ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಪ್ರಿಯ ಓದುಗ ಮಿತ್ರರೇ...ನಮ್ಮ ಸಹ ಸಂಸ್ಥೆ ವಾರ್ತೆ.ಕಾಂ ನ ವಿಶೇಷ ವಾರ್ತೆ ವಾರದ ಅತಿಥಿಯ ಮನದ ಮಾತು ಇದೀಗ ಈಕನಸು.ಕಾಂ ಓದುಗರಿಗಾಗಿ ನಾವಿಲ್ಲಿ ನೀಡುತ್ತಿದ್ದೇವೆ. ನೀವೂ ಓದಿ...ಅಭಿಪ್ರಾಯಿಸಿ...


ಅಪ್ಪಟ ಗೋ ಪ್ರೇಮಿ ಕ.ದಾ.ಕೃಷ್ಣರಾಜು
ವಾರ್ತೆ ವಾರದ ಅತಿಥಿಯಾಗಿ ಗೋ ಪ್ರೇಮಿ
ಸಂದರ್ಶನಃ ಹರೀಶ್ ಕೆ.ಆದೂರು.

ಬಾಗಿಲೊಳು ಕೈಮುಗಿದು ಒಳಗೆಬಾ ಯಾತ್ರಿಕನೆ.. ಈ ಮಾತು ಅಕ್ಷರಶಃ ಈ `ಸರಕಾರಿ’ ಕಚೇರಿಗೆ ಒಪ್ಪುತ್ತದೆ… ಅಲ್ಲಿ ಗಬ್ಬು ನಾಥವಿಲ್ಲ..ಬದಲಾಗಿ ದೇಸೀ ಗೋವಿನ ಉತ್ಪನ್ನಗಳ ಪರಿಮಳವಿದೆ… ದೂಳು ತುಂಬಿದ ಕಡತಗಳಿಲ್ಲ ಬದಲಾಗಿ ರೈತರಿಗೆ ಮಾಹಿತಿನೀಡುವ ರಾಶಿ ರಾಶಿ ಅನರ್ಘ್ಯ ಹೊತ್ತಗೆಗಳಿವೆ… ಉಪಯೋಗಶೂನ್ಯವಾಗಿರುವ ವಸ್ತುಗಳಿಲ್ಲ…ಒಂದೊಂದು ವಸ್ತುವೂ ಒಂದೊಂದು ಕಥೆಗಳನ್ನು ಹೇಳುವಂತಹ ದೇಸೀಗೋವಿನ ಪರಿಕರವಿದೆ… ಅಯ್ಯೋ ಇದೆಲ್ಲಾ ಎಲ್ಲಿ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬೇಕಲ್ಲವೇ…ಹೌದು ಅದೊಂದು ಅಪ್ಪಟ ಗೋವಿನ ಮ್ಯೂಸಿಯಂ… ದೇಸೀಗೋವಿನ ಕುರಿತಾದ ಸಮಗ್ರ ಅಧ್ಯಯನವೇ ನಡೆದಂತಹ ಗೋ ಮ್ಯೂಸಿಯಂ…ಇದಿರೋದು ಮೂಡುಗೆರೆ ತಾಲೂಕಿನ ದಾರದಹಳ್ಳಿ ಎಂಬ ಕುಗ್ರಾಮವೊಂದರಲ್ಲಿ.
