅಧಿಕಾರದ ಹಪಹಪಿ ಯಂತೆ ಕಾಣುತ್ತಿದೆ. ಬಿ.ಜೆ.ಪಿ.ಯಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ಪ್ರಧಾನಮಂತ್ರಿಯೂ ಆಗಬಹುದು ಎಂಬ ಮಟ್ಟಕ್ಕೆ ಬಿ.ಜೆ.ಪಿ.ಯನ್ನು ಬೆಳೆಸಿದ್ದು ಯಾರು?... ಬಲಿಷ್ಠ ಕಾಂಗ್ರೆಸ್ಗೆ ಬಿ.ಜೆ.ಪಿ. ಎಂಬ ಶಾಶ್ವತ ಪ್ರತಿಸ್ಪರ್ದಿ ಯನ್ನು ಕಟ್ಟಿ ನಿಲ್ಲಿಸಿದ್ದು ಯಾರು? ಜೀವನಪೂರ್ತಿ ಅತ್ಯಂತ ಪ್ರಮುಖ ಹುದ್ದೆಯನ್ನು ಹಿರಿಯರಿಗಾಗಿ ಬಿಟ್ಟುಕೊಟ್ಟವರಲ್ಲಿ ಈಗ ಆ ಹುದ್ದೆಯನ್ನು ಕಿರಿಯರಿಗೆ ಬಿಟ್ಟುಕೊಡಿ ಎಂದರೆ ಭೀಷ್ಮ ರಂಥವರು ಬಿಸ್ಮಾರ್ಕ್ ರಾಗದೆ ಇರುತ್ತಾರೆಯೇ.

1980 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಬಿ.ಜೆ.ಪಿ.ಯ ಮುಖ್ಯಸ್ಥರಾದರು. ಬಿ.ಜೆ.ಪಿ. ದೇಶದಾದ್ಯಂತ ಬಹುತೇಕ ಎಲ್ಲಾ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಅಟಲ್ ಮಹಾನ್ ನಾಯಕರೇ ಆದರೆ ಅವರ ಅಜೆಂಡಾ ಸೂಕ್ತವಾಗಿರಲಿಲ್ಲ. ಗಾಂಧೀಜಿಯ ತತ್ವಗಳನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದಿದ್ದರು ಅಟಲ್. ಕಾಂಗ್ರೆಸ್ ಕೂಡಾ ಹಾಗೆ ಹೇಳಿ-ಹೇಳಿ ಏನೂ ಮಾಡದ ಕಾರಣ ಆ ತತ್ವಗಳೇ ಹಳಸು ಅಂತ ಜನರಿಗೆ ಅನಿಸಿತ್ತು! ಮೇಲಾಗಿ ಅಟಲ್   class ಭಾಷಣ ಭಾರತದ mass  ಗೆ ತಲುಪಲಿಲ್ಲ.

1984ರ ಚುನಾವಣೆಯಲ್ಲಿ ಅಟಲ್ರನ್ನು ಸೇರಿಸಿ ಬಿ.ಜೆ.ಪಿ. ದೇಶದಾದ್ಯಂತ ಸೋಲು ಅನುಭವಿಸಿತು. ಅಂದು ಬಿ.ಜೆ.ಪಿ.ಯಿಂದ ಲೋಕಸಭೆಗೆ ಆಯ್ಕೆಯಾದದ್ದು ಇಬ್ಬರು ಮಾತ್ರ! ನಂತರ ಲಾಲ್ ಕೃಷ್ಣ ಅಡ್ವಾಣಿ ಮುಖ್ಯಸ್ಥರಾದರು. ಅಯೋಧ್ಯಾ ರಾಮಮಂದಿರವನ್ನು, ಹಿಂದುತ್ವವನ್ನು ಚುನಾವಣಾ ವಿಷಯವನ್ನಾಗಿ ಮಾಡಿದರು. ನಿರ್ಜೀವ ಬೈಕು, ಕಾರುಗಳಿಗೂ ಪೂಜೆ ಮಾಡಿಸುವ ವಿಪರೀತ ಧಾರ್ಮಿಕರಾಗಿರುವ ಭಾರತೀಯರಿಗೆ ಅಡ್ವಾಣಿಯವರು ಮಾಡಿದ್ದು ಸರಿ ಅನಿಸಿತು. ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಎಂದರು ಅಡ್ವಾಣಿ ಜನರು ಹೌದೌದು ಅಂದರು. ಅದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಅಲ್ಪಸಂಖ್ಯಾತರಿಗಾಗಿ ಸಂವಿಧಾನವನ್ನೆ ತಿದ್ದಲು ಮುಂದಾಗಿದ್ದರು!

