ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

 ರಾಜ್ಯ-ರಾಷ್ಟ್ರ

ಎಲ್ಲೆಡೆ ಮಾನವೀಯತೆ ಮರೆಯಾಗುತ್ತಿರುವ ಈ ಕಾಲದಲ್ಲಿ ರಸ್ತೆ ಅಪಘಾತಗಳಿಗೆ ತುತ್ತಾಗುವ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಅವಧಿಗೆ ಹಾಗೂ 25 ಸಾವಿರ ರೂ. ವರೆಗೆ ಸಮೀಪದ ಸರ್ಕಾರಿ ಅಥವಾ ಖಾಸಗೀ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸುವ ಹರೀಶ್ ಸಾಂತ್ವನ ಯೋಜನೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ  ವಿದ್ಯುಕ್ತ ಚಾಲನೆ ನೀಡುವುದರೊಂದಿಗೆ ರಾಜ್ಯ ಸರ್ಕಾರವು ಸಮಾಜದತ್ತ ತನ್ನ ಮಾನವೀಯತೆಯನ್ನು ಪ್ರದರ್ಶಿಸಿದೆ.ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಯ ಅನುಷ್ಠಾನ ತಾಂತ್ರಿಕ ಕಾರಣಗಳಿಂದ ವಿಳಂಬವಾಯಿತು.

 ಇತ್ತೀಚೆಗೆ ನೆಲಮಂಗಲದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹರೀಶ್ ಎಂಬ ಯುವಕನ ದೇಹ ಇಬ್ಭಾಗವಾದದ್ದು ರಾಷ್ಟ್ರದಲ್ಲೇ ಪ್ರಪ್ರಥಮ ನಗದು ರಹಿತ ಈ ಯೋಜನೆಯ ಮರು ನಾಮಕರಣಕ್ಕೆ ಜೀವ ತುಂಬಿ ಚಾಲನೆ ನೀಡುವಂತಾಯಿತು.

ಸಾಯುವ ಸಂದರ್ಭದಲ್ಲೂ ತನ್ನ ಅಂಗಾಂಗಗಳನ್ನು ದಾನ ಮಾಡಲು ಮುಂದಾದ ಹರೀಶ್ ಅವರ ನೆನಪನ್ನು ಹಸಿರಾಗಿಸಲು ಈ ಯೋಜನೆಗೆ ಹರೀಶ್ ಸಾಂತ್ವನ ಯೋಜನೆ ಎಂದು ಮರು ನಾಮಕರಣ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿ ಸಲಹೆ ಇತ್ತರು.

ಅಪಘಾತಗಳು ಸಂಭವಿಸಿದಾಗ ಮೊದಲ ಒಂದು ತಾಸಿನ ಸುವರ್ಣ ಕ್ಷಣಗಳಲ್ಲಿ ಸಂತ್ರಸ್ತರಿಗೆ ಪರಿಣಾಮಕಾರಿ ಹಾಗೂ ಸೂಕ್ತ ಚಿಕಿತ್ಸೆ ಲಭಿಸಿದಲ್ಲಿ ಜೀವ ಉಳಿಸಲು ಅವಕಾಶವಿದೆ. ಅಪಘಾತದ ದೃಶ್ಯ ಕಂಡೊಡನೆಯೇ ಒಂದು ಆಂಬ್ಯೂಲೆನ್ಸ್ ವಾಹನಕ್ಕೆ ಕರೆ ಮಾಡುವ, ಪೊಲೀಸರಿಗೆ ಸುದ್ದಿ ತಲುಪಿಸುವ ಹಾಗೂ ಸಂತ್ರಸ್ತರಿಗೆ ಧೈರ್ಯ ತುಂಬುವ ಕನಿಷ್ಠ ಸೌಜನ್ಯವನ್ನು ಹಾಗೂ ಮಾನವೀಯ ಮೌಲ್ಯವನ್ನು ಪ್ರದರ್ಶಿಸಬೇಕು ಎಂದು  ಸಿದ್ದರಾಮಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರಸ್ತೆಗಳಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಲ್ಲಿ ಪಾದಚಾರಿಗಳು, ಸೈಕಲ್ ಸವಾರರು ಹಾಗೂ ದಿ-್ವಚಕ್ರ ವಾಹನಗಳ ಸವಾರರು ಸಾವಿಗೀಡಾಗುತ್ತಾರೆ. ಬಡತನದ ಬೇಗೆಯಲ್ಲಿ ಬಳಲುತ್ತಿರುವ, ಮಧ್ಯಮ ವರ್ಗಕ್ಕೆ ಸೇರಿದ ಅಂತಹ ಜನರ ಜೀವವನ್ನು ಉಳಿಸುವುದು ಸರ್ಕಾರದ ಮತ್ತು ಸಮಾಜದ ಕರ್ತವ್ಯ. ಸರ್ಕಾರದ ಈ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರವೂ ದೊರೆಯಬೇಕು. ಅತ್ಯಧಿಕ ವಾಹನಗಳ ದಟ್ಟಣೆ ಇರುವ ಬೆಂಗಳೂರು ಹಾಗೂ ಬೆಳಗಾವಿ ನಗರಗಳಲ್ಲಿ ಅಪಘಾತಗಳ ಪ್ರಮಾಣವು ಹೆಚ್ಚಾಗುತ್ತಿರುವುದು ತಮ್ಮಲ್ಲಿ ತೀವ್ರ ಕಳವಳವನ್ನು ಉಂಟು ಮಾಡಿದೆ ಎಂದರು.

ಭಾರತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ದ್ವಿ-ಚಕ್ರ ವಾಹನಗಳ ಹಿಂಬದಿ ಸವಾರರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವನ್ನು ತಮ್ಮ ಕೇಶ ವಿನ್ಯಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ವಿರೋಧಿಸುವವರೂ ನಮ್ಮಲ್ಲಿದ್ದಾರೆ. ಇಂತಹ ಜನರಿಗೆ ತಮ್ಮ ಜೀವಕ್ಕಿಂತಲೂ ಕೇಶ ವಿನ್ಯಾಸವೇ ಮುಖ್ಯ ಎಂಬುದೇ ಸೋಜಿದ ಸಂಗತಿ ಎಂದು  ಸಿದ್ದರಾಮಯ್ಯ ಅವರು ಅಚ್ಚರಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹರೀಶ್ ಅವರ ತಾಯಿ ಗೀತಾ ಅವರು ತನ್ನ ಮಗನಿಗೆ ಹಾಗೂ ತಮಗೆ ಬಂದೊದಗಿದ ಕಷ್ಟ ಯಾರಿಗೂ ಎದುರಾಗಬಾರದು ಎಂದು ಭಗವಂತನಲ್ಲಿ ಪ್ರಾರ್ಥಿಸಿದರಲ್ಲದೆ, ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವು ಒದಗಿಸುವ ಈ ಯೋಜನೆಗೆ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡ ತಮ್ಮ ಮಗನ ಹೆಸರನ್ನು ಇಡುತ್ತಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ಗೃಹ ಸಚಿವ ಡಾ ಜಿ. ಪರಮೇಶ್ವರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಯು. ಟಿ. ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಲಕ್ಷ್ಮೀನಾರಾಯಣ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಶ್ರೀ ಪಿ ಎಸ್ ವಸ್ತ್ರದ್, ಖ್ಯಾತ ಹೃದ್ರೋಗ ತಜ್ಞ ಡಾ ದೇವೀಶೆಟ್ಟಿ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

0 comments:

Post a Comment