manada mathu-go sevaka vaarte edit

ಈ ಕುಗ್ರಾಮ ಇಂದು ವಿಶ್ವಕ್ಕೆ ಆಕರ್ಷಣೆಯ ತಾಣವಾಗಿದೆ. ವಿಶ್ವದ ನಾನಾ ಕಡೆಯ ವಿಜ್ಞಾನಿಗಳು, ಅಧ್ಯಯನಾಸಕ್ತರು, ಗೋ ಪ್ರೇಮಿಗಳು ಇಂದು ದಾರದಹಳ್ಳಿಯತ್ತ ಮುಖಮಾಡಿದ್ದಾರೆ. ಚಿಕ್ಕಮಗಳೂರಿನ ದಾರದಹಳ್ಳಿ ಇಂದು ರಾಷ್ಟ್ರ – ಅಂತಾರಾಷ್ಟ್ರ ಮಟ್ಟದಲ್ಲಿ ಫೇಮಸ್… ಸರ್ಕಾರಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಗೋಮ್ಯೂಸಿಯಂ ಆಗಿ ಪರಿವರ್ತನೆಯಾದ ಕಥೆ ಇದು.  ಇದರ ಹಿಂದಿರುವ ಶಕ್ತಿ ಇಲ್ಲಿನ ಹಿರಿಯ ಪಶುವೈದ್ಯ ಪರೀಕ್ಷಕ ಅಪ್ಪಟಗೋ ಪ್ರೇಮಿ ಕ.ದಾ.ಕೃಷ್ಣರಾಜ್ . ಇವರು ಎಲ್ಲರಂಥಲ್ಲ. ಸರಕಾರಿ ಅಧಿಕಾರಿಗಳೆಂದರೆ ಭ್ರಷ್ಟಾಚಾರ, ಲಂಚಾವತಾರ…ಆದರೆ ಈ ಅಧಿಕಾರಿ ಇದಕ್ಕೆಲ್ಲಾ ತದ್ವಿರುದ್ಧ …ಅವರ ದೇಹದ ಕಣ ಕಣದಲ್ಲೂ `ಭಾರತೀಯ ಗೋವಿನ’ ವಿಚಾರಗಳೇ ತುಂಬಿವೆ. ಅಪ್ಪಟಗೋಪ್ರೇಮಿ, ಗುರುಭಕ್ತ. ಭೇದವಿಲ್ಲ ಹಾಲಿಗೆ, ಗಂಜಲಕ್ಕಿಲ್ಲ ಮೈಲಿಗೆ, ದೋಷವಿಲ್ಲ ಸೆಗಣಿಗೆ, ಪಾಪವಿಲ್ಲ ಪೂಜೆಗೆ, ಕರುಣೆಯಿರಲಿ ಗೋವಿಗೆ,ಋಣಿಯಾಗಿರುವ ಗೋವಿಗೆ ಎಂಬ ಮಂತ್ರ ಜಪಿಸುತ್ತಾ ತನ್ನ ಕಚೇರಿಯಲ್ಲೇ ಗೋ ಲೋಕದ ಸೃಷ್ಟಿಮಾಡಿದ ಮಾಂತ್ರಿಕ. ಇಲಾಖೆ, ಸರಕಾರ, ಸಂಘ ಸಂಸ್ಥೆಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಇವರ ಸಾಧನೆ ಯುವ ಜನತೆಗೊಂದು ಸ್ಫೂರ್ತಿ. ಇವರು ಇಂದಿನ ವಾರ್ತೆ ವಾರದ ಅತಿಥಿ… ಇವರೊಂದಿಗಿನ ಮಾತುಕತೆಯ ಆಯ್ದ ಭಾಗ ನಮ್ಮ ಓದುಗರಿಗಾಗಿ…
ಅಪ್ಪಟಗೋಪ್ರೇಮಿ ಕೃಷ್ಣರಾಜು ಇವತ್ತು ವ್ರತಸ್ಥರಾಗಿದ್ದಾರೆಯೇ…?
ಹೌದು…
ಕಾರಣ…?
ಕೇದಾರನಾಥ ಹಾಗೂ ಬದರೀನಾಥಕ್ಕೆ 22ಕಿಲೋಮೀಟರ್ ದೂರವನ್ನು ಬರಿಕಾಲಲ್ಲಿ ಕ್ರಮಿಸಿದ್ದಲ್ಲದೆ ಭಾರತೀಯ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು, ಭಾರತದಲ್ಲಿ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವಂತಾಗಬೇಕೆಂಬ ಸಂಕಲ್ಪವನ್ನೂ ಕೈಗೊಂಡಿದ್ದೇನೆ.ಈ  ಸಂಕಲ್ಪ ಈಡೇರಬೇಕು. ಅಲ್ಲಿಯ ತನಕ ಸಂಪೂರ್ಣ ವ್ರತಸ್ಥನಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದೇನೆ.