ರಾಜೀವ್ ಹಾಗೂ ಕಾಂಗ್ರೆಸ್ನ ಅಲ್ಪಸಂಖ್ಯಾತರ ಓಲೈಕೆ ಬಹುಸಂಖ್ಯಾತರಲ್ಲಿ ಅಸಹ್ಯ ಹುಟ್ಟಿಸಿತ್ತು. ಓಲೈಕೆಯನ್ನು ಕಿತ್ತೊಗೆಯುತ್ತೇವೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ, ಹಿಂದುತ್ವವನ್ನು ಎತ್ತಿ ಹಿಡಿಯುತ್ತೇವೆ ಬಿ.ಜೆ.ಪಿ.ಗೆ ಮತ ನೀಡಿ ಎಂದರು ಅಡ್ವಾಣಿ. ಜನ ಮತ ಹಾಕಿದರು. ಬಿ.ಜೆ.ಪಿ.ಯ ಸ್ಥಾನ ಎರಡರಿಂದ 89ಕ್ಕೆ ಏರಿತು! ನಂತರ ನೂರರ ಗಡಿ ದಾಟಿತು! ದೇಶದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿ ಜನರನ್ನು ಸೆಳೆದು ಚುನಾವಣಾ ರಣತಂತ್ರ ರೂಪಿಸಿ ಅದರಲ್ಲಿ ಗೆದ್ದರು ಅಡ್ವಾಣಿ.

ಗೆದ್ದ ನಂತರ ಹೇಳಿದರು ಪ್ರಧಾನಮಂತ್ರಿ ಅಭ್ಯರ್ಥಿ  ಅಟಲ್ಜೀ ನಾನಲ್ಲ success has many fathers but failure is a bastard ಅಂತಾರೆ. ಆದರೆ ಇಲ್ಲಿsuccess ನ fatherತಾನು ಗೆಲ್ಲಿಸಿದ್ದಕ್ಕಾಗಿ ಸಿಗಬಹುದಾಗಿದ್ದ ಪ್ರತಿಫಲವನ್ನು ನಿರಾಕರಿಸಿದ್ದರು! ಆಗಲೆ ಅಡ್ವಾಣಿಯವರನ್ನು ಜನ ಬಿ.ಜೆ.ಪಿ.ಯ ಭೀಷ್ಮ ಅಂತ ಕರೆದದ್ದು. ಅಧಿಕಾರಕ್ಕಾಗಿ ಎಂದೂ ಹಪಹಪಿಸದ ಸದಾ ಯುದ್ಧದ ರಣತಂತ್ರ ರೂಪಿಸುತ್ತ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದ ಭೀಷ್ಮರ ಹೆಸರನ್ನು ಅಡ್ವಾಣಿಯವರಿಗಲ್ಲದೆ ಬೇರೆ ಯಾರಿಗೂ ಇಡುವಂತಿಲ್ಲ.

