ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶ್ರವಣಬೆಳಗುಳದ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ: ಡಾ.ಹೆಗ್ಗಡೆ
ಹರೀಶ್ ಕೆ.ಆದೂರು
 ಶ್ರವಣಬೆಳಗುಳದಲ್ಲಿ  ನಡೆಯಲಿರುವ ಮಹಾ ಮಸ್ತಕಾಭಿಷೇಕಕ್ಕೆ ಪೂರ್ವಭಾವೀ ತಯಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಸಹ ಅಧ್ಯಕ್ಷ ಶಾಸಕ ಕೆ.ಅಭಯ ಚಂದ್ರ ಜೈನ್ ಶ್ರವಣಬೆಳಗುಳಕ್ಕೆ ಎರಡು ದಿನಗಳ ಭೇಟಿನೀಡಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ನಂತರ  ಈ ಕನಸಿನೊಂದಿಗೆ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು ಪ್ರಸಕ್ತ ಕೆಲಸ ಕಾರ್ಯಗಳು ತೃಪ್ತಿ ತಂದಿವೆ. ಸರಕಾರದ ಅನುದಾನಗಳು ಸೂಕ್ತ ರೀತಿಯಲ್ಲಿ ದೊರೆತ ಹಿನ್ನಲೆಯಲ್ಲಿ ಉತ್ತಮ ಕೆಲಸಗಳು ಈ ಭಾಗದಲ್ಲಾಗಿವೆ. ಅದಕ್ಕಾಗಿ ಸರಕಾರ ಹಾಗೂ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.ಸಾವಿರಾರು ವರ್ಷ ಇತಿಹಾಸ ಹೊಂದಿರುವ ಶ್ರವಣಬೆಳಗುಳದ ಏಕಶಿಲಾ ಬಾಹುಬಲಿ ಮಹಾಮೂರ್ತಿಗೆ ಮಹಾ ಮಜ್ಜನ ನಡೆಯಲಿದ್ದು ವಿಶ್ವದ ಯಾತ್ರಿಕರನ್ನು ಆಹ್ವಾನಿಸಲು ಸಮಸ್ತ ಕರ್ನಾಟಕ ಇಂದು ತುದಿಕಾಲಲ್ಲಿ ನಿಂತಿದೆ. ಸುಮಾರು 500ರಷ್ಟು ಸಂಖ್ಯೆಯಲ್ಲಿ ಆಗಮಿಸಲಿರುವ ಜೈನ ಮುನಿಗಳು, ಸಾದ್ವಿಗಳು, ಭಾಗವಹಿಸಲಿದ್ದಾರೆ. ಇವರೆಲ್ಲರಿಗೂ ಸೂಕ್ತ ವಸತಿ ವ್ಯವಸ್ಥೆಗಳು ಈಗಾಗಲೇ ಪೂರ್ಣಗೊಂಡಿವೆ. ಉಪನಗರಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. 25ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲನುಗುಣವಾಗುವ ರೀತಿಯ ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರ ನೀಡಿದರು. ಈಗಿನ ಕೆಲಸ ಕಾರ್ಯಗಳ ಪ್ರಗತಿಯು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿ ಉತ್ಸಾಹ ತುಂಬಿದೆ ಎಂದವರು ಶ್ಲಾಘಿಸಿದರು.
ವಿಶೇಷ ವ್ಯವಸ್ಥೆ: ಜಿಲ್ಲಾಧಿಕಾರಿ
ಅಶಕ್ತರಿಗೆ, ವಯೋವೃದ್ಧರಿಗೆ ಮಹಾ ಮಜ್ಜನದ ನಿಜದರ್ಶನ ಮಾಡಿಸುವ ಉದ್ದೇಶದಿಂದ ವರ್ಚುವಲ್ ರಿಯಾಲಿಟಿ ತ್ರೀಡೀ ಗ್ಲಾಸ್ ವಿತರಿಸಲಾಗುವುದು ಎಂದು ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಈಗಾಗಲೇ ಮಹಾಮಜ್ಜನದ ಶೇ.70ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಅಟ್ಟಳಿಗೆ ನಿಮರ್ಾಣ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ ಎಂದವರು ಹೇಳಿದರು.
ಶಾಶ್ವತ ಕಾಮಗಾರಿ: ಜೈನ್
ಮಹಾಮಜ್ಜನದ ಸಂದರ್ಭದಲ್ಲಿ ಶಾಶ್ವತ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಶ್ರವಣಬೆಳಗುಳದ ಸ್ವಾಮೀಜಿಗಳ ಅಪೇಕ್ಷೆಯಂತೆ ಇಲ್ಲಿರುವ ಪ್ರಾಕೃತ ವಿಶ್ವ ವಿದ್ಯಾನಿಲಯದ ಅಭಿವೃದ್ಧಿ, ಮೇಲ್ದರ್ಜೆಗೇರಿಸುವ ಕಾರ್ಯಗಳಿಗೆ ಸುಮಾರು 25ಕೋಟಿ ಖರ್ಚು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನೂ ಸುವ್ಯವಸ್ಥಿತವಾಗಿ ಅಣಿಗೊಳಿಸಲಾಗುತ್ತಿದೆ. ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಮಹಾ ಮಸ್ತಕಾಭಿಷೇಕ ಸಮಿತಿಯ ಸಹ ಅಧ್ಯಕ್ಷ ಶಾಸಕ ಕೆ.ಅಭಯಚಂದ್ರ ಜೈನ್  ಮಾಹಿತಿ ನೀಡಿದರು.

