ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

     ಭ್ರಷ್ಟಾಚಾರ ಇಂದು ಪ್ರತಿಯೊಂದು ರಂಗದಲ್ಲೂ ಹಾಸು ಹೊಕ್ಕಾಗಿದೆ. ಭ್ರಷ್ಟಾಚಾರ ಎಂದರೆ ಕಾನೂನು ಮೀರಿ ಹಣ ದುರುಪಯೋಗ ಪಡಿಸುವುದು ಎಂದರ್ಥ. ಸರಕಾರದ ಆದಾಯಕ್ಕೆ ಕಡಿಮೆ ಮಾಡುವ ಯಾವುದೇ ರೀತಿಯ ನಡೆಯನ್ನು ಭ್ರಷ್ಟಾಚಾರ ಎಂದು ಗುರುತಿಸಲಾಗಿದೆ. ಭ್ರಷ್ಟಾಚಾರ ಕೇವಲ ಇತ್ತೀಚಿನದಲ್ಲ. ಭಾರತದಲ್ಲಿ ಬಹು ಹಿಂದಿನಿಂದಲೂ ಭ್ರಷ್ಟಾಚಾರದ ಉಲ್ಲೇಖಗಳಿವೆ.
    ಸಾಮವೇದದ  179 ಮತ್ತು 913 ಶ್ಲೋಕದಲ್ಲಿ ಮನುಷ್ಯನ ಭ್ರಷ್ಟಾಚಾರದಂತ ದುರ್ಗು ಣಗಳು ಬೆಳೆಯಲು 99 ಮೂಲಗಳಿವೆ ಎಂದು ತಿಳಿಸುತ್ತದೆ. ಲಂಚಗುಳಿತನವೆಂಬುದು ಭ್ರಷ್ಟಾಚಾರವೆಂಬ ನದಿ ಸೇರಲು ಹಲವಾರು ದುಷ್ಟ ಅಂಶಗಳಿಗೆ ದ್ವಾರವಿದ್ದಂತೆ ಎಂದು ಸ್ಪಷ್ಟಪಡಿಸುತ್ತದೆ.

    ಋಗ್ವೇದದ 1-191-81, 1-28-4, 2-14-3 ಮತ್ತಿತರ ಶ್ಲೋಕಗಳು ಭ್ರಷ್ಟಾಚಾರದ ಕುರಿತು ಉಲ್ಲೇಖಿಸಿದೆ.
    1-42-03 ಶ್ಲೋಕಗಳು ಯಾವೊಬ್ಬ ವ್ಯಕ್ತಿ ತಾನು ಟ್ರಸ್ಟಿಯಾಗಿರುವ ಟ್ರಸ್ಟಿನಲ್ಲಿ ಅಥವಾ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದು, ಸರಕಾರದ ಹಣದ ದುರುಪಯೋಗ, ಸರಕಾರಕ್ಕೆ ಸೇರಿದ ಅಥವಾ ಟ್ರಸ್ಟಿಗೆ ಸೇರಿದ ವಿಷಯದಲ್ಲಿ ಲಂಚ ಪಡೆಯುವುದು ಇಂತಹ ವೈಯುಕ್ತಿಕ ಕೃತ್ಯದಿಂದ ಸರಕಾರದ ಕಂದಾಯದಲ್ಲಿ ಇಳಿಕೆ ಉಂಟಾಗುವುದನ್ನು ಭ್ರಷ್ಟಾಚಾರವೆಂದು ತಿಳಿಸಿದೆ. ಅಲ್ಲದೆ ಇವರನ್ನು ಠಕ್ಕರು ಎಂದು ನಿಂದಿಸುತ್ತದೆ.

    ಋಗ್ವೇದದ 7ನೇ ಮಂಡಲದಲ್ಲಿ ದಶರಾಜ್ಞದ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಹತ್ತು ರಾಜರ ಯುದ್ಧಕ್ಕೆ ಸಂಬಂಧಿಸಿದ ವಿವರಣೆ ಇದೆ. ಸುದಾಸ ಎಂಬುವನು ಭರತ ಬುಡಕಟ್ಟಿಗೆ ಮುಖ್ಯಸ್ಥನಾಗಿದ್ದು, ಇವನಿಗೆ ವಿಶ್ವಾಮಿತ್ರನೆಂಬ ಪುರೋಹಿತನಿದ್ದನು. ವಿಶ್ವಾಮಿತ್ರನು ತಪ್ಪು ಮಾಡಿದ್ದರಿಂದ, ಸುದಾಸನು ಇವನನ್ನು ತೆಗೆದು ಹಾಕಿ ವಶಿಷ್ಟನೆಂಬ ಪುರೋಹಿತನನ್ನು ನೇಮಿಸಿಕೊಂಡನು. ಇದರಿಂದ ವಿಶ್ವಾಮಿತ್ರನು ಕೋಪಗೊಂಡು ಅವನ ಮೇಲೆ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಹತ್ತು ಜನ ರಾಜರನ್ನು ಒಂದುಗೂಡಿಸಿಕೊಂಡು ಸುದಾಸನ ಮೇಲೆ ಯುದ್ಧ ಕೈಗೊಳ್ಳುತ್ತಾನೆ.
ಆಗ ಸುಧಾಸನ ಮಂತ್ರಿಯಾದ ವಶಿಷ್ಟನು ಇಂದ್ರನಿಗೆ ಸೋಮರಸ ನೀಡಿ, ಇಂದ್ರಸ್ತುತಿ ಮೂಲಕ ತನ್ನೆಡೆಗೆ ಒಲಿಸಿಕೊಂಡು ಶತೃಗಳೆಲ್ಲರೂ ರಾವಿ ನದಿಯಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡುತ್ತಾನೆ.
    ಭಗವದ್ಗೀತೆಯಲ್ಲಿ ಮನುಷ್ಯನಲ್ಲಿ ಸಾತ್ವಿಕ ಗುಣ, ರಾಜೋಗುಣ, ಕ್ಷಾತ್ರಗುಣ, ಆಸೆ, ತಾಮಸ ಗುಣಗಳಿರುತ್ತವೆ. ತಾಮಸ ಗುಣ ಇರುವ ವ್ಯಕ್ತಿ ಸೋಮಾರಿತನ, ಆಲಸ್ಯಗಳು ವ್ಯಕ್ತಿ ಮತ್ತು ಸಮಾಜವನ್ನು ಭ್ರಷ್ಟಾಚಾರದತ್ತ ಕೊಂಡೊಯ್ಯಲು ಕಾರಣವಾಗುತ್ತವೆ.

