ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಮಚಂದ್ರ ಹೆಗ್ಡೆ  ಆಧುನಿಕ ಜೀವನ ಶೈಲಿ ಹಾಗೂ ಕೆಲವೊಂದು ಜೀವನದ ಅನಿವಾರ್ಯತೆ ನಮ್ಮೊಳಗೆ ನಮ್ಮನ್ನು ಮಾರಿಕೊಳ್ಳುವಂತೆ ಮಾಡುತ್ತಿದೆ..ಇದು ಬಾಂಧವ್ಯ,ಪ್ರೀತಿ,ವಾತ್ಸಲ್ಯ,ಸಂಬಂಧ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡುತ್ತಿದೆ..ಬಾಲ್ಯದಲ್ಲಿ ಹೇಗೊ ಇದ್ದ ನಾವು ಆ ಖುಷಿಯ,ಪ್ರೀತಿಯ,ಕಾಳಜಿಯ ಪ್ರಪಂಚದಿಂದ ದೂರಾಗುತ್ತಿದ್ದೇವೆ..ಇದಕ್ಕೆಲ್ಲ ಕಾರಣ ಏನು? ದೊಡ್ಡವರಾದಾಕ್ಷಣ ಅದನ್ನೆಲ್ಲ ಕಳೆದುಕೊಳ್ಳಬೇಕೆ? ತಾಯಿಯ ಪ್ರೀತಿ,ತಂದೆಯ ವಾತ್ಸಲ್ಯದಿಂದಲೂ ದೂರಾಗಬೇಕೆ? ಬಾಲ್ಯದಲ್ಲಿದ್ದ ಖುಷಿಯನ್ನು ದೂರಾಗಿಸುತ್ತಿದೆ..ಇಲ್ಲ..ಇವನ್ನೆಲ್ಲ ಕಳೆದುಕೊಳ್ಳುವ ಮನಸ್ಸಿಲ್ಲ..ಹಬ್ಬ ಹರಿದಿನ,ನೆಂಟರಿಷ್ಟರ ಬಾಂಧವ್ಯ,ಪ್ರೀತಿ,ಆಟ,ಪಾಠ ಎಲ್ಲವನ್ನೂ ನೆನೆಸಿಕೊಂಡರೇ ಇಷ್ಟು ಖುಷಿ ಇರುವಾಗ ಇನ್ನು ಮತ್ತೆ ಮತ್ತೆ ಅನುಭವಿಸಿದರೆ...???ಗೋಲಿ,ಲಗೋರಿ,ಚಿನ್ನಿದಾಂಡು ಆಡುತ್ತಾ,ಬೆಟ್ಟ ಬೇಣಗಳನ್ನು ತಿರುಗಿತ್ತಾ,ಕುರುಚಲು ಹಣ್ಣುಗಳನ್ನು ತಿನ್ನುತ್ತಾ ಇದ್ದಿದ್ದರ ಖುಷಿಯೇ ಬೇರೆ..ಮಳೆಗಾಲದಲ್ಲಿ ನೆನೆದು ಕ್ರಿಕೆಟ್ ಆಡುವ ಖುಷಿಯೇ ಬೇರೆ..ಗದ್ದೆಯಲ್ಲಿ ಆಡುವ ಆಟ,ಅಲ್ಲೇ ಹೂಳುತ್ತಿದ್ದ ಆಳನ್ನು ಗೋಳೊಯ್ದುಕೊಂಡು ಅವನಲ್ಲಿ ಬೈಸಿಕೊಂಡು ಕೊನೆಗೆ ಅವನನ್ನು ಸಮಾಧಾನಿಸಿ,ತೇಲುವ ಬಂಡಿಯ ಮೇಲೆ ನಿಂತು ಮಜಾ ಅನುಭವಿಸಿ ಬಂದರೆ ಮಾತ್ರ ಸಮಾಧಾನ..ಒದ್ದೆಯಾಗಿ ಬಂದಾಗ ಅಮ್ಮ ಬೈದು ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ತಲೆ ಒರೆಸಿದಾಗ ಅದೊಂದು ರೀತಿಯ ಸಮಾಧಾನ..ಅಣ್ಣನೊಂದಿಗೆ ಜಗಳವಾಡಿ,ಅಣ್ಣನಿಗೆ ಹೊಡೆದು ಗೋಳೊಯ್ದುಕೊಳ್ಳುವುದು,ಅಣ್ಣ ಹೊಡೆತವನ್ನೂ ಸಹಿಸಿಕೊಂಡು ಅಮ್ಮನಲ್ಲಿ 'ನೋಡೆ ಅಮ್ಮಾ..ತಮ್ಮ ಹೊಡೆತಾ' ಎಂದು ಹೇಳುವಾಗ ಆತನ ಮುಗ್ದತನ ಇಷ್ಟವಾಗುತ್ತಿತ್ತು..