ಶೃಂಗ ಕಹಳೆಯ ಹಿನ್ನಲೆ…
ಇಂತಹ ಕಹಳೆ ಬೇರೆಲ್ಲೂ ಭಾರತದಲ್ಲಿಲ್ಲ. ನಾಲ್ಕೂವರೆ ಅಡಿ ಉದ್ದದ ಕಾಂಕ್ರೀಜ್, ಅಮೃತ ಮಹಲ್, ಮಲೆನಾಡ ಗಿಡ್ಡ, ಕಿಲಾರ್ ತಳಿಗಳಕೊಂಬುಗಳನ್ನು ಬಳಸಿ ಮಾಡಲಾದ ಕಹಳೆಇದು. ಇದು ದೇಶಕ್ಕೆ ಹೆಮ್ಮೆ.
manada mathu-go sevaka3
ಇಲಾಖೆಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿದೆಯೇ..?
ಕೃಷಿ ಇಲಾಖೆಯಿರಲಿ, ಪಶುಪಾಲನೆ ಇಲಾಖೆಯಿರಲಿ ಅದು ಕೃಷಿಕರಿಗೆ ಬೇಕಾದ ಸಮರ್ಪಕ ಅರಿವು ನೀಡುವ ಕಾರ್ಯ ಮಾಡಬೇಕು. ದನದಕೊಟ್ಟಿಗೆ ಯಾವದಿಕ್ಕಿನಲ್ಲಿರಬೇಕು, ಗಂಜಲು,ಸೆಗಣಿಯನ್ನು ಯಾವರೀತಿ ಸಮರ್ಪಕ ಬಳಕೆಮಾಡಬೇಕು , ಗೋವಾಧಾರಿತ ಕೃಷಿಯ ಮಹತ್ವಗಳೇನು, ರೈತ ಸ್ವಾವಲಂಬೀ ಬದುಕು ಹೇಗೆ ಸಾಧಿಸಬಹುದು ಎಂಬ ಮಾಹಿತಿ ನೀಡುವಂತಾಗಬೇಕು.
ನೀವೊಬ್ಬ ಸರಕಾರೀ ಅಧಿಕಾರಿ. ಈ ರೀತಿಯ ಕಾರ್ಯ ಹೇಗೆ ಸಾಧ್ಯವಾಗುತ್ತದೆ…?
27ವರ್ಷದಿಂದ ಗೋ ಸೇವೆ ಮಾಡ್ತಾ ಇದ್ದೇನೆ. ತಾಯಿ ಸ್ಥಾನದಲ್ಲಿರುವ ಎಲ್ಲರಿಗೂ ಕಷ್ಟ ಬಂದಿದೆ. ಅವರ ಸೇವೆ ಯಾಕೆ ಮಾಡ್ಬಾರದು ಎಂಬ ಕಲ್ಪನೆ ಬಂತು… ಜಗನ್ಮಾಥೆಯ ಸೇವೆ ಮಾಡುವ ಶಕ್ತಿ ನನಗೆ ಬಂದಾಗ ಅದು ಪುಣ್ಯ ಎಂದು ನಂಬಿದೆ. ನನ್ನಿಂದ ಒಂದು ಗೋವಿನ ಜೀವ ಉಳಿಯುವಂತಾಯಿತು ಎಂದರೆ ಅದಕ್ಕಿಂತ ಪುಣ್ಯ ಬೇರೆ ಇಲ್ಲ.
manada mathu-go sevaka1
ಇಲಾಖೆಯ ಸಹಕಾರ ಇದೆಯೇ…?
