ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಧ್ಯಾಯ 13 - ದೈನಂದಿನ ಧಾರಾವಾಹಿ ಭಾಗ 36
- ಅನು ಬೆಳ್ಳೆ.

ಮನಸ್ವಿತಾ ಉದ್ದೇಶಪೂರ್ವಕವಾಗಿ ನವೀನರಾಯರ ಕುಟುಂಬದವರ ಮನಸ್ಸು ನೋಯಿಸಬೇಕೆನ್ನುವ ಯೋಚನೆಯಲ್ಲಿರಲಿಲ್ಲ. ತನ್ನ ತಂದೆ ಶ್ರೀನಿವಾಸರಾಯರು ತನಗೆ ಯಾವ ವಿಷಯದಲ್ಲಿಯೂ ಬೆಂಗಾವಲಾಗಿ ನಿಲ್ಲದೆ ಪದೇ ಪದೇ ಆಡಿಕೊಳ್ಳುವುದು, ಕೆಲವೊಮ್ಮೆ ಮನಸ್ಸು ಘಾಸಿಗೊಳ್ಳುವಂತೆ ನಡೆದುಕೊಳ್ಳುವುದನ್ನು ಸಹಿಸಳು. ಅಂತಹ ಪರಿಸ್ಥಿತಿಯನ್ನು ನಿರ್ಲಕ್ಷಿಸಿ , ವಾತಾವರಣವನ್ನೇ ಕೆಡಿಸಿ ಅದನ್ನು ಅವಳ ತಲೆಗೆ ಕಟ್ಟುವುದನ್ನು ಬಯಸಳು. ಹಾಗಾಗಿ ಅವರು ನಯನಾಳನ್ನು ಉತ್ತೇಜಿಸಿ ತನ್ನ ಬಳಿಗೆ ಕಳುಹಿಸಿದಾಗ ಅಸಹನೆಯಿಂದ ಸಿಡಿದಿದ್ದಳು.
 ನಯನಾಳೆ ಅವಳ ಬಳಿ ಬಂದು ಕೇಳುತ್ತಿದ್ದರೂ ನಯವಾಗಿಯೇ ನಿರಾಕರಿಸಿ ಬಿಡುತ್ತಿದ್ದಳೊ ಅಥವಾ ಅವಳಿಗೆ ತಿಳಿ ಹೇಳುತ್ತಿದ್ದುದೆನೊ ಮಾಡುತ್ತಿದ್ದಳೇನೊ.
ಆ ದಿನ ರಾತ್ರಿ ಅವರುಗಳ ಜೊತೆಗೆ ಕುಳಿತು ಊಟ ಮಾಡುವುದು ಬೇಡವೆನಿಸಿತು. ಅವರೆಲ್ಲರ ಮಾತುಕತೆಯ ನಡುವೆ ಊಟ ಸಾಗುತ್ತಿರುವಾಗ ಟಿವಿಯ ಪ್ರೇಕ್ಷಕಿಯಾಗುಳಿದಳು. ಏತನ್ಮಧ್ಯೆ ರಮಣಿಯವರು ಅವಳ ಬಗ್ಗೆ ಹೇಳಿದುದನ್ನು ಆಲಿಸಿದವಳ ಮೈ ಉರಿದು ಹೋಯಿತು.

'ನಿಮ್ಮ ಮಗಳು ಊಟ ಮಾಡೋದಿಲ್ವೆ?' ಎಂದು ಅವರು ಕೇಳಿದುದರ ಹಿಂದೆ ಯಾವ ದುರುದ್ದೇಶವಿಲ್ಲದಿದ್ದರೂ ಮನಸ್ವಿತಾಳ ತಾಯಿ ಭಾಮಿನಿಯವರು ಆಡಿದ ಮಾತು ಅವಳಿಗೆ ಬೇಸರ ತರಿಸಿತ್ತು.
`ಅವಳು ರಾತ್ರಿ ಊಟ ಮಾಡೋದಿಲ್ಲ ಮನೆಗೆ ಬರುವಾಗ್ಲೆ ಏನಾದ್ರೂ ತಿಂದುಕೊಂಡು ಬರುತ್ತಾಳೆ' ಹಸಿವಿನಿಂದ ಹೊಟ್ಟೆ ತಾಳ ಹಾಕುತ್ತಿದ್ದರೂ ತಣ್ಣೀರು ಬಟ್ಟೆ ಹೊಟ್ಟೆಯ ಮೇಲೆ ಹಾಕಿಕೊಂಡು ಮಲಗುವುದು ಅನಿವಾರ್ಯವಾಯಿತು. ಅಷ್ಟೊಂದು ನಿಷ್ಟುರವಾಗಿ ತಾಯಿ ಹೇಳಿದ ಮೇಲೆ ಅವಳ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಹಾಗೇ ಮಲಗಿಕೊಂಡವಳಿಗೆ ಕನಸಾಗಿ ಕಾಡಿದ ಅರವಿಂದ.

ಅರವಿಂದನ ಬಗ್ಗೆ ಮಾಹಿತಿ ಕಲೆ ಹಾಕುತ್ತಲೇ ಅವನ ಬಗ್ಗೆ ಅನುಕಂಪವೊಂದು ಹೊರ ಹೊಮ್ಮಿತು. ಆತ ಬೌದ್ಧಿಕವಾಗಿಯೊ ಮಾನಸಿಕವಾಗಿಯೊ ಒಬ್ಬ ದುರ್ಬಲ ವ್ಯಕ್ತಿಯೆನ್ನುವುದು ಅವನ ಪತ್ರಗಳನ್ನು ಅಬಾಭ್ಯಾಸಿಸಿದವಳಿಗೆ ಮನವರಿಕೆಯಾಗಿತ್ತು. ಆದರೆ ಆ ನ್ಯೂನತೆ ಕೇವಲ ಋಣಾತ್ಮಕವಾಗಿದ್ದರೆ ಆತ ಯಾವುದೊ ಸ್ವಾರ್ಥಕ್ಕೆ ತನ್ನ ಜೊತೆಗೆ ಹಠದಿಂದ ಸಂಬಂಧ ಬೆಳೆಸುವುದಕ್ಕೆ ಪ್ರಯತ್ನಿಸುತ್ತಿರುವನೆನ್ನುವುದು ಅವಳ ಆತಂಕಕ್ಕೆ ಕಾರಣವಾಗಿತ್ತು.

ತನ್ನನ್ನೇ ನಿರ್ಲಕ್ಷಿಸುತ್ತಿರುವ ಮನೆಯವರು. ಅಥವಾ ಅವರ ಹೊಂದಿಕೊಳ್ಳಲಾಗದ ಪರಿಸ್ಥಿತಿಯನ್ನು ದ್ವೇಷಿಸುವ ತಾನು ಹೊರಜಗತ್ತಿನಲ್ಲಿ ಏಕಾಂತವಾಗಿ ಕಳೆಯಲು ಅಸಮರ್ಥವಾಗಿ ಯಾರನ್ನಾದರೂ ಅವಲಂಬಿಸಬೇಕೆಂದು ಹಾತೊರೆಯುತ್ತಿದ್ದೆನೊ ಅನಿಸಿದ್ದಿದೆ ಮನಸ್ವಿತಾಳಿಗೆ. ಆಗ ಸ್ಮೃತಿ ಪಟಲದ ಮೇಲೆ ಮೂಡಿ ಬಂದದ್ದು ಮೂವರು. ನಿಖಿಲ್, ಅಶುತೋಶ್ ಮತ್ತು ಅರವಿಂದ.
ನಿಖಿಲ್ನನ್ನು ತನ್ನ ಬಾಸ್ ಅಂದುಕೊಂಡು ಒಪ್ಪಿದ ಮೇಲೆ ಅವನ ಜೊತೆಗೆ ವ್ಯವಹಾರದ ಮಾತು ಬಿಟ್ಟರೆ, ತೀರಾ ಪರ್ಸನಲ್ ವಿಷಯಗಳನ್ನು ತಳ್ಳಿ ಹಾಕಿದುದೇ ಹೆಚ್ಚು. ಅವನು ಪ್ರಪೋಸ್ ಮಾಡುವಾಗ ಅವನ ಕಣ್ಣುಗಳಲ್ಲಿದ್ದ ಆಶಾಭಾವನೆಗೆ ಸೋತು ಬಿಡುವಂತಾಗಿದ್ದರೂ ಕ್ಷುಲಕ ವಿಷಯಕ್ಕೆ ತಲೆ ಬಾಗಬಾರದು, ತಾನಿಟ್ಟ ಹೆಜ್ಜೆಯಿಂದ ಹಿಂದೆ ಸರಿದು ಸುಲಭವಾಗಿ ದೊರಕುವುದನ್ನು ನಿರಾಕರಿಸಿಬಿಡಬೇಕೆನ್ನುವ ಸ್ವಾಭಿಮಾನವೇ ಹೆಡೆಯೆತ್ತಿ ನಿಂತಂತಿತ್ತು.

