ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

೭ ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಸಾಣೂರು ಮುರತಂಗಡಿ ಪ್ರಕೃತಿ ವಿದ್ಯಾಲಯದಲ್ಲಿ ಮಾರ್ಚ್ ೨೩ ರಂದು ನಡೆಯುವ ೭ ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಹರಿದಾಸ, ಜಿನದಾಸ, ಶಿಕ್ಷಕ, ಯಕ್ಷಗಾನ ಕಲಾವಿದ, ಮಹಾಕಾವ್ಯದ ಸಿದ್ಧತೆಯಲ್ಲಿರುವ ೮೧ರ ಹರೆಯದ ಅಂಬಾತನಯ ಮುದ್ರಾಡಿ ಅವರು ಆಯ್ಕೆಯಾಗಿದ್ದಾರೆ.ಹೆಬ್ರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ತಾಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ವಿದ್ವತ್ಪೂರ್ಣ ಭಾಷಣಗಳ ಮೂಲಕ ಗಮನಸೆಳೆದಿದ್ದಾರೆ. ವಿದ್ವತ್ ಪರಂಪರೆಯ ಕೊಂಡಿಯಾಗಿರುವ ಅವರು ಸಾಹಿತ್ಯದ ನಡೆದಾಡುವ ವಿಶ್ವಕೋಶವಾಗಿದ್ದರೂ ತಮ್ಮ ಸಜ್ಜನಿಕೆಗೆ ಪ್ರಸಿದ್ಧರಾಗಿದ್ದಾರೆ.


೩೬ರ ವರ್ಷಗಳ ಕಾಲ ಶಿಕ್ಷಕರಾಗಿದ್ದ ಅವರು ಶಿಕ್ಷಣವಾಣಿ, ಶಿಕ್ಷಣರಂಗ, ಹೆಬ್ಬೇರಿ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.ಮುಂಬಯಿ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಮುಂಬಯಿಯ ಅಭಿಮಾನಿಗಳು ೪೨೫ ಪುಟಗಳ "ಸುಮನಸ" ಅಭಿನಂದನಾ ಗ್ರಂಥದೊಂದಿಗೆ ಅದ್ದೂರಿ ಸನ್ಮಾನ ಮಾಡಿದ್ದಾರೆ.


ಇತ್ತೀಚಿಗೆ ಉಡುಪಿಯ ಶ್ರೀ ಸುಗುಣೇಂದ್ರ ಸ್ವಾಮಿಜಿ ಸಹಿತ ನಾಡಿನ ಖ್ಯಾತ ನಾಮರು ಮತ್ತು ಸಹಸ್ರಾರು ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ಅವರ ಮೇಲೆ ಅಭಿಮಾನಕ್ಕೆ ನಿದರ್ಶನವಾಗಿತ್ತು.
ಕರ್ಣನ ಕುರಿತು ಅವರು ರಚಿಸಿದ ನಾಟಕ "ಪರಿತ್ಯಕ್ತ" ನಾಟಕ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿತ್ತು ಎಂಬುದು ಅವರಿಗೆ ರಾಜಕೀಯದ ವ್ಯಂಗ್ಯ ನೋಟವಿರುವ ಅವರ ದೂರ್ತರಾಜಕೀಯ ನಾಯಕಾಷ್ಟೋತ್ತರ ಶತನಾಮಾವಲೀ ಸಾಹಿತ್ಯ ಸಂದರ್ಭದ ವಿಶೇಷ ಕೃತಿ, ವಿಭಿನ್ನ ಹಾದಿಯ ದರ್ಶನ ಕೃತಿ.


ಯಾದವರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಮಟ್ಟು ಗೋವರ್ಧನ ರಾವ್ ಪ್ರಶಸ್ತಿ, ಮುಂಬಯಿ ಪದವಿಧರ ಯಕ್ಷಗಾನ ಪ್ರಶಸ್ತಿ, ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕುಕ್ಕಿಲ ಕೃಷ್ಣ ಭಟ್ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಪತ್ರಿಕಾ ದಿನದ ಗೌರವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೌರವ, ಅಖಿಲ ಭಾರತ ೭೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ "ಕನ್ನಡ ಶ್ರೀ" ಪ್ರಶಸ್ತಿಸೇರಿದಂತೆ ನೂರಾರು ಪ್ರಶಸ್ತಿ, ಗೌರವಗಳು ಅವರನ್ನು ಹುಡುಕಿ ಕೊಂಡೇ ಬಂದಿವೆ.