ವಿಶ್ವದ ನಾನಾ ಭಾಗಗಳಿಂದ ಬರುವ ಭಕ್ತಾಧಿಗಳಿಗೆ, ಸಾಧು ಸಂತರಿಗೆ, ಜೈನ ಮುನಿಗಳ ವಸತಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 500ಎಕ್ಕರೆ ಭೂಮಿಯನ್ನು ಎರಡು ವರುಷಗಳ ಕಾಲಕ್ಕೆ ಸರಕಾರವು `ಬೆಳೆ ಪರಿಹಾರ' ನೀಡಿ ಸ್ವಾಧೀನ ಪಡಿಸಿದೆ.  ಆ ಸ್ಥಳದಲ್ಲಿ ಉಪನಗರಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು. ರಸ್ತೆಗಳ ಅಭಿವೃದ್ಧಿ, ಸ್ವಚ್ಛತೆ,ಮೂಲಭೂತ ವ್ಯವಸ್ಥೆ,ಕುಡಿಯುವ ನೀರು, ಸಾರಿಗೆ ವ್ಯವಸ್ಥೆ,ಭದ್ರತೆಗಳಿಗೆ ವಿಶೇಷ ಒತ್ತು ನೀಡಲಾಗಿದೆ. 30ಸಾವಿರ ಮಂದಿಗೆ ವಸತಿ ವ್ಯವಸ್ಥೆಗಾಗಿ ವಿಶೇಷ ಡೇರೆಗಳ ನಿರ್ಮಾಣ ಮಾಡಲಾಗಿದೆ ಎಂದರು.
ಶ್ರವಣಬೆಳಗುಳ ಮಹಾ ಮಸ್ತಕಾಭಿಷೇಕದ ವ್ಯವಸ್ಥಾಪನಾ ಅಧಿಕಾರಿ  ವರಪ್ರಸಾದ್ ರೆಡ್ಡಿ  ಜೊತೆಗಿದ್ದರು.


ಮಹಾ ಮಜ್ಜನಕ್ಕೆ ಸಿದ್ಧವಾಗಿರುವ ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡಲು ಅನುಕೂಲವಾಗಲು ಜರ್ಮನ್ ತಂತ್ರಜ್ಞಾನದ ಅಟ್ಟಳಿಗೆ ವ್ಯವಸ್ಥೆಯನ್ನು ಅಣಿಗೊಳಿಸಲಾಗಿದೆ. ಜ.10ರೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೊಸದಿಗಂತಕ್ಕೆ ತಿಳಿಸಿದ್ದಾರೆ.
0 comments:

Post a Comment