ನಿಖಿಲ್ನ ಅಂತಸ್ತು, ಸ್ಥಾನಮಾನ, ಮನೆಯ ವಾತಾವರಣ ಎಲ್ಲವೂ ತನಗಿಂತ ಮೇಲು. ಅವನನ್ನು ಒಪ್ಪಿಕೊಂಡರೆ ಸುಖದ ಜೀವನ ನಡೆಸಬಹುದು. ಅಷ್ಟು ಸುಲಭದಲ್ಲಿ ಸಿಗುವ ಸುಖ ಕ್ಷಣಿಕವಾಗಬಾರದು. ಬದುಕಿನ ಜಂಜಡ. ಕಷ್ಟಗಳನ್ನು ಅನುಭವಿಸಿ ಮುಂದೊಮ್ಮೆ ಅಂತಹುದೇ ಸಂದರ್ಭ ಎದುರಾದರೆ ಅದನ್ನು ಮೀರಿ ನಿಲ್ಲುವ ದಿಟ್ಟತನದ ಮತ್ತು ಸವಾಲುಗಳನ್ನು ಎದುರಿಸುವ ಯೋಗ್ಯತೆಗೆ ಕೇವಲ ಹಣವಿದ್ದರೆ ಸಾಲದು ಅನಿಸಿದ್ದರಿಂದಲೇ ಅವನನ್ನು ಒಪ್ಪಿಕೊಳ್ಳಲು ಮನಸ್ಸು ಹಿಂಜರಿದಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಿರಾಕರಣೆಯ ಉತ್ತರವನ್ನು ತೋರಿಸಿದ್ದಳು. ಆದರೂ ನಿಖಿಲ್ ಅವಳನ್ನು ತನ್ನ ಪಾಲಿನ ಭಾಗ್ಯದೇವತೆಯೆಂದು ಭಾವಿಸಿದ್ದ.

 ತಾನು ಒಡ್ಡಿದ ಪ್ರಪೋಸಲ್ ನೆಗೆಟಿವ್ ಆದರೂ ಮನಸ್ವಿತಾಳ ಪರಿಶ್ರಮದ ಅರಿವಿದ್ದುದರಿಂದ ನಿಖಿಲ್ ಎಂಟರ್ಪ್ರೈಸಸ್ಗೆ ಅವಳ ಅಗತ್ಯವಿರುವುದನ್ನು ಒತ್ತಿ ಹೇಳಿದ್ದ. ಆದಾಗ್ಯೂ ಮನಸ್ವಿತಾಳೇನೊ ಹಿಮ್ಮೆಟ್ಟಿದತ್ತ ನಡೆದವಳಲ್ಲ. ನಿಸ್ವಾರ್ಥದಿಂದ ನಿಖಿಲ್ ಎಂಟರ್ಪ್ರೈಸಸ್ಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಸೇವೆ ಮಾಡುತ್ತಿರುವುದು ಅವನಿಗೂ ಸಂತೃಪ್ತಿಯೇ. ಒಂದು ರೀತಿಯಲ್ಲಿ ಸ್ವಾಭಿಮಾನದ ದಿಟ್ಟ ಹೆಣ್ಣು ಅನ್ನುವುದನ್ನು ಮನಸ್ಸಿನಲ್ಲಿಯೇ ಹೇಳಿಕೊಂಡು ಅವಳತ್ತ ಮೆಚ್ಚುಗೆ ಸೂಚಿಸಿದ್ದ. ಕೆಲವೊಂದು ಬಾರಿ ಮನಸ್ಸು ಮೀರಿ ಅವಳ ಬಗ್ಗೆ ಅಭಿಮಾನದಿಂದ ತಾಯಿಯ ಬಳಿ ಹೇಳಿಕೊಂಡಿದ್ದ.

ವಾಣಿಶ್ರೀಯವರಾದರೂ ಮನಸ್ವಿತಳಾನ್ನು ನಿರಾಕರಿಸುವವರಲ್ಲ. ಆದರೆ ಅವಳಾಗಿಯೇ ನಿಖಿಲ್ನ ಆಸ್ತಿ ಪಾಸ್ತಿಯನ್ನು ಕಂಡು ಮೇಲೆ ಬಿದ್ದು ಅವನ ಮನಸ್ಸನ್ನು ಗೆದ್ದಳೇನೋ ಎಂದು ಮಿಸುಕಾಡಿದ್ದರು. ಅವಳನ್ನು ಪ್ರತ್ಯಕ್ಷವಾಗಿ ಕಂಡ ಮೇಲೆ ಸ್ವಾಭಿಮಾನದ ಹೆಣ್ಣೆ ಅನಿಸಿತ್ತು. ಮನೆಯವರೆಗೂ ಬಂದು ಒಂದು ಹನಿ ನೀರು ಕುಡಿಯದೆ ಹಾಗೆ ಹೊರಟವಳದ್ದು ಧಿಮಾಕು ಎಂದೆನಿಸಿದರೂ ಅವಳು ನಡೆದುಕೊಂಡಿರುವುದು ಸರಿಯೆ ಎಂದುಕೊಂಡಿದ್ದರು. ಪದೇ ಪದೇ ನಿಖಿಲ್ನ ಬಾಯಿಂದ ಅವಳ ಹೆಸರು ಬರುವಾಗಲಂತೂ ಅವನೆಲ್ಲಿ ಅಂಕೆ ಮೀರಿ ಸೋಲುವನೊ ಅನಿಸಿದ್ದಿದೆ.

ಇದೇ ವಿಷಯವನ್ನು ಗಂಡ ಇಂದ್ರಸೇನರ ಬಳಿ ಪ್ರಸ್ತಾಪಿಸಿದ್ದರು ಕೂಡ. ಇಂದ್ರಸೇನರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವವರಲ್ಲ. ಮಡದಿಯನ್ನು ಸಾಂತ್ವನಿಸುವಂತೆ, 'ಇದು ನಮ್ಮ ಕಾಲ ಅಲ್ಲ. ಕಂಪ್ಯೂಟರ್ ಯುಗ. ಅವನಿಗೆ ಜವಾಬ್ದಾರಿಯಿದೆ. ದಾರಿ ತಪ್ಪುವ ಹುಡುಗನೂ ಅಲ್ಲ. ಅದಲ್ಲದೆ ಆ ಹುಡುಗಿ ನಿಖಿಲ್ಗೋಸ್ಕರವಲ್ಲವಾದರೂ ನಿಖಿಲ್ ಎಂಟರ್ಪ್ರೈಸಸ್ಗೋಸ್ಕರ ದುಡಿಯುತ್ತಿದ್ದಾಳೆನ್ನುವುದನ್ನು ಮರೆಯದಿರು. ಅವಳಲ್ಲಿ ಅಂತಹ ಸ್ವಾರ್ಥವಿರುತ್ತಿದ್ದರೆ ನಿಖಿಲ್ ಇಷ್ಟರವರೆಗೆ ತಲೆ ಕೆಡಿಸಿಕೊಂಡು ಬಿಡುತ್ತಿದ್ದ' ಅಂದರು.