    ರಾಮಾಯಣದಲ್ಲಿ ಬರುವ ರಾವಣನಿಗೆ 10 ತಲೆಗಳಿವೆ. ಇದರಲ್ಲಿ 9 ತಲೆಗಳು ಕೆಟ್ಟವು 1 ತಲೆ ಒಳ್ಳೆಯ ಗುಣದ ತಲೆಯಾಗಿದೆ. ಇದರಿಂದ ರಾಮನು ಲಕ್ಷಣನಿಗೆ 9 ತಲೆಯನ್ನು ಮಾತ್ರ ಕಡಿಯುವಂತೆ ಆದೇಶಿಸುತ್ತಾನೆ. ಇದರಿಂದ ಮನುಷ್ಯನಲ್ಲಿ 9 ರೀತಿಯಾದ ಕೆಟ್ಟಗುಣಗಳಿವೆ ಎಂದು ತಿಳಿಯುತ್ತದೆ.

ಇತಿಹಾಸವನ್ನು ಅಧ್ಯಯನ ಮಾಡುವಾಗ ಸಮಾಜದ ಒಂದು ಭಾಗವಾಗಿ ಪ್ರಾಚೀನ ಕಾಲದ ಅರ್ಥ ವ್ಯವಸ್ಥೆ ಒಂದು ಪ್ರಮುಖ ಸ್ಥಾನ ಪಡೆದುದನ್ನು ನಾವು ಕಾಣಬಹುದು. ನಮ್ಮ ಪ್ರಾಚೀನರಿಗೂ ಒಂದು ಸುವ್ಯವಸ್ಥಿತವಾದ ಸುಖಿ ರಾಜ್ಯದ ಕಲ್ಪನೆಯಿತ್ತು. ಅದು ವ್ಯವಸ್ಥಿತವಾಗಿ ನಡೆಯಲು ಬೇಕಾಗುವ ಅವಶ್ಯಕತೆಗಳ ವಿಚಾರ ಮಾಡುವುದು ಸಹಜ.  ರಾಜ ಮತ್ತು ಮಂತ್ರಿಗಳ ಅಧಿಕಾರಗಳು ರಾಜ್ಯದ ಒಂದು ಪ್ರಮುಖ ಅಂಗವಾಗಿರುವಂತೆ ಕೋಶವೂ ಪ್ರಮುಖವಾಗಿದೆ. ಸಪ್ತಾಂಗದಲ್ಲಿ ಒಂದು ಈ ಕೋಶವು ಯಾವಾಗಲೂ ಸಮೃದ್ಧ ಸುವ್ಯವಸ್ಥಿತವಾಗಿ ಇರಲು ಒಂದು ಅಧಿಕಾರಿಗಳ ಗುಂಪು ಹುಟ್ಟಿಕೊಂಡ ಹಾಗೆಯೇ ಕೋಶಕ್ಕೆ ನಿಯಮಿತವಾಗಿ ಆದಾಯ ಬರುವಂತೆ ಮಾಡಿಕೊಂಡ ವ್ಯವಸ್ಥೆಯೆ ತೆರಿಗೆ ಸಂಗ್ರಹಣೆಯಾಗಿದೆ. ಈ ಅರ್ಥ ವ್ಯವಸ್ಥೆಯ ಸ್ವರೂಪ ಮತ್ತು ಅದರ ಎರಡು ಅಂಗಗಳಾದ ತೆರಿಗೆಯ ಸಂಗ್ರಹಣೆ ಮತ್ತು ಸಾರ್ವಜನಿಕ ವೆಚ್ಚವನ್ನು ಒಳಗೊಂಡಿದೆ.
ಪ್ರಾಚೀನ ಕಾಲದಲ್ಲಿ ಭ್ರಷ್ಟಾಚಾರದ ಸ್ವರೂಪವನ್ನು 3 ವಿಧದಲ್ಲಿ ಗುರುತಿಸ ಬಹುದಾಗಿದೆ.
1) ಅಧಿಕಾರದ ದುರಾಸೆ
2) ಸಂಪತ್ತಿನ ದುರಾಸೆ
3) ಅಧಿಕಾರದ ದುರುಪಯೋಗ
ತತ್ವಜ್ಞಾನಿ, ದಾರ್ಶನಿಕನಾದ ಯಾಜ್ಞವ್ಯಲ್ಕನ ಸ್ಮೃತಿಯಲ್ಲಿ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಗುರುತಿಸಬಹುದಾಗಿದೆ. ಇವನು ಒಳ್ಳೆಯ ಅಧಿಕಾರಿಯನ್ನು ದಾನ ಮತ್ತು ಸನ್ಮಾನದಿಂದ ಸತ್ಕರಿಸಬೇಕು. ದುರಾಚಾರಿಯನ್ನು ಶೋಧಿಸಿ ಶಿಕ್ಷಿಸಬೇಕು. ಲಂಚಗಳನ್ನು ಪಡೆಯುವಂತ ಅಧಿಕಾರಿಯ ಹತ್ತಿರವಿರುವ ಹಣವನ್ನು ವಶಪಡಿಸಿಕೊಂಡು ರಾಜ್ಯದಿಂದ ಹೊರಗೆ ಹಾಕಬೇಕು ಎಂದು ತಿಳಿಸುತ್ತಾನೆ.