ಇಲಾಖೆಯ ಪ್ರೋತ್ಸಾಹ ಇಲ್ಲದೆ ಯಾವುದೇ ಕಾರ್ಯ ಮಾಡಲು ಸಾಧ್ಯವೇ ಇಲ್ಲ. ಅಪವಾದ ಎಂಬಂತೆ ಕೆಲವೊಂದು ಅಧಿಕಾರಿಗಳ ಸಹಕಾರ ಅಪರೂಪಕ್ಕೆ ಸಿಕ್ಕಿರಲಿಲ್ಲ. ಅದು ಮುಖ್ಯವಲ್ಲ. ಇಲಾಖೆ ನನ್ನ ಹಿಂದೆ ಇದ್ದೇ ಇದೆ ಎಂಬ ಧೈರ್ಯ ನನಗಿದೆ. ಅದರಿಂದ ಇದೆಲ್ಲ ಸಾಧ್ಯವಾಯಿತು. ಇದು ಇಲಾಖೆಯ ಕೆಲಸ . ಪಶುಪಾಲನಾ ಇಲಾಖೆಯಲ್ಲಿ ಪಶುವಿಗೆ ಸಂಬಂಧಪಟ್ಟದ್ದು ಮಾಡಲೇ ಬೇಕಲ್ಲವೇ…?ಇಲಾಖೆ ಗೋವಿನದ್ದು. ಇಲ್ಲಾಗುತ್ತಿರುವ ಕಾರ್ಯವೂ ಗೋವಿಗೆ ಸಂಬಂಧಪಟ್ಟದ್ದು. ಗೋವಿಗೆ ಜಾತಿ ಇಲ್ಲ ರಾಜಕೀಯ ಇಲ್ಲ ; ಗೋವು ಮತ್ತು ರೈತನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ.
manada mathu-go sevaka4
ಪ್ರೇರಣೆ ಶಕ್ತಿಯೇನು..?
ಆ ಜಗನ್ಮಾಥೆಯೇ ಪ್ರೇರಣೆ ಆಗಿರಬಹುದು…ನಾನು ನಿಮಿತ್ತಮಾತ್ರ… ನಾನೊಬ್ಬ ಮಾದರಿ ಆಗಬೇಕೆಂಬ ಕನಸು ನನ್ನದು. ದನದ ಆಸ್ಪತ್ರೆಯೆಂದರೆ ದುಡ್ಡುಮಾಡುವ ದಂಧೆಯಾಗಬಾರದು. ರೈತ ಮತ್ತು ಇಲಾಖೆಯ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ . ಇಲಾಖೆಗೆ ಹೆಸರು ಬರುವ ರೀತಿಯ ಕೆಲಸ ಆಗಬೇಕು. ಗೋ ಸೇವೆಯೇ ಗೋವರ್ಧನ ಸೇವೆ, ಗೋ ಪಾಲನ ಸೇವೆ ಎನ್ನುತ್ತಾರೆ. ರೈತನ ಜೇಬು ನೋಡಿ ಕೆಲಸ ಮಾಡುವುದಿಲ್ಲ. ರೈತನ ಕೊಟ್ಟಿಗೆಯೊಳಗೆ ವ್ಯವಸ್ಥೆ ಹೇಗಿದೆ, ಹುಲ್ಲು ದಾಸ್ತಾನು ಹೇಗೆ ನಡೆಯತ್ತದೆ,ದನದ ಸೆಗಣಿ ಮೂತ್ರ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಚಿಂತೆ ಮಾಡುತ್ತೇನೆ. ಗೋವನ್ನಾಧರಿಸಿದ ಕೃಷಿಯ ಬಗ್ಗೆ ಹೆಚ್ಚಿನ ಒತ್ತು ಕೊಡುತ್ತಾ ಬಂದೆ. ಅದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಮಾಡಿದ್ದಲ್ಲ. ನಾನು ಪಾತ್ರದಾರಿ ಸೂತ್ರಧಾರಿ ಯಾರೋ ಗೊತ್ತಿಲ್ಲ.
ಗೋಮ್ಯೂಸಿಯಂ ನಿರ್ವಹಣೆ ಹೇಗೆ…?