'ನೀವು ಯಾವತ್ತಿದ್ದರೂ ಮಗನನ್ನು ಎತ್ತಿ ಆಡೋರು. ಅವನಿಗೊ ಬದುಕುವ ಬಗ್ಗೆ ಗೊತ್ತಿಲ್ಲ. ಹಾಗಿರುವಾಗ ದಾರಿ ತಪ್ಪದ ಹಾಗೆ ನೋಡೋದು ನಮ್ಮ ಕರ್ತವ್ಯ' ಮಗನ ಬಗ್ಗೆ ವಿಶೇಷ ಕಾಳಜಿಯಿಂದ ನುಡಿದಾಗ ಇಂದ್ರಸೇನರು ಗಹಗಹಿಸಿ ನಕ್ಕರು. ವಾಣಿಶ್ರೀಯವರು ಆತಂಕದಿಂದೆಂಬಂತೆ ಗಂಡನತ್ತ ನೋಡಿದರು. ಅವರ ಆತಂಕ ಕಂಡವರೇ ನಗು ನಿಲ್ಲಿಸಿ ಕಣ್ಣಲಿಳಿದ ನೀರನ್ನು ಒರೆಸಿಕೊಂಡು, 'ನಿಖಿಲ್ನ ನೀನಿನ್ನು ಎಳೆ ಕೂಸು ಅಂದುಕೊಂಡಿದ್ದೀಯಾ. ನಿಖಿಲ್ ಎಂಟರ್ಪ್ರೈಸಸನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದವನಿಗೆ ಬದುಕಿನ ಬಗ್ಗೆ ಇನ್ನೂ ಗೊತ್ತಿಲ್ಲವೆಂದ್ರೆ ನಿನ್ನ  ಮಾತು ಎಷ್ಟೊಂದು ಬಾಲಿಶ ಅನ್ಸುತ್ತೆ' ಮಡದಿಯನ್ನು ನೋಡುತ್ತಾ ಉತ್ತರಿಸಿದರು.

ವಾಣಿಶ್ರೀಯವರು ಸೋಲು ಒಪ್ಪಿಕೊಳ್ಳದ ಹೆಣ್ಣು. ವಾಸ್ತವದ ಅರಿವಿದ್ದರೂ ಸಮಾಜದಲ್ಲಿ ನಡೆಯುವ ಅದೆಷ್ಟೊ ವಿದ್ಯಮಾನಗಳನ್ನು ಬಲ್ಲವರು. ಕೇವಲ ನಾಲ್ಕು ಗೋಡೆಗಳ ನಡುವೆ ಬದುಕು ಸವೆಸಿದವರಲ್ಲ. ಗಂಡನ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿ ಬದುಕಿದವರು. ಹಾಗಾಗಿ ಗಂಡು ಹೆಣ್ಣಿನ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಂಡವರು ಮಗನ ಬದುಕು ಸುಗಮವಾಗಲೆಂದು ಅತೀವ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ಗಂಡನಿಗೆ ತಿರುಗೇಟು ಎಂಬಂತೆ ಮಾತನಾಡಿದರು.

'ನೀವು ವ್ಯವಹಾರ ಮತ್ತು ಬದುಕನ್ನು ತಾಳೆ ಹಾಕ್ಬೇಡಿ. ವ್ಯವಹಾರದಲ್ಲಿ ಚುರುಕಾದವರು ಬದುಕಿನಲ್ಲಿ ಸೋತಿರುವವರೆ ಹೆಚ್ಚು. ಹಾಗಾಗಿ ನಿಖಿಲ್ನ ಮನಸ್ಸನ್ನು ಅರಿಯುವ ಹುಡುಗಿ ಅವರ ಬದುಕನ್ನು ಪ್ರವೇಶಿಸುವುದು ಅನಿವಾರ್ಯವಲ್ಲವೆ? ಆ ದೃಷ್ಟಿಯಿಂದ ಅವನ ಬಗ್ಗೆ ಜಾಗ್ರತೆ ವಹಿಸಬೇಕಾದವರು ನಾವು. ಅದಕ್ಕಾಗಿ ಹೇಳಿದೆ ಹೊರತು ಬೇರೆನಕ್ಕೂ ಅಲ್ಲ'
'ಹೌದು, ನೀನು ಹೇಳುವುದು ಸರಿಯೆ. ಆದರೆ ನಮ್ಮ ನಿಖಿಲ್ ಹೃದಯವಂತ. ಅವನಿಗೂ ಕನಸುಗಳಿಲ್ಲವೆ? ಬರೀ ವ್ಯವಹಾರದಲ್ಲಿಯೇ ಮುಳುಗುತ್ತಾನೆನ್ನುವುದು ತಪ್ಪು ಕಲ್ಪನೆ. ಅವನು ಮನಸ್ವಿತಾಳ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಅವಳ ಬಗ್ಗೆ ತಿಳಿಯದೆನಲ್ಲ.

ನಾವು ಸ್ವಲ್ಪ ಆಲೋಚನೆ ಮಾಡೋಣ. ಆ ಹುಡುಗಿ ನಮ್ಮ ಮನೆಗೆ ಬಂದಾಗ ನಾವು ಅವಳನ್ನು ನೋಡಿ ಮೆಚ್ಚಿಕೊಂಡಿದ್ದೀವಲ್ಲ. ಅವಳ ಆ ಅಪಿಯರನ್ಸೇ ನಮ್ಮನ್ನ ಗೊಂದಲಕ್ಕೆ ತಳ್ಳಿ ನಾಳೆ ಇವಳು ನಿಖಿಲ್ನನ್ನು ಬುಟ್ಟಿಗೆ ಹಾಕಿಕೊಂಡರೆ ಏನಾಗುತ್ತದೆ ಅಂತ ಆತಂಕಗೊಂಡಿದ್ದೇವೆ. ಹಾಗಿದ್ದಾಗ ನಿಖಿಲ್ ಅವಳನ್ನು ಮೆಚ್ಚಿಕೊಂಡಿದ್ದರಲ್ಲಿ ತಪ್ಪಲ್ಲ. ಅಲ್ವಾ?'
ಗಂಡನ ಮಾತನ್ನು ಅನುಮೋದಿಸುವಂತೆ ಕಂಡರೂ ಅವರಿಗೆ ನಿಖಿಲ್ ಸತಾ ಸುಮ್ಮನೆ ಮನಸ್ವಿತಾಳ ಪ್ರೇಮ ಪಾಶಕ್ಕೆ ಬೀಳುವುದನ್ನು ಬಯಸರು. ಅವನಿಗೆ ತಾವಾಗಿಯೇ ಒಂದು ಸುಂದರ, ಲಕ್ಷಣವಾದ ಹುಡುಗಿಯನ್ನು ಹುಡುಕಿ ಮದುವೆ ಮಾಡಿಸಬೇಕೆನ್ನುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು.