ಸಾಹಿತ್ಯ ಗೋಷ್ಠಿಗಳಲ್ಲಿ ಮತ್ತು ಸಮ್ಮೇ:ಳನಗಳಲ್ಲಿ ಪ್ರಬುದ್ಧ ವಿಚಾರಗಳನ್ನು ಮಂಡಿಸಿದ್ದಾರೆ.
ಶಿಕ್ಷಕ ಸಂಘಟನೆಗಳ: ಪದಾಧಿಕಾರಿಗಳಾಗಿ ದುಡಿದ ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅದನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ೨೦೦೮ ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಅವರು ಯಕ್ಷಗಾನ ಪ್ರಸಂಗ ಸಹಿತ ೨೦೦ ಕ್ಕೂ ಮಿಕ್ಕ ಅವರ ಕೃತಿಗಳನ್ನು ಅವರು ಬರೆದಿದ್ದು ಅವುಗಳಲ್ಲಿ ಅರ್ಧದಷ್ಟೆ ಪ್ರಕಟಣೆಯಾಗಿವೆ. ಮುದ್ರಾಡಿಯ ಬಾಬು ಶೆಟ್ಟಿಗಾರ ಮತ್ತು ಬೂಬ ದಂಪತಿಯ ಮಗನಾಗಿರುವ ಅವರ ಮೂಲ ಹೆಸರು ಕೇಶವ.
ಅವರ ಪ್ರಕಟಿತ ಕೃತಿಗಳು
ಮಂಜುಳಗಾನ( ಶಿಶುಗೀತೆಗಳು), ವಿಹಾರ ವಾಟಿಕೆ( ಚತುರ್ದಶಪದಿ), ದರ್ಶನಧ್ವನಿ (ಕವನ ಸಂಕಲನ), ಭಕ್ತ ಕುಚೇಲ, ಅಹಲ್ಯೋದ್ಧಾರ ಮತ್ತು ರಕ್ಮಾಂಗದ (ಏಕಾಂಕ ನಾಟಕಗಳು),
ಉತ್ತುಂಗ ( ಪೊಲ್ಯ ದೇಜಪ್ಪ ಶೆಟ್ಟರ ಜೀವನ ಪರಿಚಯ), ಪ್ರಜಾ ಪ್ರಭುತ್ವೇಶ್ವರ ವಚನ ಶತಕ ( ವಿಡಂಬನಾ ಗೀತೆಗಳು), ವೀರಭದ್ರಸ್ತುತಿ, ಶ್ರೀ ಗುರು ಗೀತಾಮೃತ, ಶ್ರೀದೇವಿ ಭಜನೆಗಳು
(ಭಕ್ತಿ ಗೀತೆಗಳು), ಹೆಸರಿಲ್ಲದವನ ಹೆಸರು ( ಶ್ರೀ ವಿಷ್ಣು ಸಹಸ್ರ ನಮದ ೧೦೮ ನಾಮಗಳ ಅರ್ಥ- ಹಾಡಿನ ರೂಪ), ಮಹಾಸತಿ ಅನುಸೂಯ ಮತ್ತು ಭಕ್ತ ಪ್ರಹ್ಲಾದ (ಯಕ್ಷಗಾನ), ಪರಿತ್ಯಕ್ತ (ನಾಟಕ), ಧೂರ್ತ ರಾಜಕೀಯ ನಾಯಕಕಾಷ್ಟೋತ್ತರ ಶತನಾಮಾವಲೀ (ವಿಡಂಬನಾ ಸಾಹಿತ್ಯ), ಒರತೆ (ಚಿಂತನಾ ಬರಹಗಳು), ಮೃತ್ಯು ಚುಂಬನ (ಸಿನೆಕತೆ),
ಮಹಾಸತಿ ಅನಸೂಯ ಆಡಿಯೋ ಹರಿಕತೆ ಮತ್ತು ಶ್ರೀನಿವಾಸ ಕಲ್ಯಾಣ ವಿಡಿಯೋ ಹರಿಕತೆ ಸೇರಿದಂತೆ ಅನೇಕ ಕೃತಿಗಳ ಮೂಲಕ ಸಾಹಿತ್ಯವಲಯದಲ್ಲಿ ಹೆಸರುಮಾಡಿದ್ದಾರೆ.

0 comments:

Post a Comment