ಖರ್ಚು ತುಂಬಾ ಇದೆ.. ಆದರೆ ಯಾರನ್ನೂ ಕೇಳಿಲ್ಲ. ಕೇಳುವುದೂ ಇಲ್ಲ. ಸಂಬಳದಿಂದಲೇ ಇದರ ನಿರ್ವಹಣೆ ಮಾಡುತ್ತಾ ಬಂದಿದ್ದೇನೆ. ರೈತರಿಗೆ ಪ್ರಾಯೋಗಿಕವಾಗಿ ಶಿಕ್ಷಣ ನೀಡುವ ಕಾರ್ಯ ಈ ಗೋಮ್ಯೂಸಿಯಂ ನಲ್ಲಿ ನಡೆಯಬೇಕೆಂಬ ಹಠ ನನ್ನದು. ಗೋವಿನ ಮಹತ್ವಗಳ ಬಗ್ಗೆ  ಧಾರ್ಮಿಕ ,ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ಅರಿವುಕೊಡುವ ಕಾರ್ಯ ಇಲ್ಲಿ ನಡೆಯುತ್ತದೆ.
ಗೋ ಮ್ಯೂಸಿಯಂನ ಭವಿಷ್ಯ…
ಸೇವಾ ನಿವೃತ್ತಿಯ ನಂತರ ಇದನ್ನು ಮುಂದುವರಿಸುವ ತಾಕತ್ತು ನನ್ನಲ್ಲಿಲ್ಲ. ಹಲವು ಮಂದಿಗೆ ಇದರ ಜವಾಬ್ದಾರಿಗಾಗಿ ಅರಿಕೆಮಾಡಿದೆ. ಕೊನೆಗೂ ದಾನಿಗಳೋರ್ವರು ಮುಂದೆಬಂದರು. ಇದಕ್ಕಾದ ಖರ್ಚಿನ ದುಪ್ಪಟ್ಟು ನೀಡಿ ಸೇವಾ ನಿವೃತ್ತಿಯ ಮರುದಿನವೇ ಕೊಂಡೊಯ್ಯುವ ವಿಚಾರದಲ್ಲಿ ಅಗ್ರಿಮೆಂಟ್ ಮಾಡಿಯಾಗಿದೆ. ಸಂತೋಷದಿಂದ ಇದನ್ನು ಕೊಡುತ್ತಿದ್ದೇನೆ. ಗೋ ಮ್ಯೂಸಿಯಂ ಮಾಡಿ ಟಿಕೆಟ್ ಇಟ್ಟು ಹಣ ಮಾಡುವ ಇರಾಧೆ ನನಗಿಲ್ಲ. ನಮ್ಮ ಹಿರಿಯರಕಾಲದ ಅನ್ನದಾತನ ಅದ್ಭುತ ಕಲ್ಪನೆ, ಶಕ್ತಿ ಸಾಮಥ್ರ್ಯ, ಗೋವಿನ ಬಗೆಗಿದ್ದ ಕಾಳಜಿಗಳನ್ನು ಗೋವಿನ ಮಹತ್ವವನ್ನು ಪ್ರಪಂಚದಾದ್ಯಂತ ಸಾರುವ ಕೆಲಸ ನನಗಿದೆ. ರೈತರನ್ನು ಬಡಿದೆಬ್ಬಿಸುವ ಕಾರ್ಯ ಮಾಡುವುದುದಿದೆ. ಇದೆಲ್ಲವೂ ನಿವೃತ್ತಿಯ ನಂತರ ನಡೆಯುತ್ತದೆ.

manada mathu-go sevaka5
ಇವಿಷ್ಟೇ ಅಲ್ಲ. ಕಾ.ದಾ.ಕೃಷ್ಣರಾಜು ಅವರ ಕುರಿತಾದ ಇನ್ನಷ್ಟು ಮಾಹಿತಿಗಳು ನಮ್ಮಲ್ಲಿವೆ. ನಿರಂತರವಾಗಿ ನಮ್ಮ ಓದುಗರಿಗೆ ಅದನ್ನು ತಲುಪಿಸುವ ಕಾರ್ಯ ನಾವು ಮಾಡುತ್ತೇವೆ. ಕಾ.ದಾ.ಕೃಷ್ಣರಾಜು ಅವರ ಗೋ ಮ್ಯೂಸಿಯಂ ಕಥೆ ಮುಂದಿನ ಸಂಚಿಕೆಯಲ್ಲಿ ನಿಮಗೆ ನೀಡುತ್ತೇವೆ.
-ಸಂಪಾದಕ.

0 comments:

Post a Comment