    ಕೌಟಿಲ್ಯನೂ ಸಹ ತನ್ನ ಅರ್ಥಶಾಸ್ತ್ರವೆಂಬ ಗ್ರಂಥದಲ್ಲಿ ರಾಜನಾದವನು ತನ್ನ ಅಧಿಕಾರಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೆಲವು ಅಧಿಕಾರಿಗಳು ಭ್ರಷ್ಟಾಚಾರಿಗಳು, ಮೋಸಗಾರರು, ಸುಳ್ಳುಗಾರರಾಗುವ ಸಾಧ್ಯತೆಯಿದ್ದು ಅವರನ್ನು ಸದಾ ಗುಪ್ತ ಮೇಲ್ವಿಚಾರಣೆಯನ್ನು ನಡೆಸುತ್ತಿರಬೇಕು. ಇವರುಗಳು ಲೆಕ್ಕಪತ್ರದಲ್ಲಿ ವ್ಯತ್ಯಾಸ ಮಾಡುವುದು, ಲಂಚಗುಳಿತನ, ಅಂಕಿಗಳ ಮುಂದೆ ಸೊನ್ನೆ ಸೇರಿಸುವುದು ಮುಂತಾದ ಕೃತ್ಯಗಳನ್ನು ಮಾಡುತ್ತಿರುತ್ತಾರೆ. ಇಂತಹ ಅಧಿಕಾರಿಗಳನ್ನು ಸರಿದಾರಿಗೆ ತರಬೇಕು. ಇಲ್ಲವೆ ಅಪರಾಧಗಳನ್ನು ಕಂಡು ಹಿಡಿದು ತಕ್ಕ ಶಿಕ್ಷೆಯನ್ನು ವಿಧಿಸಬೇಕು ಎಂದಿದ್ದಾನೆ. ಇದರಿಂದ ಪ್ರಾಚೀನ ಕಾಲದಲ್ಲಿಯೇ ಭ್ರಷ್ಟಾಚಾರವಿತ್ತು ಎಂದು ತಿಳಿಯಬಹುದು.

    ಮೌರ್ಯರ ಆಸ್ಥಾನದಲ್ಲಿ ವೀರಾಚಾರಿ ಎಂಬಾತನು ಅಧರ್ಮತೆಯ ಸನ್ಯಾಸಿಯಾಗಿದ್ದನು. ಇವನು ಅರಮನೆಯಿಂದ ಪೂಜೆ-ಪುನಸ್ಕಾರ, ಯಜ್ಞದ ಹೆಸರಿನಲ್ಲಿ ಅರಿಷಿಣ, ಕುಂಕುಮ, ಹಣ್ಣು, ಧಾನ್ಯಗಳನ್ನು ಪಡೆದು ಗುಪ್ತವಾಗಿ ಮನೆಗೆ ಸರಬರಾಜು ಮಾಡುತ್ತಿದ್ದರು. ಇದನ್ನು ಪ್ರಧಾನ ಮಂತ್ರಿಯಾದ ಚಾಣುಕ್ಯನು ನಿಲ್ಲಿಸಿದನು. ಇಂಥ ಕಪಟ ಸನ್ಯಾಸಿಗಳನ್ನು ಅರಮನೆಯಿಂದ ಹೊರಹಾಕಿದ್ದರಿಂದ ಬೊಕ್ಕಸದ ಆರ್ಥಿಕ ನಷ್ಟ ಕಡಿಮೆಯಾಗಿ, ಆರ್ಥಿಕ ಸ್ಥಿತಿ ಉತ್ತಮಗೊಂಡಿತು.  ಚಾಣುಕ್ಯನು ತನ್ನ ಮನೆಯಲ್ಲಿ ಅರಮನೆಯ ಕೆಲಸವನ್ನು ನಿರ್ವಹಿಸುವಾಗ ಅರಮನೆಯ ದೀಪವನ್ನು ಉಪಯೋಗಿಸುತ್ತಿದ್ದನು. ತನ್ನ ಸ್ವಂತ ಕೆಲಸದ ಸಮಯದಲ್ಲಿ ತನ್ನ ಮನೆಯ ದೀಪವನ್ನು ಉಪಯೋಗಿಸುತ್ತಿದ್ದನು. ಇದು  ಚಾಣುಕ್ಯನ ಪ್ರಾಮಾಣಿಕತೆಯನ್ನು ತಿಳಿಸುತ್ತದೆ.

    ಭಾರತದ ಮೊದಲ ಐತಿಹಾಸಿಕ ಗ್ರಂಥವಾದ ಕಲ್ಹಣನ 'ರಾಜತರಂಗಿಣಿ' ಗ್ರಂಥದಲ್ಲಿ ಆನಂದ ಎಂಬುವನು ಅಧಿಕಾರಿಗಳಿಗೆ ಹಣವನ್ನು ನೀಡಿ ಹುದ್ದೆಯನ್ನು ಕೊಂಡು ಕೊಂಡನೆಂದು ತಿಳಿಸುತ್ತಾನೆ. ಇದಲ್ಲದೆ ಬಿಜ್ಜ ಎಂಬ ಅಧಿಕಾರಿಯು ಅನೈತಿಕವಾಗಿ ಲಂಚ ಹಣ ಪಡೆದು ರಾಜನಷ್ಟೇ ಶ್ರೀಮಂತಿಕೆಯನ್ನು ಹೊಂದಿದ್ದನೆಂದು ಉಲ್ಲೇಖಿಸಿದ್ದಾನೆ. ಭ್ರಷ್ಟಾಚಾರದಲ್ಲಿ ತೊಡಗಿದಂತಹ ಅಧಿಕಾರಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ತಿಳಿಸುತ್ತಾನೆ.