ಮನಸ್ವಿತಾ ಎಷ್ಟೇ ಧೃಢ ನಿರ್ಧಾರ ತೆಗೆದುಕೊಂಡರೂ ಕೆಲವೊಮ್ಮೆ ಎಲ್ಲಿ ತಾನು ನಿಖಿಲ್ನ ಪ್ರೀತಿಗೆ ಕರಗಿ ಬಿಡುವೆನೊ ಅನಿಸುತ್ತಿತ್ತು. ಆದರೆ ಅರವಿಂದ ಅವಳ ಹೃದಯದಲ್ಲಿ ಗಟ್ಟಿ ನೆಲೆ ನಿಂತಿದ್ದ. ಮೊದ ಮೊದಲು ಅವಳಿಗೆ ಅರವಿಂದನ ಮೇಲಿದ್ದ ಭಾವನೆಯನ್ನು ಬುಡಮೇಲು ಮಾಡುವಂತೆ ಅವನ ಕೆಲವೊಂದು ವೈಯಕ್ತಿಕ ವಿಚಾರಗಳು ತಿಳಿಯಿತು. ಆ ವಿಷಯಗಳು ಯಾವುದನ್ನೂ ಆತ ನೇರವಾಗಿ ಮೇಲ್ನಲ್ಲಿ ಹೇಳಿಕೊಂಡಿರಲಿಲ್ಲವಾದರೂ ಹ್ಯಾಕಿಂಗ್ನಿಂದ ಕಲೆ ಹಾಕಿದ್ದಳು. ಆನಂತರದ ಅವಳ ಭಾವನೆಗಳು ಬಣ್ಣ ಪಡೆದುಕೊಂಡಂತೆ ಅರವಿಂದನೆನ್ನುವ ಅನೂಹ್ಯ ವ್ಯಕ್ತಿಯನ್ನು ಹೃದಯದ ಹತ್ತಿರಕ್ಕೆ ಕರೆಸಿಕೊಂಡಿತ್ತು. ಎಲ್ಲಾ ವಿಚಾರಧಾರೆಗಳನ್ನು ಬದಿಗೊತ್ತಿ ಅವನ ಧ್ಯಾನದಲ್ಲಿ ಹುಚ್ಚು ಕುದುರೆಯಂತಾದ ಮನಸಿಗೆ ಕಡಿವಾಣ ಹಾಕಿಕೊಂಡು ಅವನ ಸಂಪೂರ್ಣ ಹಿನ್ನಲೆ ತಿಳಿಯದೆ ಯಾವುದೇ ನಿರ್ಧಾರಕ್ಕೆ ಬರಬಾರದೆನ್ನುವುದನ್ನು ಧೃಡಪಡಿಸಿಕೊಂಡಳು.

ಕೆಲವೊಂದು ಬಾರಿ ಅಶುತೋಶ್ನ ತುಂಟಾಟಗಳು ಅವಳನ್ನು ಎಚ್ಚರಿಸುವುದಿತ್ತು. ಆತನ ಸಾನಿಧ್ಯ ಅಪ್ಯಾಯಮಾನವಾಗಿ ಕಾಣುತ್ತಿದ್ದರು ಅರವಿಂದನ ಹುಡುಕಾಟದಲ್ಲಿದ್ದ ಅವಳಿಗೆ ಅನುಮಾನ ಸುಳಿದು ಅಶುತೋಶ್ ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು. ಆದರೆ ಅವನ ತ್ಯಾಗಜೀವನವನ್ನು ಅರಿತುಕೊಂಡ ಮೇಲೆ ಹೆಚ್ಚು ಹೆಚ್ಚು ಅವನ ಬಗ್ಗೆ ಚಿಂತಿಸಿದಳು. ಆದರೆ ಅರವಿಂದನೆ ಬೇರೆ. ಅಶುತೋಶ್ನೇ ಬೇರೆಯೆನ್ನುವುದು ಅರಿವಾಗುತ್ತಲೇ ಅಶುತೋಶ್ನ ಬಗ್ಗೆ ಗೌರವವನ್ನು ಉಳಿಸಿಕೊಳ್ಳುವುದಕ್ಕಾಗಿ ಕೇವಲ ಗೆಳಯನೆಂದು ಒಪ್ಪಿಕೊಂಡಳು. ಆ ಗೆಳೆತನ ಮುಂದೊಂದು ದಿನ ತಾನು ಹುಡುಕುತ್ತಿರುವ ಅರವಿಂದನ ಹುಡುಕಾಟಕ್ಕೆ ಸಹಾಯವಾಗಬಹುದೆನ್ನುವ ದೂರಾಲೋಚನೆಯೂ ಅವಳಲ್ಲಿತ್ತು.

ಬರಬರುತ್ತಾ ಅರವಿಂದನ ವಿಷಯಗಳು ಸುಲಭದಲ್ಲಿಯೇ ದೊರಕುತ್ತಲೇ ಯಾರ ಸಹಾಯವೂ ಇಲ್ಲದೆ ಅವನನ್ನು ಕಂಡು ಹುಡುಕಬಲ್ಲೆನೆನ್ನುವ ಧೈರ್ಯ ಮೂಡಿತು. ಹಾಗಾಗಿ ಮನಸ್ಸು ನಿರಾಳವೆನಿಸಿತ್ತು. ಆದರೆ ಹಳೆಯ ಸಂಬಂಧಗಳು ಸುತ್ತಿಕೊಳ್ಳುವುದನ್ನು ಅವಳು ಇಷ್ಟಪಡಲಾರಳು. ತನ್ನದೇ ಸಂದಿಗ್ಧ ಪರಿಸ್ಥಿತಿಯಿರುವಾಗ ಸಂಬಂಧಗಳು ಅಮರಿಕೊಂಡು ಬದುಕು ಕಗ್ಗಾಂಟಾಗುವುದನ್ನು ನಿರಾಕರಿಸುವುದಕ್ಕೆನೆ ಅವಳು ನವೀನರಾಯರ ಕುಟುಂಬದ ಜೊತೆಗೆ ಅಷ್ಟೊಂದು ಆಸ್ಥೆಯಿಂದ ವ್ಯವಹರಿಸದೆ ಮೌನವಾಗಿದ್ದಳು.

ಆ ಅಧ್ಯಾಯ ಅಲ್ಲಿಗೆ ಮುಗಿಯುತ್ತದೆಯಂದುಕೊಂಡರೆ ಮನಸ್ವಿತಾಳ ಅಪ್ಪಯ್ಯ ಶ್ರೀನಿವಾಸರಾಯರು ಅವಳನ್ನು ನೇರವಾಗಿ ಪ್ರಶ್ನಿಸಿದರು. 'ಅಷ್ಟು ದೂರದಿಂದ ಬಂದಿದ್ದಾರೆ. ಸಂಬಂಧಿಕರು ಬೇರೆ. ನೀನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದೆಯಲ್ಲ ಅವರೆಷ್ಟು ನೊಂದುಕೊಂಡಿದ್ದಾರೆ ಅನ್ನೋದು ಗೊತ್ತಾ?' ಅವರ ಮಾತು ದರ್ಪದಿಂದಲೇ ಇರುತ್ತಿದ್ದುದರಿಂದ ಅವಳಿಗೇನೂ ಅನಿಸಲಿಲ್ಲ. ಆದರೆ ಆ ಸಂದರ್ಭ ಮಾತ್ರ ಸರಿಯಾಗಿರಲಿಲ್ಲವಾಗಿ ಅವಳು ಬಿಟ್ಟು ಕೊಡಲಿಲ್ಲ.

`ಇಷ್ಟು ದಿನ ಇಲ್ಲದ ಸಂಬಂಧವನ್ನು ಹುಡುಕಿಕೊಂಡು ಕರೆ ತಂದಿದ್ದೀರಲ್ಲಾ. ಮೊದಲು ಮಗಳ ಜೊತೆಗಿನ ಸಂಬಂಧ ಏನೂಂತ ತಿಳ್ಕೊಳ್ಳಿ. ಆಮೇಲೆ ಹೊರಗಿನ ಸಂಬಂಧ' ಮಗಳ ಮಾತು ಶ್ರೀನಿವಾಸರಾಯರ ಮುಖಕ್ಕೆ ತಟ್ಟಂತ ಹೊಡೆದಂತಾಯಿತು.
'ಪಾಲಕರಾದ ನಾವು ನಿನ್ನ ಬಗ್ಗೆ ಏನು ಕರ್ತವ್ಯ ಮಾಡ್ಬೇಕೊ ಅದನ್ನು ಮಾಡಿದ್ದೀವಿ. ಈಗ ನೀನು ಸ್ವತಂತ್ರವಾಗಿರುವುದನ್ನು ಬಯಸ್ತಿದ್ದೀಯಾ. ನಿನ್ನನ್ನು ನಾವೇನು ತಡೆದಿದ್ದೇವಾ? ಇಲ್ಲಿ ನೀನೇ ಏನೇನೊ ಕಲ್ಪಸಿಕೊಂಡು ನಮ್ಮನ್ನ ಕಡೆಗಣಿಸ್ತಿದ್ದಿ ಅನ್ನೋದು ಗೊತ್ತು. ನೋಡೆ, ನೀನು ಏನು ಬೇಕಾದರೂ ಅನ್ನು.