1984 ರಿಂದ 2004 ರ ತನಕ ರಥಯಾತ್ರ, ಭಾರತ್ ಸುರಕ್ಷಾ ಯಾತ್ರಾ, ಭಾರತ್ ಉದಯ್ ಯಾತ್ರಾ ಸೇರಿದಂತೆ ಅದೆಷ್ಟೊ ಯಶಸ್ವಿ ಯಾತ್ರೆಗಳನ್ನು ನಡೆಸಿದರು ಅಡ್ವಾಣಿ. ಆ ಇಪ್ಪತ್ತು ವರ್ಷಗಳ ಕಾಲವೂ ಯಾತ್ರೆ ಮುಗಿದ ನಂತರ ಅಟಲ್ಜಿ ನಮ್ಮ ಪ್ರಧಾನಮಂತ್ರಿ ಅಭ್ಯರ್ಥಿ  ಎಂದೇ ಹೇಳುತ್ತಿದ್ದರು ಅಡ್ವಾಣಿ. ಅವರು ಕೋಮುವಾದಿ ಎಂಬ image ಸೃಷ್ಠಿಸಿಕೊಂಡಿದ್ದರು, ಅಟಲ್ರಿಗೆ ಜಾತ್ಯಾತೀತ ಎಂಬ image  ಇತ್ತು. ಆದ್ದರಿಂದ ಅಟಲ್ ಪ್ರಧಾನಮಂತ್ರಿ ಅಭ್ಯರ್ಥಿ  ಎಂದರೆ ಮಾತ್ರ ಬೇರೆ ಪಕ್ಷದ ಬೆಂಬಲ ಸಿಗುತ್ತಿತ್ತು.  ಆ ಕಾರಣಕ್ಕಾಗಿ ಅನಿವಾರ್ಯವಾಗಿ ಅವರು ಅಟಲ್ರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದರು ಹೀಗೆ ವಾದ ಮಾಡುವವರೂ ಇದ್ದಾರೆ. ಆದರೆ ಗೆದ್ದೆತ್ತಿನ ಬಾಲ ಹಿಡಿಯುವ ಸಣ್ಣ ಪಕ್ಷಗಳಿಗೆ ಟಚಿರಜ ನ ಹಂಗು ಖಂಡಿತಾ ಇರಲಿಲ್ಲ.

 ಯಾವ ದೃಷ್ಠಿಯಿಂದ ನೋಡಿದರೂ ಅಡ್ವಾಣಿಯವರು ಮಾಡಿದ್ದು ತ್ಯಾಗವೇ. ಆದರೆ ಯಾವಾಗ ವಾಜಪೇಯಿ ನಡೆಯಲಾರದಷ್ಟು ಮುದುಕರಾಗಿ, ಸಕ್ರಿಯ ರಾಜಕೀಯದಿಂದ ಅಘೋಷಿತ ನಿವೃತ್ತಿ ಪಡೆದರೋ ಆಗ ಅಡ್ವಾಣಿ ಬದಲಾದರು. ಏನಾದರೂ ಮಾಡಿ ಪ್ರಧಾನಮಂತ್ರಿ ಆಗಲೇಬೇಕು ಎಂಬ ಪಣ ತೊಟ್ಟವರಂತೆ ವರ್ತಿಸತೊಡಗಿದರು. ಭೀಷ್ಮರಲ್ಲಿ ಬಿಸ್ಮಾರ್ಕ್ ರ ಗುಣಗಳೂ ಕಂಡವು. ಸುಮಾರು 20 ವರ್ಷದ ತ್ಯಾಗದ ನಂತರ ಈಗ ಪ್ರಧಾನಮಂತ್ರಿ ಆಗಬೇಕು ಎಂಬ ಹಠ ಬರುವುದು ಸಾಮಾನ್ಯ ಅಲ್ಲವೇ?

ಪ್ರಧಾನಮಂತ್ರಿಯಾಗುವವರಲ್ಲಿ ಸೆಕ್ಯುಲರ್ ಗುಣ ಇರಲೇಬೇಕಲ್ಲವೇ? ಆದ್ದರಿಂದ ತಾನು ಸೆಕ್ಯುಲರ್ ಎಂದು ತೋರಿಸಿಕೊಳ್ಳಲು ಭಾರತವನ್ನು ಒಡೆದ ಜಿನ್ನಾರನ್ನು ಸೆಕ್ಯುಲರ್ ಎಂದು ಕರೆದರು ಅಡ್ವಾಣಿ. ಜನ ದಂಗಾದರು. ಅಂತಹ ಮಾತು ಕೇಳಲು ಜನ ಸಿದ್ಧರಿದ್ದರೆ ಕಾಂಗ್ರೆಸ್ಗೆ ಮತ ಹಾಕುತ್ತಾರೆ ಅದಕ್ಕಾಗಿ ಅಡ್ವಾಣಿ ಬೇಕಾಗಿರಲಿಲ್ಲ. ದೊಡ್ಡ ವಿವಾದವೇ ಆಯಿತು. ಅಡ್ವಾಣಿ ಹಿಂದುತ್ವದಿಂದ ಗಳಿಸಿದ ಜನಪ್ರಿಯತೆಯನ್ನು ಕಳೆದುಕೊಂಡರು. 2009ರ ಲೋಕಸಭೆ ಚುನಾವಣೆ ಬಂತು, ಅಡ್ವಾಣಿಯವರೆ ಪ್ರಧಾನಮಂತ್ರಿ ಅಭ್ಯರ್ಥಿ ಯಾದರು, ಆದರೆ ಹಿಂದುತ್ವದ ಮತಗಳನ್ನು ಅವರು ಕಳೆದುಕೊಂಡಿದ್ದರು, ಬೇರೆ ವಿಷಯದಿಂದ ಮತ ಪಡೆಯಲು ಹಿಂದಿನ ಆಕರ್ಷಣೆ ಅವರಲ್ಲಿ ಉಳಿದಿರಲಿಲ್ಲ. ಪರಿಣಾಮ ಸೋಲು. ಅವರು ಇನ್ನೂ ಬದಲಾದರು,