    ಕ್ರಿ.ಶ 712ರಲ್ಲಿ ಸಿಂದ್ನ ದಾಹಿರ್ನ ರಾಜ್ಯದ ಮೇಲೆ ಅರಬರು ಆಕ್ರಮಣ ನಡೆಸಿದರು. ಅರಬ್ ಸೇನಾನಿ ಮಹಮದ್ ಬಿನ್ ಖಾಸಿಂನು ಸಿಂದ್ನ ಸೈನಿಕರಿಗೆ ಹಣವನ್ನು ನೀಡಿ ತನ್ನೆಡೆಗೆ ಸೆಳೆದುಕೊಂಡನು. ಇದರಿಂದಾಗಿ ಸಿಂದ್ನ ದಾಹಿರನು ಸೋಲಬೇಕಾಯಿತು.
ಗುಪ್ತ ಅರಸರ ಕೊನೆಯ ವೇಳೆಯಲ್ಲಿ ಪ್ರಾಂತ್ಯಾಧಿಕಾರಿಗಳು ಪ್ರಬಲರಾದರು. ಇವರು ತಾವು ಸಂಗ್ರಹಿಸಿದ ತೆರಿಗೆ ಹಣವನ್ನು ಸಂದಾಯ ಮಾಡದೆ ಸ್ವೇಚ್ಛೆಯಾಗಿ ತಾವೆ ಉಪಯೋಗಿಸ ತೊಡಗಿದರು. ಇದರಿಂದಾಗಿ ಆರ್ಥಿಕ ಮುಗ್ಗಟ್ಟು ತಲೆದೋರಿ ಗುಪ್ತರ ಅವನತಿಗೂ ಕಾರಣವಾಯಿತು.

ಕ್ರಿ.ಶ.1176ರಲ್ಲಿ ಘೋರಿ ಮಹಮ್ಮದ್ ರಜಪೂತರು ಆಳುತ್ತಿದ್ದ ಸಿಂದ್ ಪ್ರಾಂತ್ಯದ ಉಚ್ ಪ್ರದೇಶದ ಮೇಲೆ ದಾಳಿ ಮಾಡಿ ವಿಫಲನಾದನು. ಅನಂತರ ಅಲ್ಲಿಯ ರಾಣಿಯೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡು, ರಾಣಿಯಿಂದಲೇ ರಾಜನನ್ನು ಕೊಲ್ಲಿಸಿ, ಸುಲಭವಾಗಿ ಉಚ್ ಪ್ರದೇಶವನ್ನು ವಶಪಡಿಸಿಕೊಂಡನು.

    ದೆಹಲಿ ಸುಲ್ತಾನ ಅಲ್ಲಾ-ಉದ್ದೀನ್ ಖಿಲ್ಜಿಯು ಸೈನ್ಯಕ್ಕೆ ಬೇಕಾದ ಉತ್ತಮ ತಳಿಯ ಕುದುರೆಗಳನ್ನು ಅರೆಬಿಯಾ ಮತ್ತು ಪರ್ಶಿಯಾದಿಂದ ಆಮದು ಮಾಡಿಕೊಳ್ಳುತ್ತಿದ್ದನು. ಆದರೆ ಖಿಲ್ಜಿಯ ಸೈನಿಕರು ಉತ್ತಮ ತಳಿಯ ಕುದುರೆಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಬೇರೆ ಕುದುರೆಗಳನ್ನು ಹೆಸರಿಗೆ ತೋರಿಸುತ್ತಿದ್ದರು. ಅಲ್ಲದೆ ಕುದುರೆಗಳ ಸಂಖ್ಯೆಯನ್ನು ಹೆಚ್ಚು ತೋರಿಸುತ್ತಿದ್ದರು. ವಾರ್ಷಿಕ ಕುದುರೆ ಪರೇಡನಲ್ಲಿ ಇದ್ದ ಕುದುರೆಗಳನ್ನು ಪದೇ ಪದೇ ಸುತ್ತಿಸುತ್ತಿದ್ದರು. ಈ ಮೋಸವನ್ನು ತಡೆಗಟ್ಟಲು ಖಿಲ್ಜಿಯು ಕುದುರೆಗಳಿಗೆ ದಾಗ್ ಅಥವಾ ಬರೆ ಹಾಕುವ ಪದ್ದತಿಯನ್ನು ಜಾರಿಗೆ ತಂದನು. ಇದಲ್ಲದೆ ಸೈನಿಕ ಇಲಾಖೆಯಲ್ಲಿ ದಾಖಲಾತಿಯನ್ನು ಇಡುವ ಪದ್ಧತಿಯನ್ನು ಜಾರಿಗೊಳಿಸಿದನು. ಮಾರುಕಟ್ಟೆಯಲ್ಲಿ ಮೋಸವನ್ನು ತಡೆಗಟ್ಟಲು ಷಹನಾ ಇ ಮಂಡಿ ಎಂಬ ಅಧಿಕಾರಿಯನ್ನು ನೇಮಿಸಿದನು.