 ನಮ್ಮ ಮನಸ್ಸಿನ ವಿರುದ್ಧ ನಾವು ನಡ್ಕೊಳ್ಳೊದಿಲ್ಲ. ಈಗ ಹೇಳು ಆ ಹುಡುಗಿಗೆ ನಿನ್ನ ಕೈಯಿಂದ ಸಹಾಯ ಮಾಡುವುದಕ್ಕೆ ಸಾಧ್ಯನಾ?' ಎಂದು ನಯನಾಳ ಬಗ್ಗೆ ಪ್ರಶ್ನಿಸಿದರು. ಮನಸ್ವಿತಾ ತಕ್ಷಣವೇ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಶ್ರೀನಿವಾಸರಾಯರು ಕೂಡ ಅಲ್ಲಿಂದ ಕದಲಿಲ್ಲ. ನವೀನರಾಯರ ಸಂಸಾರ ಹೊರಡುವ ಸೂಚನೆಯಲ್ಲಿತ್ತು. ಶ್ರೀನಿವಾಸರಾಯರು ತಕ್ಷಣ ಎಚ್ಚೆತ್ತುಕೊಂಡವರಂತೆ, 'ನೋಡು ನೀನು ಆಗುತ್ತೊ ಇಲ್ಲವೊ ಹೇಳಿಬಿಡು' ಕೊನೆಯದಾಗೆಂಬಂತೆ ಹೇಳಲು ಮನಸ್ವಿತಾ ಮೌನವಾಗಿಯೇ ಅಲ್ಲಿಂದ ಕದಲಿದಳು. ಶ್ರೀನಿವಾಸರಾಯರಿಗೆ ಮಗಳ ವರ್ತನೆ ಉದ್ದಟತನದಂತೆ ತೋರಿತು. ಉಗುಳು ನುಂಗಿಕೊಂಡು ಆಚೆಗೆ ನಡೆದರು.

ನವೀನರಾಯರು ಶ್ರೀನಿವಾಸರಾಯರನ್ನ ಹುಡುಕಿಕೊಂಡು ಬಂದಾಗ ಅವರ ಮುಖ ಸಪ್ಪಗಾಗಿದುದ್ದನ್ನು ತಿಳಿದರು.
'ರಾಯರೆ ನಾವಿನ್ನು ಬರ್ತೀವಿ. ನೋಡಿ, ಸಂಬಂಧಗಳು ಉಳಿಯಲಿ ಅನ್ನೋದು ನಮ್ಮ ಆಸೆ. ಆದ್ರೆ ಅದೆಲ್ಲ ದೈವೇಚ್ಛೇಂತ ಈಗ ಅನಿಸ್ತಿದೆ. ನಿಮ್ಮ ಮಗಳು ಕೂಡ ಏನೂ ಹೇಳ್ತಾ ಇಲ್ಲ. ಬಿಡಿ, ನೋಡೋಣ ನಮ್ಮ ಮಗಳಿಗೆ ಎಲ್ಲಾದ್ರೂ ಒಂದು ಕೆಲ್ಸ ಸಿಗದೆ ಇರಲಾರದು' ನೋವಿನಿಂದ ನುಡಿದವರು. ಶ್ರೀನಿವಾಸರಾಯರಿಗೆ ಬೇಸರವೆನಿಸಿತು.

'ನೀವು ಬೇಸರಿಸಬೇಡಿ. ನಮ್ಮ ಪ್ರಯತ್ನ ನಾವು ಮಾಡೋಣ. ಅವಳು ಏನಾದರೊಂದು ಸಹಾಯ ಮಾಡಬಹುದು. ಅವಳು ಮಾಡುದಿಲ್ಲವೆಂದಾದರೆ ನಾನೇ ಖುದ್ದಾಗಿ ಅವಳ ಆಫೀಸಿಗೆ ಹೋಗ್ಬಿಟ್ಟು ನಿಮ್ಮ ಮಗಳ ಅಪ್ಲಿಕೇಶನ್ ಕೊಟ್ಟು ಬರುತ್ತೇನೆ. ನೀವೇನು ಚಿಂತಿಸಬೇಡಿ. ಸಂಬಂಧಗಳು ಉಳಿಯಬೇಕು ಅನ್ನೋದು ಕೂಡ ನನ್ನ ಆಶಯವೇ. ಸಂದರ್ಭ ಕೂಡಿ ಬರಲಿ' ಸಮಾಧಾನಿಸುವಂತೆ ಹೇಳಿದರಾದರೂ ಸದ್ಯದ ಪರಿಸ್ಥಿತಿಯಲ್ಲಿ ಸಂಬಂಧ ಮುರಿಯುವ ಸಾಧ್ಯತೆಯೇ ಹೆಚ್ಚಾಗಿರುವಂತೆ ಭಾಸವಾಗುತ್ತಿತ್ತು.

ಹೊರಟವರನ್ನು ಬೀಳ್ಕೊಡಲು ಭಾಮಿಯವರು ಕೂಡ ಗಂಡನ ಜೊತೆಗೆ ಬಸ್ಸು ನಿಲ್ದಾಣದವರೆಗೂ ನಡೆದರು. ನವೀನರಾಯರಾಗಲಿ, ರಮಣಿಯಾಗಲಿ ಅಥವಾ ಅವರ ಮುದ್ದಿನ ಮಗಳು ನಯನಾಳಾಗಲಿ ಮನಸ್ವಿತಾಳನ್ನು ಮಾತನಾಡಿಸುವ ಗೋಜಿಗೆ ಹೋಗದೆ ತಮ್ಮಷ್ಟಕ್ಕೆ ತಾವು ಎದ್ದು ಹೋದರು.

ಅವರುಗಳು ಹೋದ ಮೇಲೆಯೇ ಮನಸ್ವಿತಾಳಿಗೆ ನಿರಾಳವಾಗಿ ಉಸಿರಾಡುವಂತಾಯಿತು. ತನ್ನ ವರ್ತನೆಯ ಬಗ್ಗೆ ಅವಳಿಗೆ ಕೆಲವೊಮ್ಮೆ ಬೇಸರವಾಗುವುದುಂಟು. ಆದರೆ ಅದನ್ನು ನಿಗ್ರಹಿಸಿಕೊಳ್ಳುವ ಯಾವ ದಾರಿಯೂ ಕಾಣುತ್ತಿರಲಿಲ್ಲವಾಗಿ ಮನದಲ್ಲಿಯೇ ಬೇಯುತ್ತಿದ್ದಳು. ಆ ಬೇನೆ ಯಾವತ್ತು ಮಾಯವಾಗುವಂತದಲ್ಲವೆನ್ನುವ ಸ್ಪಷ್ಟ ನಿಲುವು ಅವಳದ್ದು.
ಅವಳೇನೊ ವಯೋ ಸಹಜವಾದ ಬಯಕೆಗಳನ್ನು ಕಟ್ಟಿಕೊಂಡು ಸುಗಮದಾರಿಗೆ ಕಾಯುತ್ತಿದ್ದರೆ ಕಲಿಸದೆ ಬಿಟ್ಟಿದ್ದೆ ಮುಳ್ಳಾಗಿ ಅವಳ ಎದೆಯಲ್ಲಿ ಕಂತಿತ್ತು.