 ಬಿ.ಜೆ.ಪಿ.ಯಲ್ಲೇ ತನ್ನದೊಂದು ಗುಂಪು ಕಟ್ಟಿಕೊಂಡರು. ಪ್ರಧಾನಮಂತ್ರಿ ಅಭ್ಯರ್ಥಿ ಯಾಗುವ ಲಕ್ಷಣಗಳನ್ನು ತೋರಿಸುತ್ತಿದ್ದ ಮೋದಿಯವರ ಗುಂಪು ಹಾಗೂ ಅಡ್ವಾಣಿಯವರ ಗುಂಪು ಎಂಬ ಎರಡು ಗುಂಪು ಪ್ರಾರಂಭವಾಯಿತು. ಈಗ 2013 ದೇಶದ ಅತ್ಯಂತ ಜನಪ್ರಿಯ ನಾಯಕರು ನರೇಂದ್ರ ಮೋದಿ. ದೇಶದಲ್ಲಿ ನಡೆದ ಚುನಾವಣೆಯ ಎಲ್ಲಾ ಸಮೀಕ್ಷೆಗಳಲ್ಲಿ ಅತ್ಯಂತ ಹೆಚ್ಚು ಮತ ಪಡೆದದ್ದು ಮೋದಿ. ಅವರನ್ನೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಬಿ.ಜೆ.ಪಿ. ಗೆಲ್ಲುವ ಸಾಧ್ಯತೆ ಹೆಚ್ಚು, ಆದರೆ ಅದಕ್ಕೆ ಅಡ್ಡಗಾಲು ಹಾಕುತ್ತಿರುವವರೇ ಅಡ್ವಾಣಿ. ಸ್ವತಃ ಶಿವರಾಜ್ಸಿಂಗ್ ಚೌಹಾಣ್ರೇ ಮೋದಿ ನಂ. 1, ನಾನು ನಂ. 3 ಎಂದರೂ ಮೋದಿಗಿಂತ ಚೌಹಾಣ್ ಶ್ರೇಷ್ಠ ಎಂಬರ್ಥದಲ್ಲಿ ಮಾತನಾಡಿದರು ಅಡ್ವಾಣಿ! 1984ರಿಂದ 2004ರ ತನಕ ಹಿರಿಯರಿಗಾಗಿ ತ್ಯಾಗ ಮಾಡಿದ್ದಾರೆ ಈಗ ಕಿರಿಯರಿಗಾಗಿ ತ್ಯಾಗ ಮಾಡಲಿ ಎಂದು ಪಕ್ಷ, ಜನತೆ ಬಯಸುವುದು ತಪ್ಪು.