    ವಿಜಯನಗರದ ಶ್ರೀ ಕೃಷ್ಣದೇವರಾಯನು ಚಿಕ್ಕವನಿರುವಾಗ, ಅವನ ಚಿಕ್ಕಪ್ಪ ತನ್ನ ಮಕ್ಕಳಿಗೆ ಅಧಿಕಾರ ಸಿಗುವಂತೆ ಮಾಡಲು ಮಂತ್ರಿ ತಿಮ್ಮರಸನಿಗೆ ಶ್ರೀಕೃಷ್ಣ ದೇವರಾಯನನ್ನು ಕೊಂದು ಅವನ ಕಣ್ಣುಗಳನ್ನು ತಂದು ತೋರಿಸುವಂತೆ ಆದೇಶಿಸುತ್ತಾನೆ. ಆದರೆ ತಿಮ್ಮರಸನು ಕೊಲ್ಲದೆ ಅವನನ್ನು ಬಚ್ಚಿಟ್ಟು ಮೇಕೆಯ ಕಣ್ಣುಗಳನ್ನು ತಂದು ತೋರಿಸಿದನು. ಇದು ದೇಶಭಕ್ತಿ, ರಾಜ ಭಕ್ತಿಗೆ ಒಂದು ಉದಾಹರಣೆ.

    ಮಹಮದ್-ಬಿನ್-ತುಘಲಕನ ಅಧಿಕಾರಿಗಳು ಆಡಳಿತದಲ್ಲಿ ಕಂದಾಯ ವಸೂಲಿಯಲ್ಲಿ ಭ್ರಷ್ಟಾಚಾರವೆಸಗುತ್ತಿದ್ದರು. ಇದರಿಂದ ತುಘಲಕನು ಭೂ ಕಂದಾಯದ ಎಲ್ಲಾ ವಿವರಗಳನ್ನಿಡುವಂತೆ ಆದೇಶಿಸುತ್ತಾನೆ. ಇದಲ್ಲದೆ ಮುಲ್ತಾನಿನಲ್ಲಿ ಬರಗಾಲವಾಗಿ ತೀವ್ರ ಸಂಕಷ್ಟಕ್ಕೆ ಜನರು ಒಳಗಾದಾಗ ಆ ಜನರಿಗೆ ಗಂಜಿ ಕೇಂದ್ರಗಳನ್ನು ತೆರೆದನು. ಕೃಷಿಯ ಅಭಿವೃದ್ದಿಗಾಗಿ ಜನರಿಗೆ ಸಾಲ ಸೌಲಭ್ಯ ನೀಡಿದನು. ಬಾವಿಗಳನ್ನು ತೆಗೆಯಲು ಧನ ಸಹಾಯ ಮಾಡಿದನು. ಆದರೆ ಆ ಸೌಲಭ್ಯಗಳನ್ನು ಅಧಿಕಾರಿಗಳು ಜನರಿಗೆ ಮುಟ್ಟಿಸದೆ, ಹಣವನ್ನು ದುರುಪಯೋಗಿಸಿಕೊಂಡರು.

    ಇವನ ಕಾಲದಲ್ಲಿಯೇ ಹಣದ ಕೊರತೆ ಉಂಟಾಗಿದ್ದರಿಂದ ಖಾಸಗಿಯವರಿಗೆ ಚರ್ಮದ ನಾಣ್ಯಗಳನ್ನು ಟಂಕಿಸಲು ಅನುಮತಿ ನೀಡಿದನು. ಅನಂತರ ಗುಪ್ತವಾಗಿ ಜನರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿಕೊಂಡು ನಾಣ್ಯಗಳನ್ನು ಟಂಕಿಸ ತೊಡಗಿದರು.   

    ಮ್ಯಾಥೋಡ್ ಎಂಬ ಪ್ರವಾಸಿಗನು ತನ್ನ ಪ್ರವಾಸ ಕಥನದಲ್ಲಿ ರಾಜ್ಯದ ಭೂಮಿಯು ರಾಜನಿಗೆ ಸೇರಿದ್ದು ರಾಜ್ಯವನ್ನು ಚಿಕ್ಕ ಚಿಕ್ಕ ಜಿಲ್ಲೆಗಳನ್ನಾಗಿ ವಿಂಗಡಿಸಿ, ಗುತ್ತಿಗೆ ಕೊಡುತ್ತಾನೆ. ಆಗ ಗುತ್ತಿಗೆಯನ್ನು ಪಡೆದುಕೊಂಡ ಗುತ್ತಿಗೆದಾರ ರಾಜ್ಯಕ್ಕೆ ತಿಳಿಸದೆ ಹೆಚ್ಚಿನ ಹಣಕ್ಕೆ ಒಳ ಗುತ್ತಿಗೆ ನೀಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಾರೆ ಎಂದು ತಿಳಿಸುತ್ತಾನೆ.

    ಅಕ್ಬರನು ದಿವಾನಿ- ಖಾಸದಲ್ಲಿ ಚರ್ಚೆ ಮಾಡುತ್ತಾ ಜನರ ಅಭಿವೃದ್ಧಿಗಾಗಿ ಎಷ್ಟೊಂದು ಹಣ ಖರ್ಚು ಮಾಡಿದರೂ ಅಭಿವೃದ್ದಿ ಅಗುತ್ತಿಲ್ಲವಲ್ಲ ಎಂದು ಬೀರಬಲ್ಲನಿಗೆ ತಿಳಿಸುತ್ತಾನೆ. ಆಗ ಬೀರಬಲ್ಲನು ದೊಡ್ಡದಾದ ಮಂಜುಗಡ್ಡೆಯನ್ನು ತರಿಸಿ, ಅಕ್ಬರನ ಕೈಯಿಂದ ಆಸ್ಥಾನದ ಎಲ್ಲ ಅಧಿಕಾರಿಗಳ ಕೈಗೆ ವರ್ಗಾಯಿಸಿ ಕೊನೆಗೆ ಅಕ್ಬರನ ಕೈ ಸೇರುವಂತೆ ಮಾಡಿದನು. ಕೊನೆಯಲ್ಲಿ ಅ ಮಂಜುಗಡ್ಡೆಯು ಚಿಕ್ಕದಾಗಿ ಉಳಿದಿತ್ತು. ಆಗ ಬೀರಬಲ್ಲನು ನೀವು ನೀಡಿದ ಹಣ ಅಧಿಕಾರಿಗಳ ಕೈಯಿಂದ ವರ್ಗಾವಣೆ ಆಗುವಾಗಲೆಲ್ಲಾ ಪೋಲಾಗುತ್ತಿದೆ ಎಂದು ತಿಳಿಸಿದನು.