 ಆ ನೋವು ಮಾಗಲು ಪವಾಡವೇ ನಡೆಯಬೇಕೇನೊ. ಹೆತ್ತವರನ್ನೇ ಕಡೆಗಣಿಸುವಷ್ಟು ಆ ನೋವಿನ ದಳ್ಳುರಿ ಅವಳನ್ನು ಕುಯ್ಯುತ್ತಿತ್ತು. ಆದರೆ ಅವರು ಅಪರಾಧಿಗಳೆನ್ನುವಂತೆ ನಡೆದುಕೊಳ್ಳುತ್ತಿರುವುದು ಕೂಡ ತಾನು 'ಏಕಾಂಗಿ' ಯೆಂಬ ಧೋರಣೆಯನ್ನು ತಾಳುತ್ತಲೇ ಅನ್ನುವುದು ಅವಳಿಗೆ ಸ್ಪಷ್ಟವಾಗುತ್ತಿತ್ತು. ಅದಕ್ಕೆ ಪರಿಹಾರ ಅಷ್ಟು ಸುಲಭವಲ್ಲವೆಂದು ತಿಳಿಯುತ್ತಿದ್ದವಳಿಗೆ ಚೇತರಿಕೆಯಂತೆ ಎದುರಾದುದು ಅನಾಮಿಕನಾಗಿ ತನ್ನ ಬಗ್ಗೆ ಕಾಳಜಿ ವಹಿಸಿಕೊಂಡಂತೆ ಮೇಲ್ ಕಳುಹಿಸುತ್ತಿದ್ದ ಅರವಿಂದ.

ಅರವಿಂದ ಯಾವತ್ತೂ ಬದುಕಿನಿಂದ ದೂರವಾಗಲಾರ. ಆ ಭಾವನೆ ಉದಯಸಿದ್ದೆ ಅವನ ಬಗ್ಗೆ ತಿಳಿದುಕೊಂಡ ಬಳಿಕವೆ. ಅಲ್ಲಿಯವರೆಗೂ ಅವನನ್ನು ಪತ್ತೆ ಹಚ್ಚಿ ಸರಿಯಾದ ಶಾಸ್ತಿ ಮಾಡಿಬೇಕೆಂದುಕೊಂಡವಳು ಬಣ್ಣ ಬದಲಾಯಿಸಿಕೊಂಡದ್ದು ಮಾತ್ರ ಸೋಜಿಗದ ವಿಷಯವಲ್ಲ. ಕೇವಲ ಮಾನವೀಯತೆಯ ನೆಲೆಯಲ್ಲಿಯಾದರೂ ಅವನ ಬಗ್ಗೆ ತಿಳಿದುಕೊಂಡಿದಲ್ಲಿ ಅದು ಪರಿಪೂರ್ಣವೂ ಅಲ್ಲವೆನ್ನುವುದು ಅವಳಿಗೆ ತಿಳಿದದ್ದೆ.

ಇನ್ನು ನೂತನ ವಿಷಯಗಳನ್ನು ತಿಳಿಯದ ಕುತೂಹಲವಿರುವಂತದ್ದು ಕೇವಲ ದ್ವೇಷ ಸಾಧನೆಗೆ ಅಲ್ಲ. ಬದಲಾಗಿ ಬದುಕಿನಲ್ಲಿ ತಂಗಾಳಿಯಾಗಿ ಬೀಸಿ ಬರುತ್ತಿದೆಯೆಂದು ಮೈಯೊಡ್ಡಿಕೊಳ್ಳಬೇಕೆನ್ನುವ ಹಂಬಲದಿಂದ ಮಾತ್ರ. ನೆನಪು ಅರವಿಂದನೆಡೆಗೆ ಜಾರುತ್ತಿದ್ದಂತೆಯೆ ಅವಳ ತಂದೆ ಶ್ರೀನಿವಾಸರಾಯರು ಎದುರು ಬಂದು ನಿಂತಿದ್ದರು. ಆ ಕ್ಷಣ ಒಂದು ಅಪರಾಧಿ ಭಾವನೆ ಅವಳನ್ನು ಮುಖ ಕೆಳಗೆ ಹಾಕುವಂತೆ ಮಾಡಿತು. ಆ ಕ್ಷಣ ಅವಳು ತಂದೆಯ ಮುಖವನ್ನು ನೋಡುತ್ತಿದ್ದರೆ ವಿಚಲಿತಳಾಗಿ ಬಿಡುತ್ತಿದ್ದಳೊ ಏನೊ? ಅಂತಹ ಕ್ರೂರತೆ ಅವರ ಕಣ್ಣುಗಳಲ್ಲಿತ್ತು. ಹುಡುಕಿಕೊಂಡು ಬಂದ ಸಂಬಂಧವನ್ನು ಮಗಳು ಕ್ಷಣಿಕವೆನ್ನುವಂತೆ ನಿರಾಕರಿಸಿಬಿಟ್ಟಳೆನ್ನುವುದೇ ಅದರ ಹಿಂದಿದ್ದ ವಿಷಯ.

'ನೀನು ಅವಮಾನ ಮಾಡಿಟ್ಟೆ' ತಂದೆಯ ಮಾತು ಕೇಳಿ ತಲೆಯೆತ್ತಿದಳು. 'ಅವಮಾನ' ಪದ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ತಾನು ಇಷ್ಟೊಂದು ಕಷ್ಟಪಟ್ಟು ಗಳಿಸಿಕೊಂಡ ಸ್ಥಾನಮಾನದೆದುರು ಯಾವುದು ಅವಮಾನವೆಂದು ಕಾಡಿತು.
'ನೀವು ಅಂದುಕೊಂಡಿದ್ದೀರಷ್ಟೆ. ನನ್ನ ಪ್ರಯತ್ನ, ನನ್ನ ಸಾಧನೆ, ಹೆತ್ತವರಾದ ನಿಮಗೆ ಬೇಕಿಲ್ಲವೆಂದ ಮೇಲೆ ಉಳಿದ ಸಂಬಂಧಗಳು ನನಗ್ಯಾಕೆ?' ಮಗಳ ಮಾತಿಗೆ ಚಿಂತಿತರಾದರು.

 ಯಾವತ್ತೂ ಮಗಳನ್ನು ಪ್ರೀತಿಯಿಂದ ಮಾತನಾಡಿಸದವರು ಧುತ್ತನೆ ಆ ಟೋನ್ಗೆ ಇಳಿಯುವುದನ್ನು 'ಅಹಂ' ಬಿಟ್ಟು ಕೊಡಲಿಲ್ಲ. ಮಗಳ ಮಾತು ಸತ್ಯವೇನೊ ಅನಿಸಿತು.
'ಇನ್ನ ಬಾಳಿ ಬದುಕಬೇಕಾದವಳು ನೀನು. ನಿನ್ನ ಒಳ್ಳೆಯದಕ್ಕೆ ನಾವು ಮಾಡ್ತಾ ಇರೋದು' ಗಂಭೀರವಾಗಿತ್ತು ಅವರ ಮಾತು. ಒಣ ನಗೆಯೊಂದು ಅವಳು ತುಟಿಗಳಲ್ಲಿ ಇಣುಕಿತು.
'ನನ್ನ ಒಳ್ಳೆಯದಕ್ಕೆ ನೀವು ಮಾಡ್ತಾ ಇದ್ದಿದ್ದರೆ, ನೀವು ಇಷ್ಟರವರೆಗೆ ನನ್ನನ್ನು ಡಾಕ್ಟರ್ ಕಲಿಯುವುದಕ್ಕೆ ಅವಕಾಶ ಮಾಡಿ ಕೊಡ್ತಾ ಇದ್ರಿ. ಆದ್ರೆ ನನ್ನ ಆ ಕನಸು ಕನಸಾಗಿಯೇ ಉಳಿಯಿತು. ಈಗ ನನ್ನ ಕಾಲ ಮೇಲೆ ನಾನು ನಿಂತ್ಕೊಂಡಿದ್ದೇನೆ. ನೀವುಗಳು ಸುಧಾರಿಸೋದಿಲ್ಲ. ಆದ್ದರಿಂದ ನನಗೆ ಯಾರ ಹಂಗೂ ಬೇಡ ಅನಿಸ್ತಿದೆ'

ಶ್ರೀನಿವಾಸರಾಯರಿಗೆ ಮಗಳದ್ದು ಅತಿಯಾಯಿತೆನಿಸಿತು. ಆ ಸಮಯದಲ್ಲಿ ಕೈಯಲ್ಲಿ ಹಣವಿಲ್ಲವೆಂದಿರಲಿಲ್ಲ. ಆದರೆ ಹೆಣ್ಣು ಕಲಿತು ಏನಾಗಬೇಕೆನ್ನುವ ಅನಾಧಾರ ಅವರದ್ದಾಗಿತ್ತು. ಆನಾಧರವೇ ಮನಸ್ವಿತಾಳಲ್ಲಿ ಒಂದು ರೀತಿಯ ಕೀಳರಿಮೆಯನ್ನು ಬೆಳೆಸಿತ್ತು. ಆದರೆ ಅವಳ ಹಠದೆದುರು ಯಾವುದೂ ನಿಲ್ಲಲಿಲ್ಲವಾಗಿ ಅವಳು ಡಾಕ್ಟರ್ ಕಲಿಯಲಾಗದಿದ್ದರೂ ಉನ್ನತ ಹುದ್ದೆಯನ್ನು ಗಳಿಸಿಕೊಂಡಿದುದರ ಹಿಂದೆ ಬಹಳ ಶ್ರಮವಿತ್ತು.