 ಆದರೆ ಸ್ವಹಿತಕ್ಕಿಂತ ಪಕ್ಷವೇ ಮುಖ್ಯ ಎಂದು ಸಾರಿದವರು ಸ್ವಹಿತಾಸಕ್ತಿಗಾಗಿ ಪಕ್ಷದ ಗೆಲುವಿಗೆ (ಮೋದಿ) ಅಡ್ಡಗಾಲು ಹಾಕುವುದು ಎಷ್ಟು ಸರಿ? 2009ರಲ್ಲಿ ಅಡ್ವಾಣಿ ಸೋತಿದ್ದು ನಿಜ, ಆದರೆ ಪಕ್ಷಕ್ಕಾಗಿ ಅರುವತ್ತು ವರ್ಷ ದುಡಿದವರಿಗೆ ಕೇವಲ ಒಂದು ಅವಕಾಶ ನೀಡಿದರೆ ಸಾಕೆ? ಅವರು ಪ್ರಧಾನಮಂತ್ರಿ ಆದರೂ ಆಗದಿದ್ದರೂ ದೇಶ ಬಹಳ ಕಾಲ ಅವರನ್ನು ನೆನಪಿಟ್ಟುಕೊಳ್ಳುತ್ತದೆ. ಕಾಂಗ್ರೆಸ್ನ ಓಲೈಕೆಯ ರಾಜಕೀಯದ ವಿರುದ್ಧ ಜನರನ್ನು ಬಡಿದೆಬ್ಬಿಸಿದ್ದಕ್ಕಾಗಿ, ಬಲಿಷ್ಠ ಕಾಂಗ್ರೆಸ್ಗೆ ಬಲಿಷ್ಠ ವಿರೋಧ ಪಕ್ಷ ನೀಡಿದ್ದಕ್ಕಾಗಿ, ಆ ಮೂಲಕ 1975ರ ತುರ್ತು ಪರಿಸ್ಥಿತಿ ಪುನಃ ಬರೆದಿರುವಂತೆ ತಡೆದದ್ದಕ್ಕಾಗಿ. ಬಿಸ್ಮಾರ್ಕ್ ಜರ್ಮನಿಯನ್ನು ಒಗ್ಗೂಡಿಸಿದರಲ್ಲ ಆಗ ಎಷ್ಟು ಜನರನ್ನು ಸಂಘಟಿಸಿದ್ದರೋ ಅದಕ್ಕಿಂತ ಹೆಚ್ಚು ಜನರನ್ನು ಅಡ್ವಾಣಿ ಹಿಂದುತ್ವದ ಹೆಸರಿನಲ್ಲಿ ಒಗ್ಗೂಡಿಸಿ ಕಾಂಗ್ರೆಸ್ಗೆ ಬಿ.ಜೆ.ಪಿ. ಎಂಬ ಶಾಶ್ವತ ಪ್ರತಿಸ್ಪರ್ಧಿ ಯನ್ನು ಸೃಷ್ಠಿಸಿದ್ದಾರೆ. ಆದರೆ ಅದೇ ಬಿಸ್ಮಾರ್ಕ್ ರ ಪ್ರಜಾಪ್ರಭುತ್ವ ವಿರೋಧಿ ಸ್ವಹಿತಾಸಕ್ತಿಯ ಗುಣ ಅಡ್ವಾಣಿಯವರಿಗೂ ಬಂದದ್ದು ದುರಂತ. ಯಾರು ಪ್ರಧಾನಮಂತ್ರಿ ಅಭ್ಯರ್ಥಿ ಯಾಗಬೇಕು ಎಂದು ಅಭಿಪ್ರಾಯ ಹೇಳುವುದು ನನ್ನ ಉದ್ದೇಶವಲ್ಲ. ಫೇಸ್ಬುಕ್ನಲ್ಲಿ ಮೋದಿಯ ಗುಣಗಾನ ಮಾಡುವವರಿಗೆ ಭೀಷ್ಮರು ಯಾಕೆ ಬಿಸ್ಮಾರ್ಕ್  ರಾಗುತ್ತಾರೆ ಎಂದು ತಿಳಿಸುವುದು ಉದ್ದೇಶ.
ಕಾಂಗ್ರೆಸ್ನಂತೆ ಅಡ್ವಾಣಿ ಕುಟುಂಬ ರಾಜಕೀಯ ಮಾಡಿದ್ದರೆ ಇಂದು ಅವರಿಗೆ ಪ್ರತಿಸ್ಪರ್ದಿಗಳೇ ಇರುತ್ತಿರಲಿಲ್ಲ, ಅಲ್ಲವೇ?! ಈಗ ನೋಡಿ ಅವರ ಪರಿಸ್ಥಿತಿ!
ಆದಿತ್ಯ ಭಟ್ ಉಪನ್ಯಾಸಕ, ಲೇಖಕ

0 comments:

Post a Comment