ಯಾರದೋ ಗದ್ದೆಯತುದಿಯಲ್ಲಿದ್ದ ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಿದ್ದರಲ್ಲಿರುತ್ತಿದ್ದ ಮಜವೇ ಬೇರೆ..ಸಾಲದೆಂಬಂತೆ ಅವರದೇ ತೋಟದಲ್ಲಿದ್ದ ಮಾವಿನ ಕಾಯಿ ಕದ್ದು ತರುವಾಗ ಸಿಕ್ಕಿ ಬಿದ್ದು,ಅವರಿಂದ ತಪ್ಪಿಸಿಕೊಂಡು ಬಂದಾಗ ಯುದ್ದ ಗೆದ್ದ ಸಂಭ್ರಮ..ಎಲ್ಲೋ ಊರಿನ ಮೇಲೆ ಮಾಡಿದ ತಪ್ಪು ಅಪ್ಪನಿಗೆ ತಿಳಿದು,ಅಪ್ಪ ಹೊಡೆದಾಗ ಮುನಿಸಿಕೊಂಡು,ರಾತ್ರಿಯೂಟ ಮಾಡದೇ ಮನೆಯಿಂದ ಹೊರಹೋಗಿ ಭಯದ ನಡುವೆಯೇ ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡಿದ್ದು..ಅನಂತರ ಅಪ್ಪ ಬಂದು ಪ್ರೀತಿಯಿಂದ ಸಮಾಧಾನ ಮಾಡಿ ಕರೆದುಕೊಂಡು ಹೋದಾಗಲೂ ಊಟಮಾಡದೇ ಮಲಗಿ,ಮಧ್ಯರಾತ್ರಿ ಹಸಿವಾದಾಗ ಅಮ್ಮ ರಾತ್ರಿಯನ್ನೂ ಲೆಕ್ಕಿಸದೇ ಕೊಡುತ್ತಿದ್ದ ಕೈತುತ್ತನ್ನು ಈಗಲೂ ಒಮ್ಮೆ ತಿನ್ನಬೇಕಿತ್ತು..ಆ ನಿಸ್ವಾರ್ಥ ಪ್ರೀತಿ,ಮಮತೆಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ..
ಶಾಲೆಗೆ ಹೋಗಿ ಮನೆಗೆ ಬಂದಾಗ ಅಮ್ಮನನ್ನು ಕಾಣದೇ ಮನೆಯಿಡೀ ಹುಡುಕಿ,ಕೂಗಿ ಕೂಗಿ ಕರೆದಾಗಲೂ ಅಮ್ಮ ಕಾಣದಿದ್ದಾಗ ಮನದಲ್ಲೇ ದುಃಖ..ಕೊನೆಗೆ 'ಮಗನೇ ಇಲ್ಲೆ ಇದ್ನೋ' ಎಂದು ಹಿತ್ತಲಿನಿಂದ ಅಮ್ಮನ ಸ್ವರ ಕೇಳಿದಾಗ ಹಿಡಿಯಲಾರದಷ್ಟು ಆನಂದ..ಅಮ್ಮ ಮಾಡಿದ ತಿಂಡಿ ತಿಂದು,ಸಂಜೆಯ ಬಾಯಿಪಾಠ ಹೇಳಿ ಅಮ್ಮನ ಕೈತುತ್ತನ್ನು ತಿಂದು ಅಮ್ಮನ ಮಡಿಲಲ್ಲೆ ನಿದ್ರೆ ಹೋದರೆ ಬೆಳಗಾಗುತ್ತಿದ್ದಿದ್ದರ ಪರಿವೆಯೇ ಇರುತ್ತಿರಲಿಲ್ಲ..
ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಸೇರುತ್ತಿದ್ದ ಜನ,ಎಲ್ಲರೂ ಸೇರಿ ಮಾಡುತ್ತಿದ್ದ ಪೂಜೆ,ಮಕ್ಕಳ ಆಟ,ಹರಟೆ,ರಾತ್ರಿ ಎಲ್ಲರೂ ಸೇರಿ ಆಡುತ್ತಿದ್ದ ಇಸ್ಪೀಟಿನ ಗಮ್ಮತ್ತು ಎಲ್ಲವೂ ಇರುತ್ತಿತ್ತು..ಇದು ನಮ್ಮೊಳಗಿನ ಬಾಂಧವ್ಯ ಪ್ರೀತಿ ಹೆಚ್ಚಿಸುತ್ತಿದ್ದವು..