ಷಹಜಹಾನನು ಅಧಿಕಾರದ ಆಸೆಗಾಗಿ ತನ್ನ ತಂದೆಯಾದ ಜಹಾಂಗೀರನನ್ನು, ಜೈಲಿನಲ್ಲಿ ಸೆರೆ ಇರಿಸಿದ್ದ ಉದಾಹರಣೆಯನ್ನು ನಾವು ನೋಡಬಹುದು. ಇದಲ್ಲದೆ ಔರಂಗಜೇಬನು ಸಹ ತನ್ನ ತಂದೆಯಾದ ಷಹಜಹಾನನ್ನು ಸೆರೆಯಲ್ಲಿಟ್ಟು ಅಧಿಕಾರವನ್ನು ಪಡೆದು ಕೊಂಡನು. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ತನ್ನ ಹೆಂಡತಿಯ ನೆನಪಿಗಾಗಿ ಕೋಟಿ ಕೋಟಿ ವೆಚ್ಚದಲ್ಲಿ ತಾಜ್ಮಹಲನ್ನು ನಿರ್ಮಿಸಿದುದು ಭ್ರಷ್ಟಾಚಾರವೇ ಆಗಿದೆ ಎಂಬುದು ಔರಂಗಜೇಬನ ವಾದವಾಗಿತ್ತು.

    ಬಂಗಾಳದ ನವಾಬ ಸಿರಾಜ್ -ಉದ್- ದೌಲ್, ಇವನ ಸೇನಾ ದಂಡನಾಯಕ ಮೀರ್ ಜಾಫರ್ ಆಗಿದ್ದನು. ಮೀರ್ ಜಾಫರನು ಇಂಗ್ಲೀಷರಿಗೆ ತನ್ನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದಾದರೆ ಬ್ರಿಟಿಷರಿಗೆ 1 ಕೋಟಿ ರೂಪಾಯಿಗಳನ್ನು, ಕಲ್ಕತ್ತದಲ್ಲಿದ್ದ ಇತರ ಯುರೋಪಿಯನ್ನರಿಗೆ 50 ಲಕ್ಷ ರೂಪಾಯಿಗಳನ್ನು, ಹಿಂದೂ ವರ್ತಕರಿಗೆ 20 ಲಕ್ಷ ರೂಗಳನ್ನು ನೀಡುವುದಾಗಿ ಗುಪ್ತ ಒಪ್ಪಂದ ಮಾಡಿಕೊಂಡನು. ಇದರಿಂದಾಗಿ ಬ್ರಿಟಿಷರು ಸಿರಾಜ್ ಉದ್ದೀನ್ನ ಮೇಲೆ ಪ್ಲಾಸಿ ಯುದ್ಧ ಕೈಗೊಂಡು ಸೋಲಿಸಿದರು. ಅನಂತರ ಮೀರ್ಜಾಫರ್ನನ್ನು ಕ್ರಿ.ಶ. 1757ರಲ್ಲಿ ಬಂಗಾಳದ ನವಾಬನನ್ನಾಗಿ ನೇಮಿಸಿದರು.

    ಇದರಿಂದ ಪ್ರೇರಣೆಗೊಂಡ ಮೀರ್ ಜಾಫರ್ನ ಸೇನಾಧಿಪತಿಯಾದ ಮೀರ್ ಖಾಸಿಂ ಅಧಿಕಾರ ಆಸೆಯಿಂದಾಗಿ ತನ್ನನ್ನು ಬಂಗಾಳದ ನವಾಬನ್ನಾಗಿ ಮಾಡುವಂತೆ ಬ್ರಿಟಿಷರೊಂದಿಗೆ ಗುಪ್ತ ಒಪ್ಪಂದ ಮಾಡಿ ಕೊಂಡನು. ಇವನು ಕಂಪನಿಗೆ 50 ಲಕ್ಷ ರೂಪಾಯಿಗಳನ್ನು ವಾನ್ಸಿಟಾರ್ಟ್ ನನಿಗೆ 50 ಸಾವಿರ ಪೌಂಡ್ಗಳನ್ನು, ಹೋಲ್ವೆಲ್ಲರಿಗೆ 27 ಸಾವಿರ ಪೌಂಡ್ಗಳು, ಕೌನ್ಸಿಲ್ನ ಇಬ್ಬರು ಸದಸ್ಯರಿಗೆ 25 ಸಾವಿರ ಪೌಂಡುಗಳನ್ನು ಕೊಡುವುದಾಗಿ ಒಪ್ಪಂದ ಮಾಡಿಕೊಂಡನು. ಇದರಿಂದಾಗಿ ಮೀರ್ ಜಾಫರನನ್ನು ತೆಗೆದು ಹಾಕಿ ಮೀರ್ ಖಾಸಿಂನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
    ಬ್ರಿಟಿಷ್ ಅಧಿಕಾರಿಗಳು ಕೂಡಾ ಲಂಚಗುಳಿತನದಿಂದ ಹೊರತಾಗಿರಲಿಲ್ಲ. ಅವರು ಕಾಣಿಕೆ ರೂಪದಲ್ಲಿ ಪಡೆಯುತ್ತಾರೆ.
ಬ್ರಿಟಿಷ್  ಪಾರ್ಲಿಮೆಂಟ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು ಯಾರಿಂದಲೂ ಕಾಣಿಕೆಗಳನ್ನು ಸ್ವೀಕರಿಸುವಂತಿಲ್ಲ ಎಂಬ ಕಾನೂನನ್ನು ಕ್ರಿ.ಶ. 1773ರ ರೆಗ್ಯುಲೇಟಿಂಗ್ ಕಾಯಿದೆಯಲ್ಲಿ ಜಾರಿಗೆ ತರಲಾಯಿತು.
    ಕಂಪನಿಯ ಗವರ್ನರ್ ಜನರಲ್ ಆದ ವಾರನ್ ಹೇಸ್ಟಿಂಗ್ಸನು ಮೀರ್ ಜಾಫರನ ಹೆಂಡತಿಯಿಂದ 3.5 ಲಕ್ಷ ರೂಪಾಯಿಗಳನ್ನು, ಮುರ್ಷದಾಬಾದಿನ ಬೇಗಂಳಿಂದ 1.5 ಲಕ್ಷ ರೂಗಳನ್ನು ಲಂಚವಾಗಿ ಪಡೆದಿದ್ದಾನೆಂದು ಬ್ರಾಹ್ಮಣ ನಂದಕುಮಾರನು ಅಪಾದಿಸುತ್ತಾನೆ.  ಇಂತಹ ಅಪಾದನೆಗಳು ಹೆಚ್ಚಾಗಿದ್ದರಿಂದ ಕ್ರಿ.ಶ. 1785ರಲ್ಲಿ ಬ್ರಿಟನ್ ಪಾಲಿಮೆಂಟ್ ಇವನನ್ನು ವಾಪಾಸ್ ಇಂಗ್ಲೆಂಡಿಗೆ ಕರೆಸಿಕೊಂಡಿತು.