'ನಿನಗೆ ಸುತ್ತಿ ಬಳಸಿ ಹೇಳಿ ಏನೂ ಸುಖವಿಲ್ಲ. ನೇರವಾಗಿ ಹೇಳ್ತೀನಿ. ಕೇಳು. ನವೀನರಾಯರು ನಿನ್ನ ಅಮ್ಮನ ಹತ್ತಿರದ ಸಂಬಂಧ. ಅವರ ಮಗನೊಬ್ಬ ಅಲ್ಲೇ ಊರಲ್ಲೇ ಮೇಷ್ಟ್ರು ಕೆಲಸ ಮಾಡಿಕೊಂಡಿದ್ದಾನೆ. ನಿನಗಿಂತ ಎರಡುವರೆ ವರ್ಷ ದೊಡ್ಡವನು. ನಿನ್ನ ಬಗ್ಗೆ ತಿಳಿದುಕೊಂಡು ಅವರು ಬಂದಿದ್ದಾರೆನ್ಸುತ್ತೆ. ನೀನು ಅವರನ್ನು ನಿರಾಕರಿಸುವುದರಲ್ಲಿ ಅರ್ಥವಿಲ್ಲ'
ಆವರೆಗೂ ಸಮಾಧಾನದಿಂದವಳ ಜ್ವಾಲೆ ಭುಗಿಲೆದ್ದಂತೆ ತಂದೆಯನ್ನು ದೃಷ್ಟಿಸಿದಳು. ಅವಳ ಕಣ್ಣಿಂದ ಜ್ವಾಲೆ ಅವರನ್ನು ಸುಟ್ಟು ಬಿಡುವಂತೆ.

'ನಿಮಗೆ ಇದೆಲ್ಲ ಅಧಿಕಪ್ರಸಂಗ ಏನಕ್ಕೆ? ನನ್ನ ವಿಷಯ ಬಿಟ್ಟು ಬಿಡಿ. ನಾನು ಮದುವೆಯಾಗುವುದಿಲ್ಲ. ನೀವು ಅಂತಹ ಪ್ರಯತ್ನ ಮಾಡುವುದು ಬೇಡ' ಖಡಾಖಂಡಿತವಾಗಿ ಹೇಳಿದವಳೇ ಕೋಣೆಯತ್ತ ಹೆಜ್ಜೆ ಹಾಕಿದಳು.
'ನೋಡು ನನ್ನ ಮಾತು ಕೇಳು. ಬರೋ ಸಂಬಂಧಗಳನ್ನು ತಳ್ಳಿ ಹಾಕಬೇಡ. ಮುಂದೆ ನೀನು ಅನುಭವಿಸ್ಬೇಕಾಗುತ್ತೆ. ನಾವೇನು ನಿನಗೆ ನಿನ್ನಷ್ಟಕ್ಕೆ ಬಿಟ್ಟು ಬಿಡಲು ಸಾಕ್ಲಿಲ್ಲ' ಅವರ ಮಾತು ಕೇಳಿ ತಕ್ಷಣ ನಿಂತಳು. ಅವರು ಕೋಪದಿಂದ ನಡುಗುತ್ತಿರುವಂತೆ ಕಂಡಿತು. ಕೋಪಿಷ್ಟನ ಮುಂದೆ ಮಾತನಾಡಿ ಏನು ಪ್ರಯೋಜನವಿಲ್ಲವೆನಿಸಿತು.

 ತಂದೆಯೆನ್ನುವ ಮಮಕಾರವನ್ನು ಯಾವೊತ್ತೊ ತೊರೆದವಳು ಮಾತನಾಡದೆಯೇ ಒಳಗೆ ನಡೆದಳು. ಶ್ರೀನಿವಾಸರಾಯರಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು. ತಾವೆಲ್ಲೊ ಎಡವಿದ್ದು ಈಗ ಬೆರಳುಗಳು ನೋಯ ತೊಡಗಿದಂತೆ ಭಾಸವಾಯಿತು. ಕಳೆದುಕೊಂಡ ಮಮತೆ ಮತ್ತೆ ಬರುವುದು ಅಸಾಧ್ಯವೆನಿಸಿತು. ಅವಳ ಇಚ್ಚೆಯಂತೆ ಕಲಿಸಲಿಲ್ಲವೆನ್ನುವುದೇ ಅವಳ ಈ ಹಠಕ್ಕೆ ಕಾರಣವೆ? ಚಿಂತಿತರಂತೆ ಅಲ್ಲಿಯೇ ಇದ್ದ ಕುಚರ್ಿಯಲ್ಲಿ ಕುಸಿದು ಕುಳಿತರು.
***
ಎಲ್ಲಾ ಜಂಜಡಗಳನ್ನು ದೂರ ಮಾಡಿ ಬಿಡುವಂತೆ ಅಫೀಸಿನ ಕ್ಯಾಬಿನ್ನಲ್ಲಿ ಕುಳಿತವಳಿಗೆ ಇಂಟರ್ ಕಾಂ ಮೊಳಗಿ ಎಚ್ಚರಿಸಿತು. ರಿಸೀವರ್ ಎತ್ತಿಕೊಂಡು 'ಹಲೋ' ಅಂದಳು. ಅತ್ತ ಕಡೆಯಿಂದ ನಿಖಿಲ್ ಮಾತನಾಡುತ್ತಿದ್ದ.
'ಮನಸ್ವಿತಾ, ತುಂಬ ಇಂಪಾರ್ಟ್ ಟೆಂಟ್ ಮ್ಯಾಟರ್ ಕೂಡ್ಲೆ ಬನ್ನಿ' ಪೋನ್ ಕಟ್ಟಾದರೂ ಅವಳ ಕೈಯಲ್ಲಿ ರಿಸೀವರ್ ಹಾಗೆ ಇತ್ತು. ಇತ್ತೀಚೆಗೆ ನಡೆಯುವ ಪ್ರತಿಯೊಂದು ಘಟನೆಗಳೂ ಅವಳನ್ನು ಘಾಸಿಗೊಳಿಸುವಂತೆ ಇದ್ದವು. ನಿಖಿಲ್ ಅಷ್ಟೊಂದು ಅರ್ಜೆಂ ಟಾಗಿ ಕರೆ ಮಾಡುವ ಸಂದರ್ಭವೇನೆನ್ನುವುದು ತಿಳಿಯಲಿಲ್ಲ. ತಕ್ಷಣವೇ ರಿಸೀವರ್ನ್ನು ಪೋನ್ಗೆ ಸೇರಿಸಿ ನಿಖಿಲ್ನ ಕೋಣೆಗೆ ನಡೆದಳು.

'ಬನ್ನಿ ಮನಸ್ವಿತಾ' ಕೂಲಾಗಿ ಕುಳಿತ್ತಿರುವಂತೆಯೇ ಇದ್ದವನು ಅವಳನ್ನು ಒಳಗೆ ಕರೆದು ಕುಳಿತುಕೊಳ್ಳಲು ಸೂಚಿಸಿದ. ಮನಸ್ವಿತಾ ಅವನ ಕಣ್ಣುಗಳನ್ನು ಓದುವಂತೆ ಕಂಡಳು. ಅವಳ ಆ ನೋಟಕ್ಕೆ ನಿಖಿಲ್ನ ತುಟಿಗಳಲ್ಲಿ ತೆಳು ನಗುವೊಂದು ಹರಡಿತು. ಆ ನಗುವನ್ನು ಕಂಡು ವಿಚಲಿತಳಾದಳು.