     ಆದರೆ ಇವುಗಳನ್ನೆಲ್ಲ ಎಲ್ಲಿ ಹುಡುಕುವುದು??
ಇಂತಹ ಸಂತಸದ ಕ್ಷಣಗಳನ್ನು ನಮ್ಮ ಮಕ್ಕಳು ಅನುಭವಿಸಿದ್ದಾರೆಯೇ?
ನಾವೆಲ್ಲ ತಂದೆತಾಯಿಯರ ಪ್ರೀತಿ ವಾತ್ಸಲ್ಯ,ಬಂಧುಗಳ ಸಹಕಾರಗಳಿಲ್ಲದೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿತ್ತೆ?'ದೊಡ್ಡವರಾದಾಕ್ಷಣ ಚಿಕ್ಕಂದಿನಲ್ಲಿ ಅನುಭವಿಸಿದ ಪ್ರೀತಿ ವಾತ್ಸಲ್ಯದಿಂದ ದೂರಾಗಬೇಕೆ? ನಮ್ಮ ಆಫೀಸು,ಕೆಲಸದ ಮಧ್ಯ ನಮ್ಮ ಮಕ್ಕಳಿಗೂ ಇಂತಹ ಖುಷಿಯ ಕ್ಷಣಗಳಿಂದ ದೂರವಾಗಿಸಬೇಕೆ?
ನಾವು ಆಡಿದ ಆಟ ಪಾಠ ಸಂಸ್ಕೃತಿ,ಸಂಸ್ಕಾರದ ಅರಿವನ್ನು ನಮ್ಮ ಮಕ್ಕಳಿಗೂ ನೀಡಬಾರದೇ? ಅಥವಾ ಆಧುನೀಕತೆಯಲ್ಲಿ ಸಂಬಂಧಗಳೆಲ್ಲವೂ ನಿಷಿದ್ಧವೇ? 

ಈಗಿನ ಮಕ್ಕಳಿಗೆ ಸಂಬಂಧ, ಸಂಸ್ಕಾರಗಳ ಅರಿವೇ ಇಲ್ಲವಾಗಿದೆ..
ಹಾಗಂತ ದೊಡ್ಡವರಾದ ಮೇಲೆ ಆಟವಾಡಬೇಕೆಂದು ಹೇಳುತ್ತಿಲ್ಲ..ಕನಿಷ್ಠ ಪಕ್ಷ ಹಬ್ಬಹರಿದಿನಗಳಲ್ಲಾದರೂ ಎಲ್ಲರೂ ಬೆರೆಯಬೇಕು..ನಾವು ಪಡೆದ ಸಂಸ್ಕಾರದ ಅರಿವನ್ನು ಮಕ್ಕಳಿಗೂ ತಿಳಿಯುವಂತೆ ಮಾಡಬೇಕು..ಸಂಬಂಧಗಳ ಅರಿವು ಮೂಡಿಸಬೇಕು..ನಾವು ಚಿಕ್ಕಂದಿನಲ್ಲಿ ಪ್ರೀತಿಯಿಂದ ಬೆಳೆಸಿದ ತಂದೆ ತಾಯಿಯರನ್ನು ಸಂತೋಷದಿಂದ ಇಡಲು ಸಾಧ್ಯವಾಗದಿದ್ದರೆ ಎಂತಹ ಸಾಧನೆ ಮಾಡಿಯಾದರೂ ಏನು ಪ್ರಯೋಜನ..?? ಸಂತೋಷದ ಮೂಲವನ್ನು ಬೇರೆಲ್ಲೂ ಹುಡುಕಿಕೊಂಡು ಹೋಗಬೇಕಿಲ್ಲ..ನಾವೂ ಅವರೊಂದಿಗೆ ಬೆರೆತಾಗ ತಂದೆತಾಯಿಯರಿಗೂ ಸಂತೋಷ..ಮಕ್ಕಳಲ್ಲಿಯೂ ಸಂಸ್ಕೃತಿ ಸಂಸ್ಕಾರಗಳ ಅರಿವು ಮೂಡುತ್ತದೆ..ಬಾಲ್ಯದ ಖುಷಿ, ಸಂತೋಷ, ಪ್ರೀತಿ ವಾತ್ಸಲ್ಯಗಳೂ ಸಿಗುತ್ತದೆ.
ಒಟ್ಟಿನಲ್ಲಿ "ಪ್ರಭುದ್ಧತೆಯೊಳಗೊಂದು ಬಾಲ್ಯವನ್ನು ಕಂಡುಕೊಳ್ಳಬೇಕು" ಎಂಬುದು ನನ್ನ ಅನಿಸಿಕೆ...
ನೀವೇನ್ಹೇಳ್ತೀರಾ...?????

1 comments:

Vinayak Bhat said...

ಸೂಪರ್..ಒಳ್ಳೆಯ ಬರಹ

Post a Comment