ಹೈದರಾಲಿಯು ಚಿತ್ರದುರ್ಗದ ಮೇಲೆ ಅಕ್ರಮಣ ಮಾಡಿದಾಗ, ಇಲ್ಲಿನ ಕೋಟೆಯನ್ನು ವಶಪಡಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಹೈದರಾಲಿಯು ಚಿತ್ರದುರ್ಗ ಸೈನಿಕರಿಗೆ ಅಮಿಷಗಳನ್ನು ನೀಡಿ ಕೋಟೆಯ ಗುಪ್ತ ಮಾರ್ಗವನ್ನು ತಿಳಿದುಕೊಂಡು ಕ್ರಿ.ಶ. 1779ರಲ್ಲಿ 5ನೇ ಮದಕರಿನಾಯಕನನ್ನು ಸೋಲಿಸಿ ಚಿತ್ರದುರ್ಗವನ್ನು ವಶಪಡಿಸಿಕೊಂಡನು.

    ಚಿತ್ರದುರ್ಗದ ನಾಯಕನಾದ ಮದಕರಿ ನಾಯಕನು ಒಮ್ಮೆ ಜೈಲಿಗೆ ಭೇಟಿ ನೀಡಿದನು. ಜೈಲಿನಲ್ಲಿ ಮದಕರಿನಾಯಕ ದಂಡಕದ ಕತೃ ಚಂದ್ರಭೀಮ ಕವಿಯ ಇಂಪಾದ ಹಾಡಿನ ಧ್ವನಿಯನ್ನು ಕೇಳಿದನು. ಅನಂತರ ನಾಯಕನು ಹಾಡುತ್ತಿದ್ದ ವ್ಯಕ್ತಿಯ ಬಳಿಗೆ ಹೋಗಿ, ಯಾವ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದೀಯ ಎಂದು ಕೇಳಿದಾಗ, ಒಮ್ಮೆ ಬರಗಾಲವಾಗಿದ್ದಿತು. ಆಗ ಅರಸರ ಅನುಮತಿ ಇಲ್ಲದೆ ಕಂದಾಯದ ಹಣವನ್ನು ಜನರ ಕೆಲಸ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆಂದು ತಿಳಿಸಿದನು. ಅನಂತರ ನಾಯಕನು ಚಂದ್ರಭೀಮ ಕವಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ತನ್ನ ಆಸ್ಥಾನ ಕವಿಯನ್ನಾಗಿ ಮಾಡಿಕೊಂಡನು.