'ನಿಮ್ಮನ್ನು ಕರೆಸಿರುವುದು ಯಾಕೆ ಗೊತ್ತೆ?' ಅವನ ಪ್ರಶ್ನೆ ಹೃದಯದ ವೇಗವನ್ನು ಹೆಚ್ಚಿಸಿತು. ಮತ್ತೊಮ್ಮೆ ಪ್ರಪೋಸ್ ಮಾಡುತ್ತಿರುವನೆ? ಅನಿಸಿತು. ಅದನ್ನು ತೋರಿಸಿಕೊಳ್ಳದೆ, 'ನೊ ಸಾರ್' ಅಂದಳು. 'ಸಾರ್' ಪದ ಕೇಳುತ್ತಲೇ ಅವನ ತುಟಿಗಳಲ್ಲಿದ್ದ ನಗು ಮರೆಯಾಯಿತು. ಮುಖ ಗಂಭೀರವಾಯಿತು.

'ಸೀ ಆಲ್ ದೀಸ್ ಪೇಪರ್ಸ್. ಒಮ್ಮೆ ಎಲ್ಲಾ ನೋಡ್ಬಿಟ್ಟು ನನಗೆ ತಿಳಿಸಿ' ಕೆಲವೊಂದು ಪೇಪರ್ಗಳನ್ನು ಅವಳತ್ತ ಚಾಚಿದ. ಅವಳು ಸಮಾಧಾನದ ನಿಟ್ಟುಸಿರಿಟ್ಟು ಆ ಪೇಪರ್ಗಳನ್ನು ತೆಗೆದುಕೊಂಡು ಒಮ್ಮೆ ಕಣ್ಣಾಡಿಸಿದಾಗಲೆ ಓದಿಕೊಂಡಳು. ಒಟ್ಟಾಗಿ ಅದು ದೊಡ್ಡ ಮೊತ್ತದ ಆರ್ಡರ್ ಅನ್ನುವುದು ತಿಳಿಯಿತು.

'ಎಸ್ ಸಾರ್ ಅರ್ಥವಾಯಿತು. ನಮ್ಮ ಸ್ಟಾಕ್ಗಳನ್ನು ನೋಡ್ಬಿಟ್ಟು ಮತ್ತೆ ಎಷ್ಟು ಪ್ರೊಡಕ್ಷನ್ಗಳ ಅಗತ್ಯ ಅನ್ನೋದ ನೋಡ್ಬೇಕಲ್ಲವೆ?' ಹೇಳಿದಳು. ನಿಖಿಲ್ನ ಮುಖ ಆಶ್ಚರ್ಯ ಸೂಚಿಸಿತು. ಪೇಪರ್ಗಳಿಂದ ಮುಖ ಎತ್ತಿದವಳು ಅವನ ಮುಖಭಾವನೆಯನ್ನು ಕಂಡು ಮತ್ತೊಮ್ಮೆ ಪತ್ರಗಳತ್ತ ನೋಡಿದಳು.

'ಮನಸ್ವಿತಾ ಕೆಲವು ದಿವಸಗಳಿಂದ ನೋಡುತ್ತಿದ್ದೇನೆ. ನೀವೇನೊ ಬಹಳ ಗಹನವಾದ ವಿಷಯದಲ್ಲಿ ಮುಳುಗಿರುವಂತೆ ಕಾಣ್ತಾ ಇದೆ. ಅದೇನೊ ಹುಡುಕಾಟ ತಾಕಲಾಟ ನಿಮ್ಮ ಮುಖದಲ್ಲಿದೆ. ಇಡೀ ದಿನ ಕಂಪ್ಯೂಟರ್ ಇಂಟರ್ನೆಟ್ಗಳಲ್ಲಿ ಹ್ಯಾಕ್ ಆಗಿತರ್ಿರಿ ಅನ್ಸುತ್ತೆ. ಎನೀ ಪ್ರಾಬ್ಲಂ?' ಪೇಪರ್ಗಳನ್ನು ನೋಡುತ್ತಿದ್ದ ಕಣ್ಣು ಅವನತ್ತ ದೃಷ್ಟಿಸಿದಳು.
'ನೊ ನೊ, ಹಾಗೇನಿಲ್ಲ' ಅಂದಳು.

'ಮತ್ತ್ಯಾಕೆ ನಿಮಗೆ ಕಾನ್ಸಂಟ್ರೇಷನ್ ಇಲ್ಲ? ಆ ಪತ್ರಗಳು ನಮಗೆ ಬಂದಿರೋ ಆರ್ಡರ್ಗಳಲ್ಲ. ಅವು ಆದಿತ್ಯ ಗ್ರೂಪ್ ನಮ್ಮ ಡ್ರೈ ಫ್ರುಟ್ಸ್ ವಿಭಾಗವನ್ನು ಖರೀದಿಸುವುದಕ್ಕೆ ತೋರಿಸಿರೋ ಆತ್ಮೀಯ ಪತ್ರವಲ್ಲವೆ. ಇದರ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮನ್ನು ಅವಲಂಬಿಸಿದೆ. ಯು ಹ್ಯಾವ್ ಟು ಟೇಕ್ ದ ಡಿಸಿಶನ್' ದೊಡ್ಡ ಹೊರೆಯೊಂದನ್ನ ತಲೆಯ ಮೇಲೆ ಹಾಕಿದಂತೆ ಅವನನ್ನು ದಿಟ್ಟಿಸಿದಳು. ಅವನು ಕಣ್ಣುಗಳಲ್ಲಿಯೇ 'ಹೌದು' ಅಂದ.

ಪತ್ರವನ್ನು ಪೂರ್ತಿಯಾಗಿ ಓದಿದವಳಿಗೆ ಆ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯವೆನಿಸಿತು. ಡ್ರೈಫ್ರುಟ್ ವಿಭಾಗವನ್ನು ತೆರೆಯುವುದಕ್ಕೋಸ್ಕರ ಪಟ್ಟ ಶ್ರಮ ಅವಳ ಕಣ್ಣ ಮುಂದೆ ತೇಲಿ ಬಂತು. ಈಗಲೂ ಆ ಡಿಪಾರ್ಟ್ ಮೆಂಟ್ ಗಳಿಸುತ್ತಿರುವ ಆದಾಯ ಕಡಿಮೆಯೇನದ್ದಲ್ಲ. ಇಷ್ಟಕ್ಕೂ ಇನ್ನು ಮುನ್ನಾ ದಿನಗಳಲ್ಲಿ ಜಮೀನು ಖರೀದಿಸಿ ಸ್ವತ: ಹಣ್ಣುಗಳನ್ನು ಬೆಳಸುವ ನಿರ್ಧಾರವನ್ನು ಕೂಡ ನಿಖಿಲ್ ಎಂಟರ್ಪ್ರೈಸಸ್ ಮಾಡಿರುವುದರಿಂದ ಸದ್ಯದ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಒಂದು ಡಿಸಿಷನ್ ತೆಗೆದುಕೊಳ್ಳಬೇಕಾದರೆ ಲಾಭ ನಷ್ಟಗಳ ಲೆಕ್ಕ ಹಾಕಿಯೇ ಮುಂದುವರಿಯಬೇಕೆಂದು ಕೊಂಡಿದ್ದವಳು, 'ಸಾರ್ ಎರಡು ದಿವಸಗಳ ಟೈಂ ಕೊಡಿ. ನಾನು ನಿಮಗೆ ತಿಳಿಸುತ್ತೇನೆ' ಎಂದು ಎದ್ದು ನಿಂತಳು.

ಮುಂದುವರಿಯುವುದು...

0 comments:

Post a Comment