ಕ್ರಿ.ಶ. 1824ರಲ್ಲಿ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಮತ್ತು ಬ್ರಿಟಿಷರ ನಡುವೆ ಯುದ್ಧ ನಡೆಯಿತು. ಆದರೆ ಚನ್ನಮ್ಮಳನ್ನು ಸೋಲಿಸಲು ಸಾಧ್ಯವಾಗದಿದ್ದಾಗ ಕಿತ್ತೂರಿನ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟ ರಾಯ ಹಣಪಡೆದು ಬ್ರಿಟಿಷರಿಗೆ ನೆರವಾಗುತ್ತಾರೆ. ಇವರ ಸಹಾಯದಿಂದ ಸೆರೆಸಿಗುವಂತಾಯಿತು. ಕಿತ್ತೂರಿನ ನಿಷ್ಟಾವಂತ ಅನುಯಾಯಿ ಆದ ಸಂಗೊಳ್ಳಿ ರಾಯಣ್ಣನು ಅವನ ಅನುಯಾಯಿಗಳ ಒಳಸಂಚಿನಿಂದಾಗಿ ಬ್ರಿಟಿಷರಿಗೆ ಸೆರೆ ಸಿಗುವಂತಾಯಿತು.
    ಮೈಸೂರು ಸಂಸ್ಥಾನಕ್ಕೆ ಸೇರಿದ ನಗರ ಅಥವ ಬಿದನೂರು ಪ್ರಾಂತ್ಯಕ್ಕೆ ಅಪ್ಪಣ ಎಂಬುವನು ಪೌಜುದಾರನಾಗಿದ್ದನು. ಇವನು ಜನರಿಂದ 13 ಲಕ್ಷ ರೂಪಾಯಿಗಳನ್ನು ತೆರಿಗೆಯಾಗಿ ಸಂಗ್ರಹಿಸಿ, 7 ಲಕ್ಷ ರೂಪಾಯಿಗಳನ್ನು ತಾನಿಟ್ಟುಕೊಂಡು ಉಳಿದ 6 ಲಕ್ಷ ರೂ ಹಣವನ್ನು ಒಡೆಯರಿಗೆ ಸಂದಾಯ ಮಾಡಿದನು. ಉಳಿದ ಹಣವನ್ನು ಕೇಳಿದಾಗ ಬರಗಾಲವಿರುವುದರಿಂದ ತೆರಿಗೆ ಮಾಫಿ ಮಾಡಿರುವುದಾಗಿ ತಿಳಿಸಿದನು. ಇದರಿಂದ ಕೃಷ್ಣರಾಜಒಡೆಯರು ಅಪ್ಪಣ್ಣನನ್ನು ಮೇಲ್ವಿಚಾರಣೆಗೆ ಒಳಪಡಿಸಿದಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿತು.
ನಂತರ ಅಪ್ಪಣ್ಣನು ಜನರನ್ನು ಕೂಡಿಸಿ ಕೊಂಡು, ನಗರ ಎಂಬ ಪ್ರದೇಶದಲ್ಲಿ ದಂಗೆ ಎದ್ದನು. ಈ ದಂಗೆಯು ಬೇರೆ ಬೇರೆ ಪ್ರದೇಶಗಳಿಗೆ ವಿಸ್ತರಿಸಿಕೊಂಡಿತು. ನಗರದ ದಂಗೆಯಾಗಿ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಅಧಿಕಾರವನ್ನು ಕಳೆದುಕೊಂಡರು. ಅನಂತರ ಮೈಸೂರು, ಬ್ರಿಟಿಷರು ಆಡಳಿತಕ್ಕೆ ಒಳಪಟ್ಟಿತು.

    1874ರಲ್ಲಿ ಬರೋಡದ ಅರಸ ಮುಲಹರ್ರಾವ್ರ ಆಸ್ಥಾನದಲ್ಲಿ ದಾದಾಬಾಯಿ ನವರೋಜೆಯವರು ದಿವಾನರಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ಬರೋಡದ ವ್ಯವಹಾರವು ಸರಿಯಾಗಿರಲಿಲ್ಲ. ಇವರು ಸುಧಾರಣೆಯನ್ನು ಕೈಗೊಂಡಾಗ ಅಧಿಕಾರಿಗಳು ಅಡ್ಡಿಯುಂಟು ಮಾಡಿದರು. ಅನಂತರ ನವರೋಜಿಯವರ ದಿಟ್ಟ ಕ್ರಮದಿಂದಾಗಿ ಸರಿದಾರಿಗೆ ತರುವಲ್ಲಿ ಯಶಸ್ವಿಯಾದರು. ಅಧಿಕಾರಿಗಳಿಗೆ ನ್ಯಾಯ, ಉದಾರತೆ, ಮಾನವೀಯತೆ ಹಾಗು ನೈತಿಕತೆಯನ್ನು ಅಳವಡಿಸಿಕೊಂಡರೆ ಜನರ ಪ್ರೀತಿಗೆ ಒಳಗಾಗಬಹುದು ಎಂದು ಸಲಹೆ ನೀಡಿದರು.


ಪುರಂದರ ದಾಸರ ಕೀರ್ತನೆಯು ಮುಖ್ಯವಾಗಿದೆ.

ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ
ಜಗದೊಳಿರುವ ಜನರಲ್ಲಿ ಹಗರಣವ ಮಾಡುವುದ ಕಂಡು,
ನಗೆಯು ಬರುತಿದೆ.

'ಕರ್ನಾಟಕ ಸಿಂಹ' ಎಂದೇ ಖ್ಯಾತರಾದ ಗಂಗಾಧರ ರಾವ್ ದೇಶಪಾಂಡೆ ಅಂತವರೇ ಕಾಂಗ್ರೆಸ್ ಸಮಿತಿಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರೆಂದು ಆರೋಪವಿತ್ತು.
    ಕೌಟಿಲ್ಯನ ಇನ್ನೊಂದು ಮಾತನ್ನು ಹೇಳುವುದರ ಮೂಲಕ ಕೊನೆಗೊಳಿಸುವುದು ಸೂಕ್ತ. ಜೇನು ಬಿಡಿಸುವವನು ಜೇನ ಸವಿಯನ್ನು ಸವಿಯದೇ ಇರಲಾರ ನಾಲಿಗೆಯ ಮೇಲಿರುವ ಜೇನು ತುಪ್ಪವನ್ನು ನುಂಗದೆ ಇರಲಾರ ಹಾಗೆಯೇ ಹಣಕಾಸಿನ ವ್ಯವಹಾರದಲ್ಲಿ ನಿರತನಾಗಿರುವ ಅಧಿಕಾರಿ ಹಣವನ್ನು ನುಂಗದೆ ಬಿಡನು ಎಂದಿದ್ದಾನೆ. ಹೀಗೆ ಯಾರು ಎಷ್ಟೇ ಮಾತಾಡಿದರೂ ಬರೆದರೂ ಭ್ರಷ್ಟಾಚಾರದ ಕಬಂಧಬಾಹು ಮಾತ್ರ ವಿಸ್ತರಿಸುತ್ತಲೇ ಇರುವುದು ಮಾತ್ರ ಸತ್ಯ.


ಡಾ. ಪಿ. ನಾಗಭೂಷಣಗೌಡ ಮತ್ತು ಡಾ.ಸಂತೋಷ ಎನ್.ಜಿ,
ಉಪನ್ಯಾಸಕರು
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,                  
ದಾವಣಗೆರೆ ವಿಶ್ವವಿದ್ಯಾಲಯ                    

0 comments:

Post a Comment